ಇದು ರಂಜಾನ್ ಮಾಸ. ಉಪವಾಸದ ತಿಂಗಳಲ್ಲಿ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ವಿವಿಧ ದೇಶಗಳ ಖರ್ಜೂರ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ.
ಶಿವಾಜಿನಗರದ ರಸೆಲ್ ಮಾರುಕಟ್ಟೆಯ ‘ಡೆಲಿಷಿಯಸ್’ ಮಳಿಗೆಯಲ್ಲಿ ಮೆಕ್ಕಾ, ಮದೀನಾ, ಜೋರ್ಡನ್, ಇರಾನ್, ದಕ್ಷಿಣ ಆಫ್ರಿಕಾ, ಇಸ್ರೇಲ್, ಓಮನ್ ಸೇರಿದಂತೆ ವಿವಿಧ ದೇಶಗಳ 80ಕ್ಕೂ ಬಗೆಯ ವೈವಿಧ್ಯಮಯ ಖರ್ಜೂರಗಳು ಸಿಗುತ್ತಿವೆ. ಚಾಕೊಲೇಟ್ ಫ್ಲೇವರ್‌ನ ಖರ್ಜೂರ ಮತ್ತು ಬಿಸ್ಕೆಟ್‌ಗಳು ಈ ಬಾರಿಯ ವಿಶೇಷ.
ರಂಜಾನ್ ಮಾಸದಲ್ಲಿ ಖರ್ಜೂರ ತಿಂದು ದಿನದ ಉಪವಾಸ ಮುರಿಯುವ ಮುಸ್ಲಿಮರು, ಖರ್ಜೂರವನ್ನು ಮೊಹಮ್ಮದರ ಆಶೀರ್ವಾದದ ಪ್ರಸಾದ ಎಂದೇ ಭಾವಿಸುತ್ತಾರೆ ಎನ್ನುತ್ತಾರೆ ಮಳಿಗೆಯ ಮಾಲೀಕರಾದ ಮಹಮದ್ ಇದ್ರೀಸ್ ಚೌಧುರಿ.
ಈ ಬಾರಿ ಚಾಕೊಲೇಟ್, ಲೆಮನ್, ರೋಸ್, ಕೊಕೊನಟ್ ಫ್ಲೇವರ್‌ನ ಖರ್ಜೂರಗಳು ತರಿಸಿದ್ದೇವೆ. ಇವು ಮಕ್ಕಳನ್ನು ಆಕರ್ಷಿಸುತ್ತಿವೆ. ಅಲ್ಲದೇ, ಒಣಹಣ್ಣುಗಳ ಮಿಶ್ರಣದ ಸೌದಿ ಹಲ್ವಾ ಸಹ ರಂಜಾನ್ ವಿಶೇಷವಾಗಿದೆ. ಖರ್ಜೂರದ ಬೆಲೆ ಕೆ.ಜಿಗೆ ₹250 ರಿಂದ 2,500ರವರೆಗೆ ಇದೆ ಎಂದು ಅವರು ಹೇಳಿದರು.
ಔಷಧೀಯ ಗುಣ
ಖರ್ಜೂರದಲ್ಲಿ ಔಷಧೀಯ ಗುಣಗಳೂ ಇವೆ. ಮೆಕ್ಕಾ–ಮದೀನಾದಿಂದ ಬಂದಿರುವ ಅಜ್ವಾ ಎಂಬ ಖರ್ಜೂರಕ್ಕೆ ವಿಶೇಷ ಶಕ್ತಿ ಇದೆ. ಹಾರ್ಟ್ ಬ್ಲಾಕೇಜ್, ನಿಶ್ಶಕ್ತಿ, ಚರ್ಮರೋಗ, ರಕ್ತ ಶುದ್ಧಿ, ಕೂದಲು ಉದುರುವಿಕೆ, ದೃಷ್ಟಿ ದೋಷ ಮೊದಲಾದವುಗಳಿಗೆ ಇದು ಮದ್ದು ಎಂಬ ನಂಬಿಕೆ ಇದೆ. ಇನ್ನು ದಕ್ಷಿಣ ಆಫ್ರಿಕಾದ ‘ಮೆಡ್‌ಜೂಲ್’ ಖರ್ಜೂರ ‘ಶುಗರ್‌ಫ್ರೀ’ ಎನ್ನುವುದು ವಿಶೇಷ.
ಮಧುಮೇಹಿಗಳನ್ನು ನಿಶ್ಶಕ್ತಿ ಸದಾ ಕಾಡುತ್ತಿರುತ್ತದೆ. ಇದನ್ನು ತಿನ್ನುವುದರಿಂದ ಮಧುಮೇಹಿಗಳಿಗೆ ಶಕ್ತಿ ಸಿಗುತ್ತದೆ. ಪ್ರತಿನಿತ್ಯ ಎರಡು ಖರ್ಜೂರ ಮತ್ತು ಒಂದು ಲೋಟ ಹಾಲು ಸೇವಿಸುವುದರಿಂದ ನಿಶ್ಯಕ್ತಿ ದೂರವಾಗುತ್ತದೆ ಎಂದು ಅವರು ಹೇಳುತ್ತಾರೆ.
