ADVERTISEMENT

ಮೇರ್ತಿ ಗುಡ್ಡದ ನೆತ್ತಿ ಹತ್ತಿ...

ಸುತ್ತಾಣ

ಸುಚೇತಾ ಭಾರದ್ವಾಜ್‌
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಹಚ್ಚ ಹಸಿರ ಸೆರಗು ಹೊದ್ದು ಕಂಗೊಳಿಸುತ್ತಿರುವ ಮೇರ್ತಿ ಗುಡ್ಡದ ಸುಂದರ ನೋಟ  	ಚಿತ್ರಗಳು: ವಿನಾಯಕ ಹೆಗಡೆ ಮತ್ತು ಶ್ರೀಹರ್ಷ ಡಿ.ವಿ.
ಹಚ್ಚ ಹಸಿರ ಸೆರಗು ಹೊದ್ದು ಕಂಗೊಳಿಸುತ್ತಿರುವ ಮೇರ್ತಿ ಗುಡ್ಡದ ಸುಂದರ ನೋಟ ಚಿತ್ರಗಳು: ವಿನಾಯಕ ಹೆಗಡೆ ಮತ್ತು ಶ್ರೀಹರ್ಷ ಡಿ.ವಿ.   

ಬೆಂಗಳೂರಿನ ಮಂದಿಯ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ವಾರಾಂತ್ಯ ಬಂತೆಂದರೆ ಸಾಕು, ನಗರದ ಜಂಜಡದಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು ಪ್ರವಾಸಕ್ಕೆ ಎಲ್ಲಿಗೆ ಹೋಗಬಹುದೆಂಬ ಚರ್ಚೆ ಪ್ರಾರಂಭವಾಗುತ್ತದೆ. ಇದು ಹೆಚ್ಚು ಕಡಿಮೆ ಪ್ರತೀ ವಾರದ ಕಥೆ.

ನಾವೂ ಹೀಗೆ ಬೆಂಗಳೂರು ಬೇಜಾರೆನಿಸಿ ಎಲ್ಲಾದರೂ ಹೋಗೋಣವೆಂದು ಮಾತಾಡಿಕೊಳ್ಳುತ್ತಿದ್ದ ಸಮಯದಲ್ಲಿ ನಮ್ಮ ಗೆಳತಿ ಶಿಲ್ಪಾಳಿಂದ ಅವರ ಅಜ್ಜನ ಊರಾದ ಕವಿಲುಕುಡಿಗೆಗೆ ಹೋಗೋಣ ಎಂದು ಆಹ್ವಾನ ಬಂದಿತು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸಮೀಪದ ಬಸರಿಕಟ್ಟೆಯ ಹತ್ತಿರದ ಊರು ಕವಿಲುಕುಡಿಗೆ. ಆ ಸುಂದರ ಊರು ಮೇರ್ತಿ ಗುಡ್ಡದ ಮಡಿಲಿನಲ್ಲಿದೆ.
ಬಸರಿಕಟ್ಟೆಯಿಂದ ಅಲ್ಲೇ ತೋಟದಲ್ಲೆಲ್ಲೋ ಕೆಳಗೆ ಇಳಿದು, ಮತ್ಯಾವುದೋ ಗದ್ದೆ ಬಯಲ ದಾರಿ ದಾಟಿ ಸಾಗಿದರೆ ಶಿಲ್ಪಾಳ ಅಜ್ಜನ ಮನೆ ಬರುತ್ತದೆ.

ಅದು ನಮ್ಮ ಇನ್ನೊಬ್ಬ ಸ್ನೇಹಿತ ಸಂದೀಪನ ಮನೆ ಕೂಡ ಹೌದು. ನಮ್ಮ ಗುಂಪಿನಲ್ಲಿ ಸಿಂಪಲ್ ಎನ್ನುವ ಹೆಸರಿನಿಂದ ಪ್ರಸಿದ್ಧ ಇವನು. ಕಾರಣಾಂತರಗಳಿಂದ ಅವನು ನಮ್ಮೊಡನೆ ಬರಲಾಗಲಿಲ್ಲ.

