ADVERTISEMENT

ಬಸ್‌ನಲ್ಲಿ ಮಿಗಿತಾಯದ `ಬಜ್'

ಸುಮಾ ಬಿ.
Published 12 ಫೆಬ್ರುವರಿ 2013, 19:59 IST
Last Updated 12 ಫೆಬ್ರುವರಿ 2013, 19:59 IST
ಬಸ್‌ನಲ್ಲಿ ಮಿಗಿತಾಯದ `ಬಜ್'
ಬಸ್‌ನಲ್ಲಿ ಮಿಗಿತಾಯದ `ಬಜ್'   

`ಮೊನ್ನೆ ಮೊನ್ನೆವರೆಗೂ ದುಡಿದ ಹಣ ಕೈಗೆಟಕುತ್ತಿರಲಿಲ್ಲ. ಟೈಲರಿಂಗ್‌ಗೆ ಸೇರಿಕೊಂಡರೂ ಹಣವೆಲ್ಲಾ ತಿಂಗಳ ಕೊನೆಗೆ ಖರ್ಚಾಗುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು. ಖರ್ಚು ತೂಗಿಸಲು ಪತಿಯ ಸಂಬಳ ಸಾಕಾಗುತ್ತಿರಲಿಲ್ಲ. ಗ್ರಾಮೀಣ ಕೂಟದಲ್ಲಿ ಸಾಲ ಪಡೆದು ಬಂಡವಾಳವನ್ನು ಹೇಗೆ ವಿನಿಯೋಗ ಮಾಡಬೇಕೆಂಬ ತಿಳಿವಳಿಕೆಯೂ ಇರಲಿಲ್ಲ.

ಆದರೀಗ ವರ್ಷಕ್ಕೆ ಒಂದು ಲಕ್ಷ ದುಡಿಮೆ ಮಾಡುವಷ್ಟು ಸಾಮರ್ಥ್ಯ ಪಡೆದಿದ್ದೇನೆ. ತರಬೇತಿ ಪಡೆದ ಬಳಿಕ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಮನೆಯ ಖರ್ಚು ಎಲ್ಲಾ ಕಳೆದು ಉಳಿತಾಯವಾಗುತ್ತದೆ. 7ನೇ ತರಗತಿ ಓದಿರುವ ನಾನು ಸ್ವಂತ ಟೈಲರಿಂಗ್ ಶಾಪ್ ಸಹ ತೆರೆದಿದ್ದೇನೆ. ಇನ್ನಷ್ಟು ಜನರಿಗೆ ಉದ್ಯೋಗ ಕೊಡಲೂ ಮುಂದಾಗಿದ್ದೇನೆ. ಬ್ಯೂಟಿಷಿಯನ್ ಕೋರ್ಸ್ ಸಹ ಕಲಿತಿದ್ದೇನೆ. ಏನೇ ಆದರೂ ಧೈರ್ಯದಿಂದ ಮುನ್ನುಗ್ಗುತ್ತೇನೆಂಬ ಆತ್ಮಸ್ಥೈರ್ಯ ನನ್ನಲ್ಲಿದೆ'... ಹೀಗೆ ನುಡಿದವರು ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮದ ಶೋಭಾ.

`ಈ ಮೊದಲೂ ನಾನು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದೆ. ಆದರೆ ದುಡಿದ ಹಣ ಹೇಗೆ ವ್ಯಯವಾಗುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ತಿಂಗಳಿಗೆ ಐದು ಸಾವಿರ ದುಡಿಮೆಯಾದರೆ ಮತ್ತೆ ಅದು ಬಂಡವಾಳಕ್ಕೇ ವಿನಿಯೋಗವಾಗುತಿತ್ತು. ಈಗ ಹಾಲು ಮಾರಾಟದಲ್ಲಿ ತೊಡಗಿ ಯಾವ ಖರ್ಚನ್ನು ಎಷ್ಟು ಮಾಡಬೇಕು, ಹೇಗೆ ಮಾಡಬೇಕು ಎಂದು ಅರಿತು ಹಣ ಹೂಡುತ್ತೇನೆ. ಸಣ್ಣ ಪುಟ್ಟ ಖರ್ಚುಗಳಲ್ಲೂ ಹೇಗೆ ಉಳಿತಾಯ ಮಾಡಬೇಕೆಂಬುದನ್ನೂ ಅರಿತಿದ್ದೇನೆ' ಎಂದು ಹೆಮ್ಮೆಯಿಂದ ನಗು ಬೀರಿದವರು ತುಮಕೂರಿನ ಅಯೇಶಾ.

