ADVERTISEMENT

ಮೂಕ ರಾಗದ ಮಾತು

ಹರವು ಸ್ಫೂರ್ತಿ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
‘ಬಯೋಪಿಕ್‌ ಆಫ್ ನಾರಾಯಣ’ ಕಿರುಚಿತ್ರದ ದೃಶ್ಯ
‘ಬಯೋಪಿಕ್‌ ಆಫ್ ನಾರಾಯಣ’ ಕಿರುಚಿತ್ರದ ದೃಶ್ಯ   

ಅನ್ನಕ್ಕಾಗಿ ಮನೆಮನೆ ಅಲೆಯುತ್ತಾ, ಹುಟ್ಟಿದ ಕಾರಣಕ್ಕೆ ಕಷ್ಟನೋ ಸುಖನೋ ಬದುಕ್ಕುತ್ತಿರುವ ಜೀವಗಳು ನಮ್ಮ ನಡುವೆ ಸಾಕಷ್ಟಿವೆ. ಈ ಭೂಮಿ ತನ್ನೊಬ್ಬನದ್ದೇ ಎಂಬ ಸರ್ವಾಧಿಕಾರ ಸ್ಥಾಪಿಸುತ್ತಿರುವ ಮನುಷ್ಯ, ಪ್ರಾಣಿ–ಪಕ್ಷಿಗಳಿಗೆ ಬದುಕುವ ಅವಕಾಶವನ್ನೇ ನೀಡುತ್ತಿಲ್ಲ ಎಂಬ ತಿರುಳನ್ನು ಇಟ್ಟುಕೊಂಡು ನಿರ್ಮಿಸಿರುವ ಕಿರುಚಿತ್ರ ‘ದ ಬಯೋಪಿಕ್‌ ಆಫ್ ನಾರಾಯಣ’.

17.30 ನಿಮಿಷದ ಈ ಕಿರುಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದವರು ವಿಷ್ಣು ಹೆಬ್ಬಾರ್.ಕಿರುಚಿತ್ರದ ಮುಖ್ಯಪಾತ್ರವನ್ನು ತೆರೆ ಮೇಲೆ ತೋರಿಸಿರುವ ರೀತಿ ವಿಶೇಷವಾಗಿದೆ.. ಕಿರುಚಿತ್ರದ ಆಶಯವನ್ನು ತಲುಪಿಸುವಂತೆ ಕತೆ ಹೆಣೆದಿರುವ ಶೈಲಿಯೂ ಗಮನ ಸೆಳೆಯುತ್ತದೆ.

‘ಒಂದು ಹೊತ್ತಿನ ಊಟಕ್ಕಾಗಿ ಬೀದಿ ನಾಯಿಗಳು ಮನುಷ್ಯನನ್ನು ಅವಲಂಬಿಸುತ್ತವೆ. ತಿಂದ ಒಂದು ತುತ್ತಿನ ಋಣಕ್ಕಾಗಿ ‘ನಿಯತ್ತು, ವ್ಯಕ್ತಿ ನಿಷ್ಠೆ’ ತೋರುತ್ತಾ ಬದುಕುವ ನಾಯಿಗಳನ್ನು ಮನುಷ್ಯ ಹೇಗೆ ನಡೆಸಿಕೊಳ್ಳುತ್ತಾನೆ ಎನ್ನುವುದು ನನಗೆ ಯಾವಾಗಲೂ ಬೇಸರ ತರಿಸುತ್ತಿತ್ತು. ಇದನ್ನೇ ಇಟ್ಟುಕೊಂಡು ಕಿರುಚಿತ್ರ ನಿರ್ಮಿಸಬೇಕು ಎಂದುಕೊಂಡೆ.

