ADVERTISEMENT

‘ಬೈಕಿಂಗ್‌ ಬಡೀಸ್‌’ ಸೇವೆಗಾಗಿ ಬೈಕ್‌ ಸವಾರಿ

ರೋಹಿಣಿ ಮುಂಡಾಜೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
‘ಬೈಕಿಂಗ್‌ ಬಡೀಸ್‌’ ಸೇವೆಗಾಗಿ ಬೈಕ್‌ ಸವಾರಿ
‘ಬೈಕಿಂಗ್‌ ಬಡೀಸ್‌’ ಸೇವೆಗಾಗಿ ಬೈಕ್‌ ಸವಾರಿ   

ಈ ಯುವಕರು ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಬೈಕ್‌ ಹತ್ತಿ ಹೊರಟರೆಂದರೆ ಯಾವುದೋ ಒಂದು ಪ್ರದೇಶದಲ್ಲಿ ರಕ್ತದಾನ ಶಿಬಿರ ನಡೆಯುತ್ತದೆ. ಇಲ್ಲವೇ ಏನಾದರೊಂದು ಸಮಾಜಮುಖಿ ಕೆಲಸ ನಡೆಯುತ್ತದೆ ಎಂದೇ ಅರ್ಥ. ‘ಬೈಕಿಂಗ್‌ ಬಡೀಸ್‌’ ಎಂಬ ಬೈಕ್‌ ಮೋಹಿಗಳ ಕಾರ್ಯಶೈಲಿಯಿದು.

ಈ ತಂಡ ಆರಂಭವಾದದ್ದು 2014ರ ಆಗಸ್ಟ್‌ 14ರಂದು. ಆ ದಿನವನ್ನು ಅವರು ಮೋಜಿನ ರ‍್ಯಾಲಿಗಾಗಲಿ, ಬೈಕ್‌ ಚಾರಣ ಮಾಡಿ ಮನರಂಜನೆ ಮಾಡುವುದಕ್ಕಾಗಲಿ ಮೀಸಲಿಡುವುದಿಲ್ಲ. ವಾರ್ಷಿಕೋತ್ಸವಕ್ಕೆ ಸಾಕಷ್ಟು ಮುಂಚಿತವಾಗಿ ರಾಜ್ಯದ ಯಾವುದೋ ಹಳ್ಳಿಯನ್ನು ಗುರುತಿಸಿ ಅಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಅವಶ್ಯವಿರುವ ಪಠ್ಯ/ಪಠ್ಯೇತರ ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ.

ಆಗಸ್ಟ್‌ 15ರ  ಮುಂಜಾನೆ ಆ ಹಳ್ಳಿಯಲ್ಲೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡುತ್ತಾರೆ. ಫಲಾನುಭವಿಗಳಿಗೆ ಉದ್ದೇಶಿತ ನೆರವು ನೀಡಿ ಅವರೊಂದಿಗೆ ಉಪಾಹಾರ ಸೇವಿಸಿ ವಾರ್ಷಿಕೋತ್ಸವ ಆಚರಿಸಿದ ಖುಷಿಯಲ್ಲಿ ಹಿಂತಿರುಗುತ್ತಾರೆ.

ADVERTISEMENT

‘ಬೈಕರ್ಸ್‌ ಕ್ಲಬ್‌ ಅಂದಾಕ್ಷಣ ಮೋಜಿಗಾಗಿ ಹಮ್ಮಿಕೊಳ್ಳುವ ರ‍್ಯಾಲಿ, ಪಾರ್ಟಿಗಳು ನೆನಪಾಗುವುದು ಸಹಜ. ಆದರೆ ನಾವು ಪ್ರತಿ ಬಾರಿ ಸಮಾಜೋಪಯೋಗಿ ಕೆಲಸಗಳಿಗಾಗಿ ರ‍್ಯಾಲಿ ಹಮ್ಮಿಕೊಳ್ಳುತ್ತೇವೆ. ರಕ್ತದಾನ ನಮ್ಮ ಪ್ರಮುಖ ಆಶಯಗಳಲ್ಲಿ ಒಂದು’ ಎಂದು ವಿವರಿಸುತ್ತಾರೆ, ‘ಬೈಕಿಂಗ್‌ ಬಡೀಸ್‌’ನ ಸಂಯೋಜಕ ಅಭಿಷೇಕ್‌ ಬಿ.ವಿ.

‘ಹಾಗಿದ್ದರೆ ನಿಮ್ಮ ಪ್ರಕಾರ ಬೈಕಿಂಗ್‌ ಅಂದರೆ ಏನು?’ ಎಂದು ಕೇಳಿದರೆ, ‘ನಮ್ಮನ್ನು ಅರ್ಥ ಮಾಡಿಕೊಳ್ಳುವ ಸಂದರ್ಭ ಬೈಕ್‌ ಸವಾರಿ’ ಎನ್ನುತ್ತಾರೆ ಅವರು.

