ADVERTISEMENT

ಮುದ್ದಾದ ಪಾದಗಳಿಗೆ ಹೂಗಳ ಅಲಂಕಾರ

ಹೇಮಾ ವೆಂಕಟ್
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಹೂವಿನ ಚಿತ್ತಾರವಿರುವ ಪಾದರಕ್ಷೆ
ಹೂವಿನ ಚಿತ್ತಾರವಿರುವ ಪಾದರಕ್ಷೆ   

ಉಡುಗೆಗೆ ಹೊಂದುವ ಬಳೆ, ಓಲೆಗಳನ್ನು ಧರಿಸುವುದು ಹೆಣ್ಣುಮಕ್ಕಳ ಮಾಮೂಲಿ ಫ್ಯಾಷನ್‌ ಆಗಿತ್ತು. ಈ ಸಾಲಿಗೆ ಈಗ ಪಾದರಕ್ಷೆಗಳೂ ಸೇರಿವೆ. ಈ ಸೌಂದರ್ಯಪ್ರೀತಿಗೆ ಪೂರಕವಾಗಿ ನೂರಾರು ವಿನ್ಯಾಸಗಳ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ.

ಒಂದು ಜೊತೆ ಚಪ್ಪಲಿ ಕಿತ್ತು ಹೋದ ನಂತರವಷ್ಟೇ ಮತ್ತೊಂದು ಖರೀದಿಸುವ ಕಾಲ ಇದಲ್ಲ. ಈಗ ಒಂದೊಂದು ಉಡುಗೆಗೂ ಪಾದರಕ್ಷೆಗಳನ್ನು ಮ್ಯಾಚ್‌ ಮಾಡಿಕೊಳ್ಳುವ ಕಾಲ ಬಂದಿದೆ. ಪಾದರಕ್ಷೆಗಳು ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿರುವುದೂ ಇದಕ್ಕೆ ಕಾರಣ. ಕೇವಲ ನೂರೈವತ್ತು, ಇನ್ನೂರು ರೂಪಾಯಿಗೆ ಆಕರ್ಷಕ ಚಪ್ಪಲಿಗಳು ನಗರದ ಎಲ್ಲಾ ಬೀದಿಗಳಲ್ಲಿ ಬಿಕರಿಯಾಗುತ್ತಿವೆ. ಅವುಗಳ ಬಾಳಿಕೆಯ ಬಗ್ಗೆ ಹೆಚ್ಚಿನ ಖಾತರಿ ಇಲ್ಲ. ಆದರೂ ಬಂದಷ್ಟು ದಿನ ಬರಲಿ ಎಂದು ಖರೀದಿಸುವ ಮ್ಯಾಚಿಂಗ್‌ಪ್ರಿಯರು ಇದ್ದಾರೆ.

(ಹೂವಿನ ಚಿತ್ತಾರವಿರುವ ಶೂ)

ADVERTISEMENT

ಹೆಣ್ಣುಮಕ್ಕಳ ಪಾದಗಳನ್ನು ಅಪ್ಪಿಕೊಂಡಿರುವ ಹೂಗಳ ಪ್ರಿಂಟ್‌ ಇರುವ ಮುದ್ದಾದ ಶೂಗಳು ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್‌ ಸೃಷ್ಟಿಸಿವೆ. ಆಕರ್ಷಕ ಬಣ್ಣಗಳಲ್ಲಿ ನೂರಾರು ಬಗೆಯ ಹೂಗಳ ಚಿತ್ತಾರವಿರುವ ಶೂಗಳು ಈಗ ಸಿಗುತ್ತವೆ. ಜೀನ್ಸ್‌ ತೊಡುವ ಮಹಿಳೆಯರು ಹೆಚ್ಚಾಗಿ ಹೂಗಳ ಚಿತ್ತಾರ ಇರುವ ಶೂಗಳನ್ನೋ, ಚಪ್ಪಲಿಗಳನ್ನೋ ಧರಿಸುತ್ತಿದ್ದಾರೆ.

ಅವರವರ ಅಭಿರುಚಿಗೆ ತಕ್ಕಂತೆ ತೆಳು ಮತ್ತು ಗಾಢ ಬಣ್ಣದ ಪ್ರಿಂಟ್‌ಗಳಿರುವ ಶೂಗಳನ್ನು ಕೊಳ್ಳುವುದು ಈಗಿನ ಟ್ರೆಂಡ್‌. ಹೈ ಹೀಲ್ಡ್‌ ಶೂ, ಚಪ್ಪಲಿಗಳು ಹೂವಿನ ಚಿತ್ತಾರದಲ್ಲಿ ಲಭ್ಯ. ಚಪ್ಪಟೆ, ಎತ್ತರದ ಹಿಮ್ಮಡಿ, ಲೋಫೆರ್‌, ಬೋಟ್‌ ಶೂ, ಬೂಟ್ಸ್‌ ಎಲ್ಲವೂ ಫ್ಲೋರಲ್‌ ವಿನ್ಯಾಸದಲ್ಲಿ ಸಿಗುತ್ತಿವೆ. ಎಂಬ್ರಾಯಿಡರಿ, ಲೇಸ್‌, ಬಕಲ್‌ ಸ್ಟ್ರಾಪ್‌... ಹೀಗೆ ವೈವಿಧ್ಯಮಯ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.