ಉಳಿತಾಯ ಮಾಡಬೇಕೆಂಬ ಮನಸ್ಸಿದ್ದರೂ ಅದೆಷ್ಟೋ ಗೃಹಿಣಿಯರು ಮಿಗಿತಾಯದ ಮಾರ್ಗ ಅರಿಯದೇ ಪರಿತಪಿಸುತ್ತಾರೆ. ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ, ದಿನಸಿ, ಬಟ್ಟೆ ಹೀಗೆ ಎಷ್ಟು ದುಡಿದರೂ ತಿಂಗಳಾಂತ್ಯಕ್ಕೆ ಒಂದನೇ ತಾರೀಖು ಯಾವಾಗ ಬರುತ್ತದೆ ಎಂದು ಕ್ಯಾಲೆಂಡರ್‌ನತ್ತ ಕಣ್ಣು ಹೊಳುತ್ತದೆ. 

ಈ ಖರ್ಚುಗಳೆಲ್ಲಾ ಕಳೆದು ಬಂದ ಆದಾಯದಲ್ಲಿ ಮಿಗಿತಾಯ ಮಾಡುವುದು ಹೇಗೆ, ಯಾವುದರಲ್ಲಿ ಬಂಡವಾಳ ಹೂಡಿದರೆ ಉತ್ತಮ ಎಂಬುದನ್ನು ಹೇಳಿಕೊಡಲೆಂದೇ ಬೆಟರ್ ಫ್ಯೂಚರ್ ಹಾಗೂ ನವ್ಯ ದಿಶಾ ಸಂಸ್ಥೆಗಳು `ಬಜ್ ಇಂಡಿಯಾ' ಎಂಬ ವಿನೂತನ ಯೋಜನೆ ರೂಪಿಸಿವೆ. ಇದೀಗ ಅದರ ಸಾಕಾರಕ್ಕೆಂದು ರಾಜ್ಯದಾದ್ಯಂತ ಸುತ್ತು ಹಾಕಲು ಅಣಿಯಾಗಿವೆ.

ಸ್ವಂತ ಉದ್ಯೋಗ ಮಾಡಬೇಕು ಎಂದು ಬಯಸುವ ಮಹಿಳೆಯರಿಗೆ `ಬಜ್ ಇಂಡಿಯಾ' ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದಕ್ಕೆಂದೇ ಸಾಂಚಾರಿ ಬಸ್ ರೂಪಿಸಲಾಗಿದ್ದು, ಮಹಿಳೆಯರ ತರಬೇತಿಗೆ ಬೇಕಾಗಿರುವ ಎಲ್‌ಸಿಡಿ, ಸ್ಕ್ರೀನ್, ಕುರ್ಚಿ, ಪುಸ್ತಕ ಹೀಗೆ ಎಲ್ಲ ವ್ಯವಸ್ಥೆಗಳು ಇದರಲ್ಲಿವೆ. ಬಸ್‌ನ ಇನ್ನೊಂದು ವಿಶೇಷ ಸೌರ ಶಕ್ತಿಯನ್ನು ಅಳವಡಿಸಿಕೊಂಡಿರುವುದು. ವಿದ್ಯುತ್‌ನಿಂದ ಹಿಡಿದು ಪ್ರತಿಯೊಂದಕ್ಕೂ ಸೌರಶಕ್ತಿಯ ಹಂಗು ಈ ಬಸ್‌ಗೆ.