ಬೈಕರ್ಸ್‌ ಕ್ಲಬ್‌ಗೆ ಸೇರುವವರಲ್ಲಿ ಇಂತಹುದೇ ಬೈಕ್‌ ಹೊಂದಿರಿಬೇಕು ಎಂಬ ಷರತ್ತು ಇರುತ್ತದೆ. 150 ಸಿಸಿಗಿಂತ ಹೆಚ್ಚಿನ ಯಾವುದೇ ಬೈಕ್‌ ಇರುವವರು ‘ಬೈಕಿಂಗ್‌ ಬಡೀಸ್’ನ ಸದಸ್ಯರಾಗಬಹುದು. ರಕ್ತದಾನ ಮತ್ತು ನಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಿದ್ಧರಿರಬೇಕು ಅಷ್ಟೇ’ ಎಂದು ತಂಡದ ಆಶಯವನ್ನು ಅಭಿಷೇಕ್‌ ತಿಳಿಸುತ್ತಾರೆ. ‘ಬೈಕಿಂಗ್‌ ಬಡೀಸ್‌’ನ ರಕ್ತದಾನ ಶಿಬಿರಗಳಲ್ಲಿ ಇತರ ಬೈಕಿಂಗ್‌ ಕ್ಲಬ್‌ನ ಸದಸ್ಯರೂ ಕೈಜೋಡಿಸುವುದು ವಿಶೇಷ.

‘ಜೂನ್‌ 25ರಂದು ಬೃಹತ್‌ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಅದಕ್ಕೂ ಮೊದಲು ರ‍್ಯಾಲಿ ನಡೆಯಲಿದೆ. ಅದರಲ್ಲಿ ಅಂದಾಜು 40 ಬೈಕರ್ಸ್‌ ಕ್ಲಬ್‌ಗಳಿಂದ 350ರಿಂದ 400 ಬೈಕರ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

‘ಶಿಬಿರಕ್ಕೆ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ, ಕಿದ್ವಾಯಿ ರಕ್ತನಿಧಿ ಮತ್ತು ಲಯನ್ಸ್‌ ರಕ್ತ ನಿಧಿ ಸಹಕಾರ ನೀಡಿವೆ. ಒಟ್ಟು ಕಾರ್ಯಕ್ರಮಕ್ಕೆ ಸಂಜಯನಗರ ಲಯನ್ಸ್ ಕ್ಲಬ್‌ ಮತ್ತು ರೋಟರಿ ಕ್ಲಬ್‌ ಸೆಂಟಿನಿಯಲ್‌ ನೆರವಾಗಿವೆ. ಬೈಕರ್‌ಗಳು ಬೆಳಿಗ್ಗೆ 7ರಿಂದಲೇ ಸಮಾವೇಶಗೊಳ್ಳಲಿದ್ದಾರೆ. ರ‍್ಯಾಲಿಗೆ ಚಾಲನೆ ನೀಡಿದ ಬಳಿಕ ಎಡಿಜಿಪಿ  ಭಾಸ್ಕರ ರಾವ್‌ ಹಾಗೂ ಇತರ ಕೆಲವು ಪೊಲೀಸ್‌ ಅಧಿಕಾರಿಗಳೂ ಪಾಲ್ಗೊಳ್ಳುವ  ನಿರೀಕ್ಷೆಯಿದೆ’ ಎಂದು ಅಭಿಷೇಕ್‌ ಮಾಹಿತಿ ನೀಡುತ್ತಾರೆ.

ರ‍್ಯಾಲಿಗೆ ಹಸಿರು ನಿಶಾನೆ– ಹೆಚ್ಚುವರಿ ಡಿಜಿಪಿ ಭಾಸ್ಕರ ರಾವ್‌. ಉಪಸ್ಥಿತಿ– ಹಿರಿಯ ಬೈಕರ್‌ ಚಕ್ರವರ್ತಿ ಆರ್. ಬೆಳಿಗ್ಗೆ 8.

ರ‍್ಯಾಲಿಯ ಮಾರ್ಗ: ಶೇಷಾದ್ರಿಪುರಂ ಕಾಲೇಜು (ನಾಗಪ್ಪ ಸ್ಟ್ರೀಟ್‌)–ನೆಹರೂ ವೃತ್ತ– ಸಂಪಿಗೆ ರಸ್ತೆ–ಗುಟ್ಟಹಳ್ಳಿ ಮುಖ್ಯರಸ್ತೆ/ಸ್ಯಾಂಕಿ ರಸ್ತೆ–ಬಳ್ಳಾರಿ ರಸ್ತೆ– ಗಾಲ್ಫ್‌ ಕೋರ್ಸ್‌ ರಸ್ತೆ–ವಿಂಡ್ಸರ್‌ ಯೀಲ್ಡ್‌–ಕನಕಪುರ ರಸ್ತೆ–ಶಿವಾನಂದ ವೃತ್ತ–ಹರೇ ಕೃಷ್ಣ ರಸ್ತೆ– ನೆಹರೂ ವೃತ್ತ– ನಾಗಪ್ಪ ರಸ್ತೆ. 9ಕ್ಕೆ ಮುಕ್ತಾಯ.
ರಕ್ತದಾನ ನಡೆಯುವ ಸ್ಥಳ– ಶೇಷಾದ್ರಿಪುರ ಕಾಲೇಜು. ಸಮಯ– ಬೆಳಿಗ್ಗೆ 10ರಿಂದ ಮಧ್ಯಾಹ್ನ 1. ಇನ್ನಷ್ಟು ಮಾಹಿತಿಗೆ: ಮೊ– 96632 55589.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.