ADVERTISEMENT

ಪ್ರಕಾಶ್‌ ಶೆಟ್ಟಿ ಕಂಡ ‘ಸಿಟಿ ಜನ್ರು’

ಮಕ್ಕಳನ್ನೆಲ್ಲಾ ರಾಜಕಾರಣಿಗಳು ಸಾಕ್ತಾರಾ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಹಾಗೇ ಸುಮ್ಮನೆ ಮಾತಿಗೆ ಸಿಗುವ ಮಂದಿಗೆ ಕೊರತೆ ಇಲ್ಲ. ಕೆಲವೇ ನಿಮಿಷಗಳಲ್ಲಿ ಉಭಯ ಕುಶಲೋಪರಿಯನ್ನೂ ಮೀರಿ ಅವರವರ ಆಸಕ್ತಿ. ಒಲವು–ನಿಲುವು, ವಿಚಾರಗಳವರೆಗೆ ಮಾತುಕತೆ ವಿಸ್ತರಿಸುವುದುಂಟು. ಹಾಗೆ ಮಾತಿಗೆ ಸಿಗುವವರಲ್ಲಿ ಕೆಲವು ಚಹರೆಗಳು ‘ಕ್ಯಾರಿಕೇಚರ್‌’ಗೆ ಯೋಗ್ಯ ಅನಿಸಿಬಿಡುತ್ತದೆ. ಹಾಗೆ ತಮ್ಮ ಮಾತು, ಚಹರೆ ಎರಡರ ಮೂಲಕ ದಕ್ಕುವ ಸಾಮಾನ್ಯರ ಮನದನಿ ಇದು. ಪ್ರತಿ ಶುಕ್ರವಾರದ ವಿಶೇಷ. ಈ ಸಲ ವಿಜಯಾ ಬ್ಯಾಂಕ್ ಬಡಾವಣೆಯ ಅಂಬುಜ ನಾಯಕ್
‘ಕ್ಯಾರಿಕೇಚರ್’ ಆಗಿದ್ದಾರೆ.

* ಬೆಂಗಳೂರಿನಲ್ಲಿರುವುದು ಒಂದು ಯೋಗವೋ, ಭಾಗ್ಯವೋ ಅಲ್ಲ, ದೌರ್ಭಾಗ್ಯವೇ?
ಅದೆಲ್ಲ ಏನೂ ಗೊತ್ತಿಲ್ಲ. ಆದರೆ ಬೆಂಗಳೂರಿನಲ್ಲಿದ್ದ ಮೇಲೆ ಯೋಗ ಮಾಡಿದರೆ ಒಳ್ಳೆಯದು. ನಾನು ದಿನಾ ಯೋಗಾಭ್ಯಾಸ ಮಾಡುತ್ತೇನೆ. ಹೇಗೆ ಫ್ರೆಶ್ ಆಗಿರುತ್ತೇವೆ ಅಂದರೆ...

* ಫ್ರೆಶ್ ಮೀನಿನಷ್ಟು... ಅಲ್ಲ.. ಕ್ಷಮಿಸಿ, ನೀರಿನಲ್ಲಿ  ಓಡಾಡುವ ಮೀನಿನಷ್ಟು ಅನ್ನಿ!
ಯೋಗ ಮಾಡುವವರು ಮೀನು ತಿಂದರೆ ಇನ್ನೂ ಒಳ್ಳೆಯದಂತೆ. ಜಾಸ್ತಿ ಫ್ರೆಶ್ ಆಗಿರಬಹುದು !

* ಸರಿ, ಯೋಗ ಕ್ಲಾಸಿಗೆ ಹೋಗುತ್ತಿದ್ದೀರಿ ಎಂದು ತಿಳಿಯಿತು. ಹಿಂದೆ ಶಾಲೆಯಲ್ಲಿ ಕಲಿತ ವಿದ್ಯಾಭ್ಯಾಸವನ್ನು ಮರೆತು ಬಿಟ್ಟರೆ ಬೇರೆ ಏನು ನೆನಪಾಗುತ್ತೆ?
ಗೇಮ್ಸ್! ತ್ರೋ ಬಾಲ್ ನನ್ನ ಇಷ್ಟದ ಆಟ. ಇನ್ನು ನಾನು ನಾಟಕದಲ್ಲಿ ದುಶ್ಯಾಸನ, ರಾಮನ ಪಾತ್ರದಲ್ಲಿ ನಟಿಸಿದ್ದು ನೆನಪಿನಲ್ಲಿದೆ.

