ADVERTISEMENT

ಮೈದುಂಬಿ ಹರಿವ ಹೇಮಾವತಿ ಜಲಾಶಯ

ಎಂ.ಎಸ್.ಧರ್ಮೇಂದ್ರ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಹಾಸನ ಜಿಲ್ಲೆಯಲ್ಲಿರುವ ಗೋರೂರಿನ ಹೇಮಾವತಿ ಜಲಾಶಯ ಎರಡು ದಶಕಗಳ ಬಳಿಕ ಮೈದುಂಬಿಕೊಂಡಿದೆ. ಸೇತುವೆಯ ಮೇಲೆ ಹಾಸನಕ್ಕೆ ಸಾಗುವ ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಧುಮ್ಮಿಕ್ಕಿ ಹರಿಯುವ ನೀರಿನ ಸೌಂದರ್ಯವನ್ನು ನೋಡುವುದೇ ಒಂದು ಚೆಂದ. ಕಾಲೇಜು ಹುಡುಗ–ಹುಡುಗಿಯರು ಸುರಿಯುವ ಮಳೆಯನ್ನು ಲೆಕ್ಕಿಸದೆ ಜಲಾಶಯಕ್ಕೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸುತ್ತಾರೆ.

ಇನ್ನು ಪ್ರೇಮಿಗಳ ಪಾಲಿಗೆ ಇದು ಸ್ವರ್ಗ. ಭೋರ್ಗರೆಯುವ ಜಲಪಾತದ ಹನಿಗಳ ತುಂತುರು ದಂಡೆಯ ಮೇಲೆ ತಡೆ ಬೇಲಿಯ ಪಕ್ಕದಲ್ಲಿ ಕೈಹಿಡಿದು ನಡೆಯುವ ಪ್ರೇಮಿಗಳ ಮುಖಕ್ಕೆ ನೀರಿನ ಸಿಂಚನ ಮಾಡುತ್ತದೆ. ಆ ನೀರಿನ ಸಿಂಚನಕ್ಕೆ ಮೈ ಕೊಟ್ಟು ತೋಯಿಸಿಕೊಳ್ಳುವುದೇ ಒಂದು ಹಿತವಾದ ಅನುಭವ.

ಇದು ಕೇವಲ ಪ್ರೇಮಿಗಳಿಗೆ ನೆಚ್ಚಿನ ತಾಣವಲ್ಲ. ಶಾಲೆಗಳಿಗೆ ಮಳೆಯ ಕಾರಣಕ್ಕೆ ರಜೆ ಘೋಷಿಸಿದರೆ ತಂದೆ–ತಾಯಿ ಮಕ್ಕಳ ಜೊತೆ ವೀಕ್ಷಣೆಗೆ ಬರುವ ಪ್ರೇಕ್ಷಕರ ಸಂಖ್ಯೆ ಸಾವಿರದ ಗಡಿಯನ್ನು ದಾಟುತ್ತದೆ. ಆರು ಕ್ರಸ್ಟ್ ಗೇಟುಗಳಿಂದ ನೀರು ಬಿಟ್ಟಿರುವುದರಿಂದ ಹಾಸನಕ್ಕೆ ಸೇತುವೆಯ ಮೇಲೆ ಸಾಗುವಾಗ ಜಲಾಶಯ ಕಡೆ ಕಣ್ಣಾಯಿಸಿದರೆ ಇಲ್ಲಿ ಜಲಾಶಯವಿರುವ ಗುರುತು ಸಿಗದಂತೆ ಹಾಲಿನ ಬಣ್ಣದ ನೊರೆಯಂತೆ ಕಾಣುತ್ತದೆ.

ಹತ್ತಿರಕ್ಕೆ ಹೋಗಿ ನೋಡಿದರೆ ಮಾತ್ರ ಆರು ಗೇಟುಗಳಿಂದ ನೀರು ಬರುವುದನ್ನು ನೋಡಬಹುದು. 2922 ಅಡಿಯಿರುವ ಜಲಾಶಯಕ್ಕೆ 2911 ಅಡಿಗಳಷ್ಟು ತುಂಬಿಸಿ ಇನ್ನು 1 ಅಡಿ ಬಾಕಿ ಇರುವಾಗಲೇ ಜಲಾಶಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚೆಚ್ಚು ನೀರನ್ನು ಜಲಾಶಯದಿಂದ ಹೊರಹಾಕಲಾಗುತ್ತದೆ.

ಜಲಾಶಯದ ಆರು ಕ್ರಸ್ಟ್ ಗೇಟುಗಳ ಮೂಲಕ 51 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟಾಗ ಆ ರುದ್ರ ರಮಣೀಯ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು.
ನಾವು ಈ ದೃಶ್ಯವನ್ನು ನೋಡಿ ಸಂತೋಷ ಪಡುತ್ತಿದ್ದರೆ, ಹೇಮಾವತಿ ಜಲಾಶಯದಿಂದ ಬಿಟ್ಟ ನೀರು ನದಿ ಮುಖಾಂತರ ಕೆಆರ್‍ಎಸ್‌ಗೆ ಸೇರುತ್ತದೆ.

ಈ ದೂರವನ್ನು ಕ್ರಮಿಸುವುದಕ್ಕೂ ಮುಂಚೆಯೇ ನದಿ ದಂಡೆಯಲ್ಲಿರುವ ಹೊಲಗದ್ದೆಗಳ ಸಾವಿರಾರು ಎಕರೆ ಪೈರು ನೀರಿನಿಂದ ಆವೃತವಾಗಿ ರೈತರು ಕಣ್ಣೀರಿಡುತ್ತಿದ್ದರು ಮತ್ತು ಮುಂಜಾಗ್ರತೆಯ ಕ್ರಮವಾಗಿ ನದಿ ದಂಡೆಯಲ್ಲಿರುವ ಜನಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮುನ್ಸೂಚನೆ ಕೊಡಲಾಗಿತ್ತು.

ಕಳೆದ ಬಾರಿ ಬೇಗ ಜಲಾಶಯ ತುಂಬಲು ತಿಂಗಳಿಂದ ಸತತವಾಗಿ ಸಕಲೇಶಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಜಡಿಮಳೆಯೇ ಕಾರಣವಾಗಿತ್ತು. ಜಲಾಶಯದಿಂದ 1996ರಲ್ಲಿ 65 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. 1990ರಲ್ಲಿ ಇದುವರೆಗಿನ ಅತೀ ಹೆಚ್ಚೆಂದರೆ 92 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆಗ ನಾನು ಇನ್ನು ಚಿಕ್ಕ ಹುಡುಗನಾಗಿದ್ದೆ.

ADVERTISEMENT

ಇಷ್ಟು ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹಾಸನ ಮತ್ತು ಅರಕಲಗೂಡಿಗೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆಯು ನೀರಿನಿಂದ ಆವೃತ್ತವಾಗಿ ಸಂಪರ್ಕ ಕಡಿತವಾಗಿ ಅನ್ಯ ಮಾರ್ಗದಿಂದ ಬಳಸಿ ಹಾಸನವನ್ನು ತಲುಪ ಬೇಕಾಗಿತ್ತು. ಇಷ್ಟು ವರ್ಷ ಕಳೆದು ಹಲವಾರು ಸರ್ಕಾರಗಳು ಬಂದು ಹೋದರೂ ಸಹ ಇನ್ನೊಂದು ಸೇತುವೆಯನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.