ADVERTISEMENT

ಒಂದು ನಾಯಿಯ ಬದುಕು ಹೇಗಿರುತ್ತದೆ, ಎಂಬುದನ್ನು ಹೇಳಲು ವ್ಯಕ್ತಿಯೊಬ್ಬನನ್ನು ನಾಯಿಯ ಪಾತ್ರದಲ್ಲಿ ತೋರಿಸಿದ್ದೇನೆ. ನಾಯಿಯ ಪ್ರಾಣಕ್ಕೆ, ಬದುಕಿಗೆ ಬೆಲೆಯೇ ಇಲ್ಲ. ತಾನೊಬ್ಬನೇ ಈ ಭೂಮಿ ಮೇಲೆ ಬದುಕಬೇಕು ಎಂಬ ಸರ್ವಾಧಿಕಾರ ಗುಣದಿಂದಾಗಿ ಮನುಷ್ಯ ಇತರ  ಪ್ರಾಣಿಗಳನ್ನು ಕೀಳಾಗಿ ಕಾಣುತ್ತಿದ್ದಾನೆ’ ಎಂದು ತಮ್ಮ ಕಿರುಚಿತ್ರದ ಕಥೆ ಹುಟ್ಟಿದ ಬಗೆಯನ್ನು ವಿವರಿಸುತ್ತಾರೆ ಕಿರುಚಿತ್ರದ ನಿರ್ದೇಶಕ ವಿಷ್ಣು ಹೆಬ್ಬಾರ್.

‘ಉದರನಿಮಿತ್ತಂ ಬಹುಕೃತ ವೇಷಂ’ ಅಂದರೆ ಹೊಟ್ಟೆಪಾಡಿಗೆ ಮನುಷ್ಯ ಸಾಕಷ್ಟು ವೇಷ ತೊಡುತ್ತಾನೆ, ಆದರೆ ಪ್ರಾಣಿಗಳಿಗೆ ನಗ್ನವೇಷವೊಂದೇ ಇರುವುದು. ಬಣ್ಣಬಣ್ಣದ ವೇಷತೊಡದೆ ತನ್ನ ನಗ್ನವೇಷದ ಅಸ್ತಿತ್ವದಲ್ಲೇ ಹೊಟ್ಟೆಪಾಡಿಗೆ ಮನೆಮನೆ ಅಲೆಯುತ್ತದೆ. ಇಂಥ ಪ್ರಾಣಿಗಳನ್ನು ನಾವು ಕಾಪಾಡಬೇಕು. ಈ ನಿಸರ್ಗದ ಒಡಲಲ್ಲಿ ಬದುಕುವ ನಾವೆಲ್ಲರೂ ಒಬ್ಬರಿಗೊಬ್ಬರು ಪೂರಕವಾಗಿ ಬದುಕಬೇಕು. ಎನ್ನುವುದನ್ನು ಕಿರುಚಿತ್ರ ಸಾರುತ್ತದೆ.

ಒಂದು ಪ್ರಾಣಿ ಸಂಕುಲವನ್ನು ಪ್ರತಿನಿಧಿಸಲು ಒಬ್ಬ ಮನುಷ್ಯನನ್ನು ರೂಪಕವಾಗಿ ಬಳಸಿರುವುದಕ್ಕೆ ಅವರಲ್ಲಿ ಕಾರಣವಿದೆ. ಒಬ್ಬ ಮನುಷ್ಯನಿಗೆ ಎಷ್ಟುಬೆಲೆ ಕೊಡುತ್ತೇವೋ ಅಷ್ಟೇ ಪ್ರಾಮುಖ್ಯತೆಯನ್ನು ಪ್ರಾಣಿಗಳಿಗೂ ಕೊಡಬೇಕು ಎನ್ನುವುದು ಅವರ ವಿವರಣೆ.

‘ರಿವರ್ಸ್‌ ಸ್ಕ್ರೀನ್ ಪ್ಲೇ’ ತಂತ್ರವನ್ನು ಕಿರುಚಿತ್ರದ ಕಥೆ ಹೇಳಲು ಬಳಸಿಕೊಂಡಿದ್ದಾರೆ ನಿರ್ದೇಶಕ. ‘ನಾರಾಯಣ’ ಯಾರು ಎನ್ನುವ ಕುತೂಹಲವನ್ನು ಕೊನೆವರೆಗೆ ಉಳಿಸಿಕೊಳ್ಳಲು ಈ ತಂತ್ರಗಾರಿಕೆ ಸಹಕಾರಿಯಾಗಿದೆ.