ಆದರೂ ನಾವು 10 ಜನರ ಗುಂಪು ಶಿಲ್ಪಾ ನೇತೃತ್ವದಲ್ಲಿ ಮೇರ್ತಿ ಗುಡ್ಡ ಹತ್ತುವ ತಯಾರಿಯೊಂದಿಗೆ ಕವಿಲುಕುಡಿಗೆಗೆ ಹೊರಟೆವು.

ಬೆಂಗಳೂರಿಂದ ಬಾಳೆಹೊನ್ನೂರು ಮಾರ್ಗವಾಗಿ ಬಸರಿಕಟ್ಟೆಯ ದಾರಿಯಲ್ಲಿ ರಾತ್ರಿಯೆಲ್ಲಾ ಅಂತ್ಯಾಕ್ಷರಿ ಆಡುತ್ತಾ ಸಾಗಿದೆವು. ಬೆಂಗಳೂರಿನಿಂದ ಬಾಳೆಹೊನ್ನೂರಿನ ದಾರಿ ಕಳೆದು ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಬೆಳಗಿನ ಜಾವದ ಹೊತ್ತಿಗೆ ಬಸರಿಕಟ್ಟೆ ತಲುಪಿದೆವು.

ಆದರೆ ಅಲ್ಲಿಂದ ಕವಿಲುಕುಡಿಗೆಗೆ ಹೋಗುವ ದಾರಿಯನ್ನು ಶಿಲ್ಪಾ ಮರೆತಿದ್ದಳು (ಅವಳು ಪ್ರತೀ ವರ್ಷವೂ ಅಲ್ಲಿಗೆ ತಪ್ಪದೇ ಹೋಗುತ್ತಿದ್ದರೂ ಸಹ ದಾರಿ ತಪ್ಪಿತ್ತು!). ಯಾವುದೋ ದಾರಿಯಲ್ಲಿ ನಮ್ಮ ಗಾಡಿಯನ್ನು ಕರೆದೊಯ್ದು, ಅಲ್ಲಿ ಮುಂದೆಲ್ಲೂ ಹೋಗಲಾರದೆ ವಾಹನದ ಚಾಲಕ ಎಲ್ಲರಿಗೂ ಬೈದುಕೊಳ್ಳುತ್ತಾ ಇಂತಹ ದಾರಿಯಲ್ಲಿ ನಾನು ಬರಲಾರೆ  ಎಂದು ಗೊಣಗುತ್ತಿದ್ದ.

ಎಲ್ಲರಿಗೂ ಅವನ ಮಾತು ಕಿರಿಕಿರಿ ಎನಿಸಿತ್ತು. ಹಾಗೂ ಹೀಗೂ ಸರಿದಾರಿ ಸೇರಿ ಸಂದೀಪನ ಮನೆ ತಲುಪಿದೆವು.

ಗುಡ್ಡದ  ತಪ್ಪಲಲ್ಲಿತ್ತು ಅವರ ಮನೆ. ಮನೆಯ ಮುಂದೆ ಅಡಿಕೆ ತೋಟ. ಸುತ್ತಲೂ ಹಸಿರು, ಇನ್ನೂ ಕೆಳಗಿಳಿದು ಸ್ವಲ್ಪ ಮುಂದೆ ಹೋದರೆ ಭತ್ತದ ಗದ್ದೆಗಳು. ತೆನೆಗಳು ಬಲಿತು ತೂಗಾಡುತ್ತಿದ್ದವು. ಅಲ್ಲಿ ಹೋದವರಿಗೆ ಸಂದೀಪನ ಅಪ್ಪ, ಅಮ್ಮನಿಂದ ಆತ್ಮೀಯ ಸ್ವಾಗತ ಸಿಕ್ಕಿತು.

ಅಡಿಕೆ ಕುಯಿಲಿನ ಸಮಯ. ಆದರೂ ಆ ಕೆಲಸದ ಮಧ್ಯೆಯೂ  ಅವರು ನಮಗಾಗಿ ಅವಲಕ್ಕಿ ಕಲಿಸಿಕೊಟ್ಟರು. ಬೆಳಗಿನ ತಿಂಡಿಯ ಜೊತೆಗೆ ಚಿಕ್ಕಮಗಳೂರಿನ ಬೆಚ್ಚಗಿನ ಕಾಫಿ. ಮಧ್ಯಾಹ್ನಕ್ಕೂ ಬುತ್ತಿ ತಯಾರಿಸಿ ನಮಗಾಗಿ ಕಟ್ಟಿಕೊಟ್ಟಿದ್ದರು. ಅಂತೂ ಹೊಟ್ಟೆಗೆ ಬಿದ್ದ ಮೇಲೆ ನಮ್ಮ  ಸೈನ್ಯ ಬೆಟ್ಟವನ್ನೇರಲು ಸನ್ನದ್ಧವಾಯಿತು.

ಮೊದಲೇ ದಾರಿ ತಪ್ಪಿಸಿದ್ದ ಶಿಲ್ಪಾಳನ್ನು ನಂಬಿಕೊಂಡು ಗುಡ್ಡ ಹತ್ತಿ ಇಳಿಯುತ್ತೇವೆಂಬ ನಂಬಿಕೆ ಇದ್ದರೂ ಮೇರ್ತಿ ಗುಡ್ಡಕ್ಕೇ ಕರೆದೊಯ್ಯುತ್ತಾಳೆಂಬ ಭರವಸೆ ಎಳ್ಳಷ್ಟೂ ಇರಲಿಲ್ಲ. ಅದಕ್ಕಾಗಿ ಶಿಲ್ಪಾಳ ಮಾವ ಮಾರ್ಗದರ್ಶಿಯಾಗಿ ಬರುವರೆಂದಾಗ ನಾವು ಖುಷಿಯಾದೆವು.

ಮೇರ್ತಿ ಚಿಕ್ಕ ಗುಡ್ಡ. ಒಟ್ಟು ಸುಮಾರು 5 ಕಿ.ಮೀ. ಅಷ್ಟೇ ಕ್ರಮಿಸಬೇಕಾಗಿದ್ದ ದೂರ. ಗುಡ್ಡ ಹತ್ತಲು ಅನುಮತಿ ಪತ್ರ ಬೇಕು. ಪ್ರಾರಂಭದಲ್ಲಿ ಎತ್ತ ನೋಡಿದರತ್ತ ಟೀ ಎಸ್ಟೇಟ್‌ಗಳು. ಸ್ವಲ್ಪ ದೂರ ಸಮತಟ್ಟಾದ ದಾರಿಯಲ್ಲಿ ಟೀ ಗಿಡಗಳ ನಡುವೆ ಸಾಗಿದ ಮೇಲೆ ಅಲ್ಲಿದ್ದ ಕಚೇರಿಯಲ್ಲಿ ಮುಂದೆ ಸಾಗಲು ಕೇಳಿಕೊಂಡು ಪಡೆದು ಚಾರಣ ಪ್ರಾರಂಭಿಸಿದೆವು. ಚಳಿಗಾಲವಾದರೂ ಬಿಸಿಲು ಪ್ರಖರವಾಗಿತ್ತು.

ಅದು ಇದು ಹರಟೆ ಕೊಚ್ಚುತ್ತಾ ಸಾಗಿದವರಿಗೆ ಎದುರಾದದ್ದು ಚಿಕ್ಕ ಗುಹೆ. ಆ ಸ್ಥಳದ ಹೆಸರು ತಪಾಸಾಣ. ಗುಹೆಯ ಒಳಗೆ ಹೋದರೆ ಅಲ್ಲೊಂದು ಗಣಪತಿಯ ವಿಗ್ರಹ. ಯಾವ ಕಾಲದಲ್ಲಿ ಯಾರು ಪ್ರತಿಷ್ಠಾಪಿಸಿದ್ದೋ ಏನೋ. ಆ ಗುಹೆಯ ಒಳಗೆ ಯಾವುದೋ ಸುರಂಗ ಮಾರ್ಗವಿದೆಯಂತೆ. ನೋಡೋಣವೆಂದರೆ ಅಲ್ಲಿಂದ ಮುಂದೆ  ಸಾಗುವ ದಾರಿ ಮುಚ್ಚಿತ್ತು.