* ಮನೆಯಲ್ಲಿ ಮನುಷ್ಯರು ಬಿಟ್ಟರೆ ಬೇರೆ ಯಾರಿದ್ದಾರೆ?
ನಮಗೆ ಇಲ್ಲಿ ಊರಿನಲ್ಲಿರುವಂತೆ ನಾಯಿ, ಬೆಕ್ಕುಗಳನ್ನು ಸಾಕುವ ಹಾಗಿಲ್ಲ. ನಿಜ ಹೇಳ್ಬೇಕೂಂದರೆ ಮನೆಯಲ್ಲಿ ಬೆಕ್ಕುಗಳು ಇದ್ದರೆ ಒಳ್ಳೆಯದು. ನಾವು ಅವುಗಳ ಜತೆ ಮಾತನಾಡಬಹುದು. ಅವುಗಳು ನಮ್ಮ ಜತೆ ಹೇಗೆ ಸಂಪರ್ಕ ಇಟ್ಟುಕೊಳ್ಳುತ್ತೆ ಅನ್ನುವ ಖುಷಿಯೇ ಬೇರೆ.

* ನಾಯಿ, ಬೆಕ್ಕು ಇಲ್ಲ ಅಂದಿರಿ. ಎಟ್ ಲೀಸ್ಟ್, ಜಿರಲೆ, ಹಲ್ಲಿ, ಇರುವೆಗಳನ್ನೂ ಸಾಕೋಲ್ವೇ?
ಇಲ್ಲ! ಅಂತಹುಗಳಿಗೆ ನಮ್ಮ ಮನೆಯಲ್ಲಿರುವುದಕ್ಕೆ ಅನುಮತಿ ಕೊಟ್ಟಿಲ್ಲ.

* ನಮ್ಮ ರಾಜ್ಯದ ಭವಿಷ್ಯ ಕನ್ನಡ ಹೋರಾಟಗಾರ ಸಂಘಟನೆಗಳ ಕೈಯಲ್ಲಿದೆ ಅಂತಿರಾ?
ಹಾಗಂದ್ರೆ ಯಾರು?

* ಸೇನೆ, ಸೈನ್ಯ ಅಂತಿರ್ತಾರೆ ನೋಡಿ. ಕೋಪ ನೆತ್ತಿಗೇರಿದರೆ ಕುರ್ಚಿ, ಮೇಜು ಮುರಿಯುತ್ತಾರೆ... ಇನ್ನೇನೊ ಮಾಡ್ತಾರಲ್ಲ, ಅವರು.
ಓಹ್! ಅವರಾ! ಖಂಡಿತ ರಾಜ್ಯದ ಭವಿಷ್ಯ ಅವರ ಕೈಯಲ್ಲಿದೆ. 

* ಅಂಬುಜ ಅವರೇ, ಅಷ್ಟೊಂದು ಭಯಪಡುವ ಅಗತ್ಯವಿರಲಿಲ್ಲ. ಇರಲಿ, ಕೆಲ ರಾಜಕಾರಣಿಗಳು ಹಿಂದೂಗಳ ಸಂಖ್ಯೆ ಹೆಚ್ಚಿಸಲು ಹೊಸ ಸೂತ್ರ ಸಂಶೋಧಿಸಿದ್ದಾರೆ. ಎಲ್ಲರೂ.. ಐ ಮೀನ್, ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕಂತೆ ! ಇದಕ್ಕಾದರೂ ಭಯ ಬಿಟ್ಟು ನಿಮ್ಮ ಅಭಿಪ್ರಾಯ ಹೇಳುವಿರಾ?
ನಾಲ್ಕು ಮಕ್ಕಳು! ಮಕ್ಕಳನ್ನೆಲ್ಲಾ ಆ ರಾಜಕಾರಣಿಗಳು ಸಾಕ್ತಾರಾ?  ಹಿಂದಿನ ಕಾಲದಲ್ಲಿ ಅದು ಸಾಮಾನ್ಯವಾಗಿತ್ತು. ನಾವೇ ನೋಡಿ, ಆರು ಮಂದಿ ಹೆಣ್ಮಕ್ಳು ಮತ್ತು ಒಬ್ಬ ಹುಡುಗ. ಈಗ ಅಷ್ಟೊಂದು ಮಕ್ಕಳನ್ನು ಸಾಕೋದು ತುಂಬಾ ಕಷ್ಟ.

* ಮದುವೆಯಾಗಿ ಇಷ್ಟು ವರ್ಷಗಳ ನಂತರ ನಿಮ್ಮ ಯಜಮಾನ್ರು ಬದಲಾಗಿದ್ದಾರೆ ಎಂದು ಅನಿಸುತ್ತದೆಯಾ?
ಜಾಸ್ತಿ ಬದಲಾವಣೆಯೇನೂ ಆಗಿಲ್ಲ ಬಿಡಿ. ಸ್ವಭಾವ ಮತ್ತು... ಅವರ ತಲೆಕೂದಲೂ ಅಷ್ಟೇ... ಮದುವೆಯಾಗುವ ಹೊತ್ತಿಗೇ ಬೋಳುತಲೆಯ ಎಲ್ಲಾ ಲಕ್ಷಣ ಕಾಣುತಿತ್ತು. ಈಗ ಲಕ್ಷಣವಾಗಿ ಬೋಳು ಬೋಳಾಗಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT