ADVERTISEMENT

ಬದುಕು ಗೆಲ್ಲಲು ಧೈರ್ಯ ಬೇಕು

ಬದುಕು ಬನಿ

ಪ್ರಜಾವಾಣಿ ವಿಶೇಷ
Published 29 ಮೇ 2016, 19:30 IST
Last Updated 29 ಮೇ 2016, 19:30 IST
-ಸಂದೇಶ್‌ ಬಿ.ಜಿ.
-ಸಂದೇಶ್‌ ಬಿ.ಜಿ.   

ಹುಟ್ಟಿದ ಮೊದಲ ವರ್ಷವೇ ಪೊಲಿಯೋಗೆ ತುತ್ತಾದ ನನ್ನ ಹೆಸರು ಸಂದೇಶ್‌ ಬಿ.ಜಿ.  ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿನ ಎಚ್‌. ಹೊಸೂರು ನನ್ನೂರು. ತಂದೆ ಗಿಡ್ಡೇಗೌಡ, ತಾಯಿ ವಸಂತಮ್ಮ ಸ್ವಂತ ಊರಿನಲ್ಲೆ ವಾಸವಾಗಿದ್ದಾರೆ. ನನಗೆ ಒಬ್ಬ ಅಣ್ಣ ಇದ್ದಾನೆ. ಅವನು ಚಿಕ್ಕಂದಿನಲ್ಲೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ.

ತಂದೆ– ತಾಯಿ ನನ್ನನ್ನು 5ನೇ ವಯಸ್ಸಿಗೆ ಶಾಲೆಗೆ ಸೇರಿಸುವ ಬದಲು 8ನೇ ವಯಸ್ಸಿಗೆ ಸೇರಿಸಿದರು. ನಮ್ಮ ಊರು ಮಲೆನಾಡಿನ ಭಾಗವಾಗಿದ್ದರಿಂದ ಬೆಟ್ಟ– ಗುಡ್ಡ ಆರಣ್ಯದ ನಡುವೆ ಕಷ್ಟಪಟ್ಟು ಸಾಗಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆಯುವುದು ನನಗೆ ಕಷ್ಟವಾಗಿತ್ತು. ಶಾಲೆಯೂ ನಮ್ಮ ಮನೆಯಿಂದ ಸುಮಾರು ಮೂರರಿಂದ ನಾಲ್ಕು ಕಿ.ಮೀ. ದೂರದಲ್ಲಿತ್ತು.

ಪ್ರತಿನಿತ್ಯ ನನ್ನನ್ನು ತಂದೆ ಅಥವಾ ಅಣ್ಣ ಶಾಲೆಯ ಸಮಯಕ್ಕೆ ಕರೆದೊಯ್ಯುತ್ತಿದ್ದರು. ನನ್ನ ವಿದ್ಯಾಭ್ಯಾಸದ  ಬೆನ್ನೆಲುಬಾಗಿ  ಇವರಿಬ್ಬರೂ ನಿಂತರು. ನಾನು ಪೊಲಿಯೋಗೆ ತುತ್ತಾದ ಕಾರಣ ನನಗೆ ಅಂಗವಿಕಲ ಎಂಬ ಹಣೆಪಟ್ಟಿ ಸಿಕ್ಕಿತ್ತು. ಹೇಗೋ ಕಷ್ಟಪಟ್ಟು 10ನೇ ತರಗತಿ ಓದಿದ ನಂತರ ಶಿವಮೊಗ್ಗದ ಬಿ.ಸಿ.ಎಂ ಹಾಸ್ಟೆಲ್‌ನಲ್ಲಿದ್ದುಕೊಂಡು ಪಿಯುಸಿ ಮತ್ತು ಪದವಿ ವ್ಯಾಸಂಗ ಆರಂಭಿಸಿದೆ.

ಹಾಸ್ಟೆಲ್‌ನಲ್ಲಿದ್ದ ಕಾರಣ ಮನೆಯವರ ಸಹಾಯ ಹೆಚ್ಚು ಸಿಗಲಿಲ್ಲ. ಆದರೆ ಪಿಯುಸಿ ಮತ್ತು ಪದವಿ ವ್ಯಾಸಂಗದ ಅವಧಿಯಲ್ಲಿ ಸ್ನೇಹಿತರಾದ ಗೋಪಾಲ್‌ ಮತ್ತು ಪುನೀತ್‌ ಪ್ರತಿದಿನ ನನ್ನ ಕಾಲೇಜು ಬ್ಯಾಗ್‌ ಹೊತ್ತು ತರುತ್ತಿದ್ದರು. ನನ್ನ ಊಟದ ತಟ್ಟೆಯನ್ನೂ ಅವರೇ ತೊಳೆದಿಡುತ್ತಿದ್ದರು.

ನನಗೆ ಕಂಪ್ಯೂಟರ್‌ ಕಲಿಕೆಯ ಹುಚ್ಚು ಜಾಸ್ತಿ. ಆದ್ದರಿಂದ ಬಿಡುವಿನ ಸಮಯದಲ್ಲಿ ಉಚಿತ ಕಂಪ್ಯೂಟರ್‌ ಮತ್ತು ಟೈಪಿಂಗ್‌ ತರಬೇತಿ ತರಗತಿಗಳಿಗೆ ತೆರಳಿ ಸಮಯದ ಸದ್ಬಳಕೆ ಮಾಡಿಕೊಳ್ಳುತ್ತಿದೆ. 2004ರಲ್ಲಿ ಸಿಇಟಿಗೆ ಸಂಬಂಧಿಸಿದಂತೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ  ಬಸವನಗುಡಿ ನ್ಯಾಷನಲ್‌ ಕ್ಯಾಲೇಜ್‌ ಮೈದಾನವರೆಗೂ ನಡೆದ ‘ಬೆಂಗಳೂರು ಚಲೋ’ ಚಳವಳಿಯಲ್ಲಿ ಮೂರು ಚಕ್ರದ ಸೈಕಲ್‌ನಲ್ಲಿಯೇ ಭಾಗವಹಿಸಿದ್ದೆ. ಆ ಚಳುವಳಿಯ ಮುಂದಾಳತ್ವವನ್ನೂ ನಾನೇ ವಹಿಸಿದ್ದೆ.

ಇದನ್ನು ಗಮನಿಸಿದ ದೈಹಿಕ ಶಿಕ್ಷಕರಾದ ಎಂ.ಕೆ ಶ್ರೀಧರ್‌ ಅವರು ಕ್ರೀಡೆಯತ್ತ ಗಮನ ನೀಡುವಂತೆ ಸೂಚಿಸಿದರು. 2005ರಲ್ಲಿ ‘ಇಂಡಿಯಾನ್‌ ಏರ್‌ ಲೈನ್ಸ್‌’ನ ಐವತ್ತು ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಐವತ್ತು ಮಂದಿ ವಿಕಲಚೇತನರನ್ನು  ಅಂಡಮಾನ್‌ ನಿಕೋಬರ್‌ ಪ್ರವಾಸ ಆಯ್ಕೆ ಮಾಡಿದರು. ಆದರಲ್ಲಿ ನಾನು ಒಬ್ಬನಾಗಿದ್ದೆ.

ಆ ಹೊತ್ತಿಗಾಗ್ಗಲೇ ಬಿ.ಕಾಂ ಪದವಿ  ಪಡೆದಿದ್ದೆ. ಎಂಬಿಎ ವ್ಯಾಸಂಗಕ್ಕಾಗಿ ಬೆಂಗಳೂರಿನ ಆರ್‌ಸಿ ಕಾಲೇಜಿಗೆ ಸೇರಿಕೊಂಡೆ. ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಛಾಪು ಮೂಡಿಸಬೇಕೆಂಬ ಹಂಬಲ ನನ್ನಲ್ಲಿ ಮೂಡತೊಡಗಿತ್ತು. ಪ್ರತಿನಿತ್ಯ ಇಂತಿಷ್ಟು ಸಮಯವನ್ನು ಕ್ರೀಡೆಗೆಂದೇ ಮೀಸಲಿರಿಸಿ ಕಠಿಣ ಅಭ್ಯಾಸ ನಡೆಸಿದೆ.

ಕ್ರೀಡಾ ಜೀವನ
2006ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ  ನಡೆದ ಒಪನ್‌ ನ್ಯಾಷನಲ್‌ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು. ಗುಂಡು ಎಸೆತದಲ್ಲಿ ಕಂಚಿನ ಪದಕ ಗಳಿಸಿದೆ. ನಾನು ಈವರೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 33ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದೇನೆ.

ಕ್ರೀಡಾ ಒಲವಿನ ಜತೆಯಲ್ಲೇ ಎಂಬಿಎ  ಪದವಿಯನ್ನೂ ಪೂರ್ಣಗೊಳಿಸಿದೆ. ಪ್ರಸ್ತುತ ಬೆಂಗಳೂರಿನ ಥಾಮ್ಸನ್ ರಾಯಿಟರ್ಸ್‌ ಸಂಸ್ಥೆಯಲ್ಲಿ ಮಾಹಿತಿ ವಿಶ್ಲೇಷಕ (ಕಂಟೆಂಟ್  ಅನಾಲಿಸ್ಟ್) ಅಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೆಲಸದಿಂದ ಬರುವ ಸಂಬಳ ಕೇವಲ ದೈನದಿಂನ ಜೀವನಕ್ಕೆ ಸರಿಹೊಂದುತ್ತಿದೆ. ಕ್ರೀಡಾಭ್ಯಾಸಕ್ಕೂ ನಾನು ಹಣ ಹೊಂದಿಸಬೇಕಾಗಿದೆ.

ಸಹಕಾರ ಬೇಕು
ಸಮಾಜಕ್ಕೆ ಅಂಗವಿಕಲರ ಬಗ್ಗೆ ತಾತ್ಸಾರ ಮನೋಭಾವವಿದೆ. ಅಂಗವಿಕಲರಲ್ಲಿ ಪ್ರತಿಭೆ ಇದೆ. ಆದರೆ ಸಮಾಜದ ಸಹಕಾರ ಸಿಗದೆ, ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಅಂಗವೈಕಲ್ಯಕ್ಕೆ ತುತ್ತಾಗಿರುವವರು ಉತ್ತಮ ಆಲೋಚನೆ ಮತ್ತು ಧೈರ್ಯದಿಂದ ಬಾಳುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ಸಾಬೀತು ಪಡಿಸಲು ಅವಿರತ ಪ್ರಯತ್ನಿಸಬೇಕು.

ಸಂದೇಶ ಅವರ ಸಂಪರ್ಕಕ್ಕೆ: 9901329049

** *** **
ಅಂಗವೈಕಲ್ಯಕ್ಕೆ ತುತ್ತಾಗಿರುವವರು ಉತ್ತಮ ಆಲೋಚನೆ ಮತ್ತು ಧೈರ್ಯದಿಂದ ಬಾಳುವುದನ್ನು ರೂಢಿಸಿಕೊಳ್ಳಬೇಕು. ಪ್ರತಿಭೆಯನ್ನು ಸಾಬೀತು ಪಡಿಸಲು ಅವಿರತ ಶ್ರಮಿಸಬೇಕು.
-ಸಂದೇಶ್‌ ಬಿ.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.