ತರಬೇತಿ ಹೀಗೆ...
ಒಟ್ಟು ಐದು ದಿನ ತರಬೇತಿಯಲ್ಲಿ ವಾರಕ್ಕೆ ಎರಡು ದಿನದಂತೆ ಮೂರು ವಾರ ಒಂದು ಹಳ್ಳಿಯಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಮೊದಲು ಪ್ರತಿಯೊಬ್ಬ ಮಹಿಳೆಯರಿಗೂ ಅವರವರ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಯಾವ ರೀತಿಯ ಉದ್ಯಮ ಹೊಂದಿಕೆಯಾಗುತ್ತದೆ ಎಂದು ಸಲಹೆ ನೀಡಲಾಗುತ್ತದೆ. ಆನಂತರ ವ್ಯಾಪಾರದ ಕೌಶಲ ಹೇಳಿಕೊಡಲಾಗುತ್ತದೆ. ಅಲ್ಲದೆ ದಿನನಿತ್ಯದ ಖರ್ಚು, ಉಳಿತಾಯ, ಆದಾಯ ಎಲ್ಲವನ್ನೂ ಯಾವ ರೀತಿ ಸರಿದೂಗಿಸಿಕೊಂಡು ಹೋಗಬೇಕೆಂದು ಅರಿವು ಮೂಡಿಸಲಾಗುತ್ತದೆ.

`ವ್ಯವಹಾರದಲ್ಲಿ ಯಾವ ಅವಕಾಶವನ್ನೂ ಕೈಬಿಡದೆ ಸದುಪಯೋಗ ಪಡೆದುಕೊಳ್ಳುವುದು ಹೇಗೆ ಎಂಬ ಕೌಶಲವನ್ನು ಮಹಿಳೆಯರಲ್ಲಿ ವೃದ್ಧಿಸಲಾಗುತ್ತದೆ. 2020ರ ವೇಳೆಗೆ 20 ಸಾವಿರ ಮಹಿಳೆಯರು ನಮ್ಮ ಯೋಜನೆಯ ಸಾಫಲ್ಯ ಪಡೆಯಬೇಕೆಂಬುದು ನಮ್ಮ ಉದ್ದೇಶ' ಎನ್ನುತ್ತಾರೆ ಬೆಟರ್ ಫ್ಯೂಚರ್‌ನ ವ್ಯವಸ್ಥಾಪಕ ನಿರ್ದೇಶಕ ಜೈಕುಮಾರ್ ಚಂದ್ರಶೇಖರ್.

ತರಬೇತಿಗೆ ಆಯ್ಕೆ
ಈಗಾಗಲೇ ಗ್ರಾಮೀಣ ಕೂಟದಲ್ಲಿ ಸದಸ್ಯರಾಗಿ ಸ್ವಂತ ಉದ್ಯಮಿಗಳಾಗಲು ಅದರಲ್ಲಿ ಸಾಲ ಪಡೆದ ಮಹಿಳೆಯರನ್ನು ಗುರುತಿಸಲಾಗುತ್ತದೆ. ನಂತರ ಯಾವುದಾದರೂ ಗ್ರಾಮ ಅಥವಾ ಪಟ್ಟಣ ಪ್ರದೇಶದಲ್ಲಿ ಲೋನ್ ಪಡೆದ ಒಂದಷ್ಟು ಮಹಿಳೆಯರನ್ನು ಒಟ್ಟುಗೂಡಿಸಿ `ಬಜ್ ಇಂಡಿಯಾ' ತರಬೇತಿ ಬಗ್ಗೆ ವಿವರಿಸಲಾಗುತ್ತದೆ. ಅದರಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ತಾವಾಗಿಯೇ ಆಸಕ್ತಿಯಿಂದ ಮುಂದೆ ಬರುವವರಿಗೆ ಐದು ದಿನದ ತರಬೇತಿ ನೀಡಲಾಗುವುದು.

ರಾಜ್ಯದಾದ್ಯಂತ ಹೊರಟಿರುವ `ಬಜ್ ಇಂಡಿಯಾ' ಬಸ್ ಮಹಿಳೆಯರ ಆಸಕ್ತಿ, ಕುಟುಂಬದ ಸಹಕಾರ ಎರಡನ್ನೂ ಬೇಡುತ್ತಿದೆ. ವೃತ್ತಿಪರತೆಯತ್ತ ಹೆಜ್ಜೆ ಹಾಕಲು ಇದೊಂದು ಸದವಕಾಶ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.