ಚಿತ್ರೀಕರಣದ ಸಾಕಷ್ಟು ಭಾಗವನ್ನು ಕತ್ತಲಲ್ಲೇ ಚಿತ್ರೀಕರಿಸಲಾಗಿದೆ. ಇದಕ್ಕೂ ಕಾರಣ ನೀಡುವ ನಿರ್ದೇಶಕ ವಿಷ್ಣು ಹೆಬ್ಬಾರ್ ‘ಪ್ರಾಣಿಗಳ ಬದುಕಿನ ಕರಾಳ ಭಾಗವನ್ನು ತೆರೆಯ ಮೇಲೆ ತರುವ ಪ್ರಯತ್ನವಿದು’ ಎನ್ನುತ್ತಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ವಿಷ್ಣು ಹೆಬ್ಬಾರ್, ಕಿರುಚಿತ್ರದ ಸಂಭಾಷಣೆ ಶೈಲಿಯಲ್ಲೂ ಮಲೆನಾಡಿನ ಸೊಗಡನ್ನು ಕಟ್ಟಿಕೊಟ್ಟಿದ್ದಾರೆ. ಸಂಭಾಷಣೆಗಿಂತ ಮೌನದಲ್ಲೇ ಭಾವಗಳ ಅಭಿವ್ಯಕ್ತಿಯಾಗಿದೆ. ಪ್ರಾಣಿಗಳ ಮೂಕವೇದನೆಯನ್ನು ಮೌನವಾಗೇ ನೋಡುಗರಿಗೆ ತಲುಪಿಸಿದ್ದಾರೆ ನಿರ್ದೇಶಕ.

ಕನ್ನಡದ ಹಲವು ಸಿನಿಮಾಗಳಿಗೆ ಸಹ ಛಾಯಾಗ್ರಾಹಕರಾಗಿ ದುಡಿದ ಅನುಭವ ‘ದ ಬಯೋಪಿಕ್‌ ಆಫ್‌ ನಾರಾಯಣ’ ಕಿರುಚಿತ್ರದ ಚೌಕಟ್ಟಿನಲ್ಲಿ ಕಾಣುತ್ತದೆ.

‘ಫಸ್ಟ್‌ ರ್‌್ಯಾಂಕ್ ರಾಜು’ ಸಿನಿಮಾ ಸಂಕಲನ ಮಾಡಿದ ಅನುಭವಿ ಗಿರಿ ಮಹೇಶ ಚೊಕ್ಕವಾಗಿ ಕಿರುಚಿತ್ರದ ಸಂಕಲನ ಮಾಡಿದ್ದಾರೆ.

‘ವಿಷ್ಣು ಹೆಬ್ಬಾರ್ ಎಂಜಿನಿಯರಿಂಗ್‌ ಓದಿದ್ದರೂ ಆಸಕ್ತಿ ಬೆಳೆದಿದ್ದು ಸಿನಿಮಾ ಕ್ಷೇತ್ರದತ್ತ. ಸಿನಿಮಾ ನಿರ್ದೇಶನದ  ಆಸೆಗೆ ಪೂರಕವಾಗಿ ಹಲವು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಹೊಂಬಣ್ಣ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿಯೂ ಅವರು ದುಡಿದ್ದಾರೆ. 

ಕಿರುದಾರಿ
ಕಿರುಚಿತ್ರ: ‘ಬಯೋಪಿಕ್‌ ಆಫ್ ನಾರಾಯಣ’

ನಿರ್ದೇಶನ: ವಿಷ್ಣು ಹೆಬ್ಬಾರ್
ಸಹ ನಿರ್ದೇಶನ:ಗಿರೀಶ್ ಮಲ್ನಾಡ್,ನಿತಿನ್ ಗೌಡ
ಸಂಕಲನ: ಗಿರಿ ಮಲ್ನಾಡ್
ಛಾಯಾಗ್ರಹಣ: ರೋಷನ್ ಝಾ,
ಸಹಾಯ: ಬ್ರಹ್ಮಾನಂದ
ಸಂಗೀತ: ಪ್ರಜೋತ್
ಕಲಾವಿದರು: ಪ್ರವೀಣ್ ಮಂದಗದ್ದೆ, ರೋಹಿತ್ ಹೊಸೂರ್, ನಯನಾ, ರೋಹಿತ್, ಸಂದೀಪ್ ಕುಂದಾದ್ರಿ, ಗಿರಿಶ್ ಮಲ್ನಾಡ್, ಕೃಷ್ಣಮೂರ್ತಿ, ನೇತ್ರಾವತಿ, ಸಂದೇಶ್ ಹೊಸೂರ್, ಶಿವು, ಸುನೀಲ್.
ಬಳಸಿದ ಕ್ಯಾಮೆರಾ: ಕ್ಯಾನಾನ್ ಡಿ 70
ಇ–ಮೇಲ್: v.vishnu@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.