ತಪಾಸಾಣದ ಬಳಿಯೊಂದು ನೀರಿನ ಚಿಲುಮೆ. (ಗುಡ್ಡ ಹತ್ತುವವರಿಗೆ ಮುಂದೆ ಎಲ್ಲೂ ನೀರು ಸಿಗುವುದಿಲ್ಲವಾದ್ದರಿಂದ ಅಲ್ಲೇ ನೀರು ತುಂಬಿಕೊಳ್ಳುವುದು ಒಳಿತು). ಅಲ್ಲಿ ಚಿಕ್ಕ ಚಿಕ್ಕ ಜಿಗಣೆಗಳು ಇದ್ದವು. ಸರಿಯಾಗಿ ಗಮನಿಸಿದರೆ ಮಾತ್ರ ಕಾಣುವಂತಹ ಗಾತ್ರದವು.

ರಕ್ತ ಕುಡಿದು ಬೃಹದಾಕಾರಕ್ಕೆ ಬೆಳೆಯುವ ತ್ರಾಣ ಉಳ್ಳವು. ಅವುಗಳ ಆಹಾರವಾಗದೆ ಜಾಗ್ರತೆಯಿಂದ, ಅಲ್ಲಲ್ಲಿ ನಮ್ಮ ನೆನಪನ್ನು  ಹಸಿರಾಗಿರಿಸುವ ಚಿತ್ರಗಳನ್ನು ತೆಗೆಯುತ್ತಾ, ಸೆಲ್ಫಿ ಅಂತ ಗುಂಪಿನಲ್ಲಿ ನಿಂತು ಚಿತ್ರಪಟಗಳಿಗೆ ಪೋಸು ಕೊಡುತ್ತಾ ಸಾಗಿದೆವು.

ಚಿಕ್ಕ ಚಾರಣ ಆಗಿದ್ದರಿಂದ ಗುಡ್ಡದ ತುದಿ ತಲುಪಲು ಹೆಚ್ಚು ಹೊತ್ತಾಗಲಿಲ್ಲ. ಆದರೆ ಬಿಸಿಲು ಮಾತ್ರ ತೀಕ್ಷ್ಣವಾಗಿತ್ತು.

ಕವಿಲುಕುಡಿಗೆಯ ಊರಿನ ಜಾತ್ರೆಯ ಸಮಯದಲ್ಲಿ  ಶಿಲ್ಪಾ, ಸಂದೀಪ ಎಲ್ಲರೂ ಮೇರ್ತಿ ಗುಡ್ಡ ಹತ್ತುತ್ತಾರಂತೆ (ಆದರೂ ಶಿಲ್ಪಾ ದಾರಿ ತಪ್ಪಿದ್ದು ಸೋಜಿಗದ ಸಂಗತಿ).
ಮೇಲೊಂದು ಚಿಕ್ಕ ಗಣಪತಿ ವಿಗ್ರಹ ಇದೆ.

ದೇವರಿಗೊಂದು ನಮಸ್ಕಾರ ಮಾಡಿ ಸುಸ್ತಾಗಿ ಕುಳಿತು ಖರ್ಜೂರ ಮತ್ತು ಕಟ್ಟಿ ತಂದಿದ್ದ ಬುತ್ತಿಯನ್ನು ತಿಂದೆವು. ನೀರನ್ನು ದಾರಿಯಲ್ಲೇ ಖಾಲಿ ಮಾಡಿಕೊಂಡಿದ್ದರಿಂದ ಕೆಳಗಿಳಿದು ತಪಾಸಾಣ ತಲುಪುವಷ್ಟರಲ್ಲಿ ಎಲ್ಲರೂ ಬಾಯಾರಿ ನೀರು ಸಿಕ್ಕಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದರು.

