ADVERTISEMENT

ಮುಂಜಾವಿನ ಬಣ್ಣ, ಭಾವಗಳ ತೇರು

ಲಕ್ಷ್ಮಿ ಗೋವಿಂದರಾಜು ಎಸ್.
Published 6 ಮೇ 2016, 5:34 IST
Last Updated 6 ಮೇ 2016, 5:34 IST
ಹೂಗಳ ರಾಶಿಯ ನಡುವೆ ವ್ಯಾಪಾರಿ -ಚಿತ್ರ : ಸತೀಶ್‌ ಬಡಿಗೇರ್‌
ಹೂಗಳ ರಾಶಿಯ ನಡುವೆ ವ್ಯಾಪಾರಿ -ಚಿತ್ರ : ಸತೀಶ್‌ ಬಡಿಗೇರ್‌   

ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂದ
ಈಗ ಇಲ್ಲಿಗೇ ತಂದು..
- ದ.ರಾ ಬೇಂದ್ರೆ

ನಸುಕಿನ ಸಮಯದಲ್ಲಿ ತುಮಕೂರು ರಸ್ತೆಯ ಮೂಲಕ ಉದ್ಯಾನ ನಗರ ಪ್ರವೇಶಿಸುವವರಿಗೆ ಯಶವಂತಪುರ ರೈಲು ನಿಲ್ದಾಣದ ಸಮೀಪ ಹೂವಿನ ಸ್ವಾಗತ. ಕತ್ತಲು ಕರಗಿ, ಇನ್ನೇನು ಬೆಳಕಿನ ಹೊನಲು ಹರಿಯುವ ಈ ಸಮಯದಲ್ಲಿ ನಗರದ ಬಾಗಿಲಿಗೆ ಅತ್ತರು ಪೂಸಿದಂತೆ ಹರಡಿಕೊಳ್ಳುವ ಈ ಹೂವಿನ ಸುಗಂಧ ಮನಸ್ಸಿಗೆ ಮುದ ನೀಡುತ್ತದೆ.
ಯಶವಂತಪುರ ರೈಲು ನಿಲ್ದಾಣದ ಎದುರಿಗಿನ, ಸರ್ವೀಸ್ ರಸ್ತೆಯ   ಬಲಭಾಗದಲ್ಲಿರುವ ಸ್ಥಳವೇ ಹೂವಿನ ತಾತ್ಕಾಲಿಕ ಮಾರುಕಟ್ಟೆ.

ಸೂರ್ಯನ ಉದಯಕ್ಕೂ ಮುನ್ನ  ಇಲ್ಲಿ ಹೂವುಗಳು ಅರಳುತ್ತವೆ. ಘಮಘಮಿಸುವ ಪರಿಮಳ ಬೀರುತ್ತವೆ. ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಂದ ಬರುವ ಸೇವಂತಿಗೆ, ಕಾಕಡ, ಕನಕಾಂಬರ, ಗುಲಾಬಿ, ಸುಗಂಧರಾಜ, ಮಲ್ಲಿಗೆ, ಚೆಂಡು ಹೂಗಳು ಖರೀದಿ ಪೈಪೋಟಿಯಲ್ಲಿ ಬೆಳಕು ಹರಿಯುವ ಮುನ್ನವೇ ಬಿಕರಿಯಾಗುತ್ತವೆ.

ಮದುವೆಗೋ, ಮುಂಜಿಗೋ, ಪಾರ್ಟಿಗೋ ಅಥವಾ ಇನ್ಯಾರದೊ ಮುಡಿಯನ್ನು ಅಲಂಕರಿಸಲು ಹೊರಟು ಬಿಡುತ್ತವೆ.ಬೆಳಿಗ್ಗೆ 4 ರಿಂದ 6 ಗಂಟೆ ತನಕ ನಡೆಯುವ ಈ ಹೂವಿನ ವ್ಯಾಪಾರ, ನೂರು  ಬಣ್ಣ ಭಾವಗಳ ತೇರು. ಸಾಮಾನ್ಯವಾಗಿ ಸೇವಂತಿ ಮತ್ತು ಮಲ್ಲಿಗೆಗೆ ಹೆಚ್ಚು ಬೇಡಿಕೆ. ಫೆಬ್ರುವರಿ ತಿಂಗಳಾದರೆ ಚೆಂಗುಲಾಬಿ ಖರೀದಿಗೆ ಪೈಪೋಟಿ ಹೆಚ್ಚು.

ರೈತರು ಹೂವನ್ನು ನೇರವಾಗಿ ಮಾರುಕಟ್ಟೆಗೆ ತಂದರೂ, ದಲ್ಲಾಳಿಗಳ ಮುಖಾಂತರ ಹರಾಜು ಹಾಕುತ್ತಾರೆ.  ಅವರಿಗೆ ಇಂತಿಷ್ಟು ಕಮಿಷನ್ ಹೋಗುತ್ತದೆ. ದಲ್ಲಾಳಿಗಳಿಂದ ಚಿಲ್ಲರೆ ವ್ಯಾಪಾರಿಗಳು, ತಳ್ಳುವ ಗಾಡಿಯವರು ಹೂವು ಖರೀದಿಸಿ ಮಾರಾಟ ಮಾಡುತ್ತಾರೆ. ‘ದಿನಕ್ಕೆ ಏನಿಲ್ಲವೆಂದರೂ  ₹3ರಿಂದ 4 ಲಕ್ಷ ಮೊತ್ತದ ಹೂವಿನ ವಹಿವಾಟು ನಡೆಯುತ್ತದೆ’ ಎನ್ನುತ್ತಾರೆ ದಲ್ಲಾಳಿ ಕುಮಾರ್.