ವರ್ಷಪೂರ್ತಿ ನಮ್ಮಲ್ಲಿ ಖರ್ಜೂರ ಮಾರಾಟ ಇರುತ್ತದೆ. ಆದರೆ, ರಂಜಾನ್ ವೇಳೆ ಮಾತ್ರ ಹೆಚ್ಚು ವೈವಿಧ್ಯಮಯ ಖರ್ಜೂರಗಳು ಸಿಗುತ್ತವೆ. ಈ ಬಾರಿ ಶೇ 15 ರಿಂದ 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜುಲೈ ಕೊನೆಯವರೆಗೂ ವಿಶೇಷ ಮಾರಾಟ ಇರುತ್ತದೆ. ಜುಲೈ ನಂತರವೂ ಮಾರಾಟ ಇರುತ್ತದೆ. ಆದರೆ, ಹೆಚ್ಚಿನ ಬಗೆಯ ಖರ್ಜೂರ ಸಿಗುವುದಿಲ್ಲ ಎಂದರು.
ಹಲವು ಬಗೆ
ಕಲ್ಮಿ (ಕೆ.ಜಿ.ಗೆ ₹ 800), ಸುಕ್ರಿ (₹ 800), ಮಬ್ರೂಮ್ (₹ 1200), ಸಗಾಯಿ (₹ 800), ಅಂಬರ್ (₹ 1,800), ಅಲ್ ಅವಾನಿ (₹ 300–1,500), ಕ್ರೈಸ್ಟಲ್ (₹ 400) ಕೌಸರ್ (₹ 400) ಖರ್ಜೂರ ತರಿಸಿದ್ದೇವೆ. ಅಲ್ಲದೇ ಕೈಗೆಟುಕುವ ಬೆಲೆಯ ಖರ್ಜೂರಗಳೂ ನಮ್ಮಲ್ಲಿ ಇವೆ ಎಂದು ಇದ್ರೀಸ್ ಹೇಳಿದರು. ಖರ್ಜೂರದ ಜತೆಗೆ ಬ್ರೆಜಿಲ್ ನಟ್ಸ್, ಆಸ್ಟ್ರೇಲಿಯಾದ ಹೆಜಲ್ ನಟ್ಸ್, ಇರಾನಿನ ಒಣ ಅಂಜೂರ, ಇರಾನಿ ಬಾದಾಮಿ ಇವು ನಮ್ಮಲ್ಲಿ ಸಿಗುತ್ತವೆ.
ಇವುಗಳ ಬೆಲೆ ಕೆ.ಜಿ.ಗೆ ₹200 ರಿಂದ ₹ 6 ಸಾವಿರದವೆಗೆ ಇದೆ. ಅಮೆರಿಕದ ಬಾದಾಮಿ ₹ 600 ಮತ್ತು ಇರಾನಿ ಬಾದಾಮಿ (ಮಾಮ್‍ರಾ) ₹ 2,500 ರಿಂದ ₹ 4,000 ಇದೆ. ಇರಾನ್ ಅಂಜೂರ ₹ 1,600 ರಿಂದ 1,800ಕ್ಕೆ ಸಿಗುತ್ತದೆ ಎಂದರು.
ಹಲವು ಉಪಯೋಗ
ರಂಜಾನ್ ಸಮಯದಲ್ಲಿ ದಿನಕ್ಕೆ 10–12 ಗಂಟೆ ನಮ್ಮ ಹೊಟ್ಟೆ ಖಾಲಿ ಇರುತ್ತದೆ. ಖರ್ಜೂರದ ಮೂಲಕ ಉಪವಾಸ ಮುರಿಯುವುದರಿಂದ ಅನೇಕ ಉಪಯೋಗಗಳಿವೆ. ಹೊಟ್ಟೆ ಖಾಲಿ ಇದ್ದಾಗ ಗ್ಯಾಸ್ಟ್ರಿಕ್, ಅಸಿಡಿಟಿ ಶುರುವಾಗುತ್ತದೆ. ಉಪವಾಸದ ನಂತರ ಖರ್ಜೂರ ಸೇವಿಸುವುದರಿಂದ ಆ ಸಮಸ್ಯೆ ಬರುವುದಿಲ್ಲ ಎಂದು ಗ್ರಾಹಕ ಇಮ್ತಿಯಾಜ್ ಹೇಳಿದರು.
‘ನಾನು ಆರು ವರ್ಷಗಳಿಂದ ಡೆಲಿಷಿಯಸ್ ಮಳಿಗೆಯಲ್ಲಿ ಖರ್ಜೂರ ಖರೀದಿಸುತ್ತಿದ್ದೇನೆ. ಇಲ್ಲಿ ಉತ್ತಮ ಗುಣಮಟ್ಟದ ಖರ್ಜೂರ ಸಿಗುತ್ತದೆ. ಅಲ್ಲದೆ ಕಡಿಮೆ ಬೆಲೆಯೂ ಇರುತ್ತದೆ’ ಎನ್ನುತ್ತಾರೆ ಚಾಮರಾಜಪೇಟೆಯ ರವೂಫ್. ವಿಳಾಸ: ಡೆಲಿಷಿಯಸ್ ಮಳಿಗೆ, ರಸೆಲ್ ಮಾರುಕಟ್ಟೆ, ಶಿವಾಜಿನಗರ. ಸಂಪರ್ಕಕ್ಕೆ: 2559 6786, 99455 00056.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.