ಆರಂಭದಲ್ಲಿ ಬೇಸಿಗೆ ಕಾಲಕ್ಕೆಂದೇ ವಿನ್ಯಾಸ ಮಾಡಿದ ಕ್ಯಾನ್ವಾಸ್‌ ಶೂಗಳಷ್ಟೇ ಬರುತ್ತಿದ್ದವು. ಆದರೆ ಈಗ ಎಲ್ಲಾ ಮೆಟೀರಿಯಲ್‌ನಲ್ಲೂ ಫ್ಲೋರಲ್‌ ಪ್ರಿಂಟ್‌ ಸಾಮಾನ್ಯ ಎನಿಸಿದೆ. ಎಲ್ಲಾ ಕಾಲಕ್ಕೂ ಧರಿಸಬಹುದಾದ ಪಾದರಕ್ಷೆಗಳಾಗಿ ಫ್ಲೋರಲ್‌ ಪ್ರಿಂಟ್‌ ಜನಪ್ರಿಯಗೊಂಡಿದೆ.

ಎಲ್ಲರಿಗೂ ಇಷ್ಟ: ಕಾಲೇಜು ಯುವತಿಯರು, ದುಡಿಯುವ ಮಹಿಳೆಯರು, ಮಕ್ಕಳು ಹೀಗೆ ಹಿರಿಕಿರಿಯರೆನ್ನದೇ ಎಲ್ಲರೂ ಈ ಶೂಗಳಿಗೆ ಮಾರುಹೋಗಿದ್ದಾರೆ. ಹೀಲ್ಸ್‌ ಇಲ್ಲದ, ಚಪ್ಪಟೆ ಶೂಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವು ನಡೆಯುವುದಕ್ಕೂ ಆರಾಮದಾಯಕವಾಗಿರುತ್ತವೆ. ಧಾವಂತದ ಓಡಾಟದಲ್ಲಿ ಪಾದದ ರಕ್ಷಣೆಯ ಜೊತೆಗೆ ಸೌಂದರ್ಯವನ್ನೂ ಇವು ಹೆಚ್ಚಿಸುತ್ತದೆ. ನೋಡುವುದಕ್ಕೂ ಆಕರ್ಷಕವಾಗಿವೆ. ಜೀನ್ಸ್‌, ಮಿಡಿ, ಕ್ಯಾಷುವಲ್‌ ಪ್ಯಾಂಟ್‌, ಫ್ರಾಕ್‌, ಶಾರ್ಟ್ಸ್‌ ಹೀಗೆ ಎಲ್ಲ ಬಗೆಯ ಆಧುನಿಕ ಉಡುಗೆಗಳಿಗೂ ಈ ಶೂಗಳು ಸರಿ ಹೊಂದುತ್ತವೆ.

ಆನ್‌ಲೈನ್‌ ಸ್ಟೋರ್‌ಗಳಲ್ಲೂ ನೂರಾರು ಬಗೆಯ ಫ್ಲೋರಲ್‌ ಪಾದರಕ್ಷೆಗಳು ಸಿಗುತ್ತಿವೆ. ಗುಣಮಟ್ಟ ಮತ್ತು ಬ್ರ್ಯಾಂಡ್‌ಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಿದೆ. ಆನ್‌ಲೈನ್‌ ದರ ₹300ರಿಂದ ಆರಂಭವಾಗಿ 5000ರದವರೆಗೂ ಇದೆ.

**

ಮೊದಲೆಲ್ಲ ಕ್ಯಾನ್ವಾಸ್‌ನಲ್ಲಿ ಮಾತ್ರ ಫ್ಲೋರಲ್‌ ವಿನ್ಯಾಸ ಇರುವ ಪಾದರಕ್ಷೆಗಳು ಬರುತ್ತಿದ್ದವು. ಈಗ ಎಲ್ಲ ಮೆಟೀರಿಯಲ್‌ನಲ್ಲೂ ಲಭ್ಯವಿದೆ. ಎಲ್ಲ ವಯಸ್ಸಿನ ಮಹಿಳೆಯರೂ ಈಗ ಫ್ಲೋರಲ್‌ ವಿನ್ಯಾಸದ ಶೂಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮಲ್ಲಿ ₹350ಯಿಂದ 700ರವರೆಗೆ ದರವಿದೆ.

‌–ಉದಯಕುಮಾರ್‌, ಪ್ಯಾಂಟಲೂನ್ಸ್‌

**

(ಹೂವಿನ ಚಿತ್ತಾರದ ಲೋಫೆರ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.