ADVERTISEMENT

ನಾಳೆಯಿಂದ ಸಂಗೀತ ಉತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಸುಧಾ ರಘುನಾಥನ್‌, ಕನ್ಯಾಕುಮಾರಿ
ಸುಧಾ ರಘುನಾಥನ್‌, ಕನ್ಯಾಕುಮಾರಿ   

ಭಾರತೀಯ ಸಾಮಗಾನ ಸಭಾದ ವಾರ್ಷಿಕ ಸಂಗೀತೋತ್ಸವವು ಈ ಬಾರಿ  ಫೆ.15ರಿಂದ 19ರವರೆಗೆ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

‘ಪ್ರತಿವರ್ಷ ಒಂದು ಥೀಮ್‌ ಇಟ್ಟುಕೊಂಡು ಸಂಘ ಕಾರ್ಯಕ್ರಮ ನಡೆಸುತ್ತದೆ. ಈ ಬಾರಿ ‘ಅಭಿಜ್ಞಾನ ತ್ಯಾಗರಾಜ ಸಂಗೀತಂ’ ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ತ್ಯಾಗರಾಜರ 250ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಗೀತೋತ್ಸವಕ್ಕೆ ಈಗ ಎಂಟರ ಹರೆಯ’ ಎನ್ನುತ್ತಾರೆ, ಸಂಘದ ರೂವಾರಿ  ಆರ್‌.ಆರ್‌. ರವಿಶಂಕರ್‌.

ಸಂಗೀತವನ್ನು ಆಲಿಸುವುದರಿಂದ ಇರುವ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ‘ಧನ್ವಂತ್ರಿ ರಾಗ ಸರಣಿ ಕಛೇರಿ’ಗೆ ಪ್ರಾಮುಖ್ಯ ನೀಡಲಾಗಿದೆ. ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವ ರಾಗಗಳನ್ನು ಸಂಗೀತೋತ್ಸವದಲ್ಲಿ ಪ್ರಸ್ತುತಪಡಿಸಲಾಗುವುದು’ ಎಂದು ಅವರು ವಿವರಿಸುತ್ತಾರೆ. ಪ್ರತಿದಿನ ಸಂಜೆ ಒಂದು ಗಂಟೆ ಯುವ ಕಲಾವಿದರ ಗಾಯನ ನಡೆಸಲಾಗುತ್ತಿದೆ.

ಭಾನುವಾರ ಬೆಳಿಗ್ಗೆ ತ್ಯಾಗರಾಜ ಮತ್ತು ಪುರಂದರ ಆರಾಧನೆ ನಡೆಯುತ್ತದೆ.  ಸುಧಾ ರಘುನಾಥನ್‌  ಹಾಗೂ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರಿಂದ ಗಾಯನ ಕಾರ್ಯಕ್ರಮವಿದೆ. ಇವೆರಡೂ ಕಾರ್ಯಕ್ರಮಗಳು ದೂರದರ್ಶನ ರಾಷ್ಟ್ರೀಯ ಹಾಗೂ ಚಂದನ ವಾಹಿನಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.

ಪ್ರತಿವರ್ಷ ಸಂಘ ‘ಸಮಾಗಮಾ ಮಾತಂಗ’ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸುಧಾ ರಘುನಾಥನ್‌ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 10ರಿಂದ 11.30 ಮತ್ತು ಸಂಜೆ 5 ರಿಂದ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.