ADVERTISEMENT

ಬರಲಿದೆ ‘ಆಪ್ತಮಿತ್ರ 2’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST
‘ಅರನ್ಮನೈ– 1’ರ ದೃಶ್ಯ
‘ಅರನ್ಮನೈ– 1’ರ ದೃಶ್ಯ   

ವಿಷ್ಣುವರ್ಧನ್‌– ದ್ವಾರಕೀಶ್‌ ಜೋಡಿ ಒಂದಾಗಿ ನಟಿಸಿದ್ದ ಸೂಪರ್‌ ಹಿಟ್‌ ಚಿತ್ರ ‘ಆಪ್ತಮಿತ್ರ’ ಮತ್ತೊಮ್ಮೆ ಸುದ್ದಿಯಾಗಿದೆ. ಇದು, ‘ಆಪ್ತಮಿತ್ರ’ ಸಿನಿಮಾದ ಎರಡನೇ ಭಾಗಕ್ಕೆ ಸಂಬಂಧಿಸಿದ್ದು. ನಿಜ. ‘ಆಪ್ತಮಿತ್ರ–2’ ನವೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿರುವ ಬಗ್ಗೆ ಸ್ಯಾಂಡಲ್‌ವುಡ್‌ ಮಾತನಾಡುತ್ತಿದೆ.

ತಮಿಳಿನ ‘ಅರನ್ಮನೈ’ ಚಿತ್ರವನ್ನು ಕನ್ನಡೀಕರಿಸಿ ಸ್ಯಾಂಡಲ್‌ವುಡ್‌ ಮುಂದಿಡಲಿದ್ದಾರೆ, ನಿರ್ಮಾಪಕ ರಮೇಶ್‌ ಯಾದವ್‌. ಇದು, ರಮೇಶ್ ಯಾದವ್‌ ಅವರ 21ನೇ ಚಿತ್ರವಾಗಲಿದ್ದು, ’ಆಪ್ತಮಿತ್ರ’ವನ್ನು ನಿರ್ದೇಶಿಸಿದ್ದ ಪಿ.ವಾಸು ಅವರೇ ಎರಡನೇ ಭಾಗವನ್ನೂ ನಿರ್ದೇಶಿಸಲಿದ್ದಾರೆ.

‘ಅರನ್ಮನೈ’ ಚಿತ್ರವನ್ನು, ಬಹುಭಾಷಾ ನಟಿ ಖುಷ್ಬೂ ಅವರ ಪತಿ ಸಿ.ಸುಂದರ್‌ ನಿರ್ದೇಶಿಸಿ ರವಿ ಎಂಬ ಪ್ರಮುಖ ಪಾತ್ರವನ್ನೂ ನಿಭಾಯಿಸಿದ್ದರು. ‘ಆಪ್ತಮಿತ್ರ–2’ರ ಪಾತ್ರವರ್ಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ADVERTISEMENT

‘ಅರನ್ಮನೈ’, ₹12 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ. ಆದರೆ ಬಾಕ್ಸಾಫೀಸಿನಲ್ಲಿ ಬರೋಬ್ಬರಿ ₹22 ಕೋಟಿ ಬಾಚಿಕೊಂಡಿತ್ತು. ಹಾರರ್ ಕಾಮಿಡಿಯಾಗಿದ್ದ ‘ಅರನ್ಮನೈ’ಯಲ್ಲಿ ಹನ್ಸಿಕಾ ಮೊಟ್ವಾನಿ, ವಿರೋಶನ್‌, ಆ್ಯಂಡ್ರಿಯಾ ಜಿರೆಮಿಯಾ, ರಾಜ್‌ ಲಕ್ಷ್ಮೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವೂ 1978ರಲ್ಲಿ ತೆರೆ ಕಂಡಿದ್ದ ‘ಆಯಿರಮ್‌ ಜೆನ್ಮಂಗಲ್‌’ ಸಿನಿಮಾದ ರಿಮೇಕ್‌ ಆಗಿದೆ. ಈ ಚಿತ್ರ ಎರಡು ಭಾಗಗಳಲ್ಲಿ ತಮಿಳು ಚಿತ್ರಪ್ರೇಮಿಗಳನ್ನು ರಂಜಿಸಿತ್ತು.

ಭರ್ಜರಿ ಸೆಟ್‌, ಅದ್ದೂರಿ ತಾರಾಗಣ, ವಿಭಿನ್ನ ಸಂಗೀತ, ಹಾಡು, ಕ್ಯಾಮೆರಾ, ಚಿತ್ರಕತೆ ಹೀಗೆ ಹಲವು ಆಯಾಮಗಳಿಂದ ಪ್ರೇಕ್ಷಕನ ಮನಗೆದ್ದಿದ್ದ ‘ಆಪ್ತಮಿತ್ರ’ದ ದಾಖಲೆಯನ್ನು ಎರಡನೇ ಭಾಗ ಸರಿಗಟ್ಟುತ್ತದೆಯೇ. ಮುಖ್ಯವಾಗಿ, ಆ ಚಿತ್ರದಲ್ಲಿ ವಿಷ್ಣುವರ್ಧನ್‌ ಮತ್ತು ಸೌಂದರ್ಯ ಪ್ರಮುಖ ಆಕರ್ಷಣೆಯಾಗಿದ್ದರು.

ಎರಡನೇ ಭಾಗದಲ್ಲಿ ಪ್ರಮುಖ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ ಹಾಗೂ ಮೆಲುಕು ಹಾಕುವ ಸಂಗೀತ ಇದರಲ್ಲಿಯೂ ಇರುತ್ತದೆಯೇ ಎಂಬುದು ಕುತೂಹಲದ ಅಂಶವಾಗಲಿದೆ. ಎಲ್ಲಾ ಕುತೂಹಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.