ಅಲ್ಲಿ ಹರಿಯುತ್ತಿದ್ದ ನೀರು ನೋಡಿ ಎಲ್ಲರಿಗೂ ಹೋದ ಜೀವ ಬಂದಂತಾಯಿತು. ಮನಸೋ ಇಚ್ಛೆ ನೀರು ಕುಡಿದು ಸುಧಾರಿಸಿಕೊಂಡು ಟೀ ಎಸ್ಟೇಟ್‌ಗಳಲ್ಲಿ ಸುತ್ತಾಡುತ್ತಾ ನಿಧಾನಕ್ಕೆ ಸಂದೀಪನ ಮನೆಗೆ ನಮ್ಮ ಸವಾರಿ ಸಾಗಿತು.

ಅವರ ಮನೆಯಲ್ಲಿ ಆ ರಾತ್ರಿ ಬಾಳೆ ಎಲೆಯಲ್ಲಿ ಭರ್ಜರಿ ಊಟ. ಪಾಯಸದ ಸವಿ ನೆನೆದಾಗ ಇಂದು ಕೂಡ ಬಾಯಲ್ಲಿ ನೀರೂರುತ್ತದೆ.

ಚಾರಣ ಮುಗಿಸಿ ಹಲವು ದಿನ ಕಳೆದರೂ ಚಿಕ್ಕಮಗಳೂರು, ಮಲೆನಾಡು, ನಮ್ಮ ಗೆಳೆಯರ ಗುಂಪು, ಸಂದೀಪನ ಮನೆ, ಅವರ ತಂದೆ ತಾಯಿಯ ಆತ್ಮೀಯತೆ, ಮೇರ್ತಿ ಗುಡ್ಡದ  ಚಾರಣ, ಎಲ್ಲರ ಜೊತೆಯಲ್ಲಿ ನಲಿದ ಕ್ಷಣಗಳು  ಇವೆಲ್ಲವೂ ನಿನ್ನೆ ಮೊನ್ನೆಯದೇನೋ ಎಂಬಂತೆ ನೆನಪಿನ ಹಾಳೆಯಲ್ಲಿ ದಾಖಲಾಗಿವೆ.

*
ಮೇರ್ತಿ ಗುಡ್ಡಕ್ಕೆ ಹೋಗುವುದು ಹೇಗೆ?
ಬೆಂಗಳೂರಿನಿಂದ ಬಾಳೆಹೊನ್ನೂರಿನ ಬಸರಿಕಟ್ಟೆಗೆ 311 ಕಿ.ಮೀ. ದೂರ. ಐದೂವರೆ ಗಂಟೆಗಳ ಪ್ರಯಾಣ. ಬಾಳೆಹೊನ್ನೂರಿನಿಂದ ಬಸರಿಕಟ್ಟೆಗೆ 17 ಕಿ.ಮೀ ದೂರ. ಬಸರಿಕಟ್ಟೆಯಲ್ಲಿ ತಿಂಡಿ ತಿಂದು, ಮಧ್ಯಾಹ್ನದ ಊಟವನ್ನೂ ಕಟ್ಟಿಸಿಕೊಂಡು ಮೇರ್ತಿಗುಡ್ಡ ಏರಲು ಹೊರಡಬಹುದು.

ಗುಡ್ಡದ ಬುಡದವರೆಗೆ ರಸ್ತೆಯಿರುವುದರಿಂದ ವಾಹನದಲ್ಲಿಯೇ ಅಲ್ಲಿಯವರೆಗೆ ತಲುಪಬಹುದು. ಬೆಟ್ಟ ಹತ್ತಿ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುವುದಾದರೆ ಬಾಳೆಹೊನ್ನೂರಿನಲ್ಲಿ ಲಾಡ್ಜ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.