ಹೂವುಗಳನ್ನು ಗುಡ್ಡೆ ಮಾಡಿ ಹರಾಜು ಹಾಕುತ್ತಾರೆ. ಸಣ್ಣ ಒಂದು ಗುಡ್ಡೆ 8 ರಿಂದ 10 ಮಾರು ಇರುತ್ತದೆ.  ಇದು ₹250ರವರೆಗೆ ಮಾರಾಟವಾಗುತ್ತದೆ. 30ರಿಂದ 40 ಮಾರು ಇರುವ ಹೂವಿನ ಗುಡ್ಡೆ ₹900ರಿಂದ 1200ರ ಧಾರಣೆಯಲ್ಲಿ ಮಾರಾಟವಾಗುತ್ತದೆ.

ಹಬ್ಬ ಹರಿದಿನಗಳು, ಮದುವೆ ಸೀಸನ್‌  ಇದ್ದಾಗ ಹೂವಿನ ಬೆಲೆ ಏರುತ್ತದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಳ ₹300ಕ್ಕೂ ಮಾರಾಟವಾಗಿದ್ದೂ ಇದೆ. ‘ಸ್ವಂತ ಹೂವಿನ ಅಂಗಡಿ ಇಟ್ಟುಕೊಂಡಿದ್ದೇನೆ. ಬೆಳಿಗ್ಗೆ ಯಶವಂತಪುರ ಮಾರುಕಟ್ಟೆಗೆ ಹೋಗಿ ದಲ್ಲಾಳಿಯಿಂದ ಹೂವು ಖರೀದಿಸಿ ಅದನ್ನು ಅಂಗಡಿಗೆ  ಮಾರುತ್ತೇನೆ. ಹೂವಿನ ವ್ಯಾಪಾರಕ್ಕೆ ನನ್ನ ಗಂಡನ ಸಹಕಾರವೂ  ಇದೆ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಶಾರದಾ.

ಋತುಮಾನ ಮತ್ತು ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ರೈತರು ಹೂ ಬೆಳೆಯುತ್ತಾರೆ. ಮಳೆಗಾಲ, ಆಷಾಢದಲ್ಲಿ ಹೂವಿನ ಬೆಲೆ ಇತರ ದಿನಗಳಿಗಿಂತ ಕಡಿಮೆ ಇರುತ್ತದೆ.
ಹೂವುಗಳನ್ನು  ಮಾರಲು ರೈತರು ಹಿಂದಿನ ರಾತ್ರಿಯೇ ಬಂದು ಇಲ್ಲಿನ ರೈಲ್ವೆ, ಮತ್ತು ಬಸ್  ತಂಗುದಾಣಗಳಲ್ಲಿ ಠಿಕಾಣಿ ಹೂಡುತ್ತಾರೆ. ಸೂರ್ಯೋದಯಕ್ಕೂ ಮುನ್ನ ನಡೆಯುವ ಹೂವಿನ ವ್ಯಾಪಾರ ಹಲವಾರು ಕುಟುಂಬಗಳಿಗೆ ಬದುಕಿನ ದಾರಿ.

***
ಸುಮಾರು 30 ವರ್ಷಗಳಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಹೂ ಖರೀದಿಸುತ್ತಿದ್ದೇನೆ. ಬೆಳಗಿನ ಜಾವ 4 ಗಂಟೆಗೆ ಬಂದು ಹೂವು ಖರೀದಿಸುತ್ತೇನೆ. ರೈತರಿಂದ ನೇರವಾಗಿ ಖರೀದಿಸಿ ಮದುವೆ–ಮುಂಜಿ, ಹಾಗೂ  ಇನ್ನಿತರ ಸಮಾರಂಭಗಳಿಗೆ  ಪೂರೈಸುತ್ತೇನೆ. ಇದರಿಂದ ಬರುವ ಲಾಭದಲ್ಲಿ ಕುಟುಂಬ ನಿರ್ವಹಣೆ ನಡೆದಿದೆ. ಈ ಹೂವಿನ ಮಾರುಕಟ್ಟೆಯ ಜತೆಗಿನ ನಂಟು ನನ್ನ ಜೀವನದ ಭಾಗವೇ ಆಗಿ ಹೋಗಿದೆ.
 –ಚೆಲುವಮ್ಮ, ಹೂವಿನ ವ್ಯಾಪಾರಿ

***
ನಾನು ಓದಿಲ್ಲ, ಬರೆದಿಲ್ಲ. ಬೇರೆ ಕೆಲಸ ಗೊತ್ತಿಲ್ಲ. ಹೂವಿನ ವ್ಯಾಪಾರ ಕೈ ಹಿಡಿದಿದೆ. ಇಲ್ಲಿಂದ ಸುಗಂಧರಾಜ, ಕಾಕಡ, ಮಲ್ಲಿಗೆ ಖರೀದಿಸಿ ಕಟ್ಟಿ ಗ್ರಾಹಕರಿಗೆ ಮಾರುತ್ತೇನೆ. ಕೆಲವೊಮ್ಮೆ ತಳ್ಳುಗಾಡಿ ಮುಖಾಂತರ ವ್ಯಾಪಾರ ಮಾಡುತ್ತೇನೆ. ಸ್ನೇಹಿತರ ಜತೆಗೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಹೂವಿನ ಅಲಂಕಾರ ಮಾಡಲು ಹೋಗುತ್ತೇನೆ.
 –ಕಾರ್ತಿಕ್, ಹೂವಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT