ADVERTISEMENT

ವಾಹನ ದಟ್ಟಣೆಯ ನೆನಪುಗಳು...

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಬೆಂಗಳೂರು ನಗರ ದಿನೇ ದಿನೇ ಅಭಿವೃದ್ಧಿ ಕಾಣುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಅಧಿಕ. ನಗರದಲ್ಲಿ ಇತ್ತೀಚೆಗಂತೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ನಗರ ಬೆಳೆಯುತ್ತಿದ್ದಂತೆ ಸಂಚಾರ ದಟ್ಟಣೆ ಅಧಿಕವಾಯಿತು. ಸಂಚಾರ ದಟ್ಟಣೆಯ ಸಮಸ್ಯೆಯಿಂದ ಪಾರಾಗಲು ಬೆಂಗಳೂರು ಮಹಾನಗರ ಪಾಲಿಕೆ ಮೇಲುಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಿತು.

 1950ರಲ್ಲಿ ಪಾಲಿಕೆ ಚುನಾವಣೆಗಳು ನಡೆದವು. ಅಂದಿನ ಮೇಯರ್ ಎನ್‌. ಕೇಶವ ಅಯ್ಯಂಗಾರ್ ಅವರು ಆಡಳಿತದಲ್ಲಿದ್ದಾಗ ಆಟೊ ರಿಕ್ಷಾಗಳ ಸಂಚಾರ ಆರಂಭವಾಯಿತು. ಪ್ರತಿದಿನ ಸುಮಾರು 600 ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಇದರಿಂದ ‘ಟ್ರಾಫಿಕ್‌ ಜಾಮ್’ ಎನ್ನುವುದು ಬೆಂಗಳೂರಿಗೆ ಸಾಮಾನ್ಯ ಸಮಸ್ಯೆಯಾಯಿತು.

ಸಂಚಾರ ದಟ್ಟಣೆಯನ್ನು ತಗ್ಗಿಸಿ ನಗರಕ್ಕೆ ಮೂಲಭೂತ  ಸೌಲಭ್ಯಗಳನ್ನು ಒದಗಿಸುವ  ದೃಷ್ಟಿಯಿಂದ ಮೊದಲ ಬಾರಿಗೆ ₹109 ಕೋಟಿ ವೆಚ್ಚದಲ್ಲಿ ಸಿರ್ಸಿ ವೃತ್ತ ಮೇಲು ಸೇತುವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.  ₹18 ಕೋಟಿ ವೆಚ್ಚದ ರಿಚ್ಮಂಡ್‌ ವೃತ್ತದ ಮೇಲು ಸೇತುವೆ,  ₹12 ಕೋಟಿ ವೆಚ್ಚದಲ್ಲಿ ಮೇಖ್ರಿವೃತ್ತದ ರಸ್ತೆ ವಿಭಜಕ  ಮತ್ತು  ₹2.80 ಕೋಟಿ  ವೆಚ್ಚದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣದ ಸುರಂಗ ಮಾರ್ಗ ಮುಂತಾದ ಹಲವು ಮಾರ್ಗಗಳನ್ನು ರಚಿಸಿ ಸಂಚಾರ ದಟ್ಟಣೆ  ತಗ್ಗಿಸಿ ಜನರನ್ನು ಟ್ರಾಫಿಕ್ ಸಮಸ್ಯೆಯಿಂದ ಮುಕ್ತರಾಗಿಸಲು ಅವಕಾಶ ಕಲ್ಪಿಸಲಾಯಿತು. ಆ ನಂತರ ನ್ಯಾಷನಲ್‌ ಕಾಲೇಜು ಬಳಿಯ ಮೇಲುಸೇತುವೆ, ರಾಜಾಜಿನಗರದ ರಸ್ತೆ ವಿಭಜಕ, ಸಿಲ್ಕ್‌ ಬೋರ್ಡ್‌ ಬಳಿ ಮೇಲು ಸೇತುವೆ ಮುಂತಾದ ಯೋಜನೆಗಳನ್ನು ಬಿಬಿಎಂಪಿ ಅನುಷ್ಠಾನಕ್ಕೆ ತಂದಿತು.

1998ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಸಿರ್ಸಿ ವೃತ್ತದಿಂದ ಪುರಸಭೆಯವರೆಗೆ ನಿರ್ಮಿಸಿದ್ದ ಮೇಲುಸೇತುವೆ ದೇಶದಲ್ಲೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವರ್ತೂರು ರಸ್ತೆ, ಹೊರವರ್ತುಲ ರಸ್ತೆ, ವೈಟ್‌ಫೀಲ್ಡ್ ರಸ್ತೆ, ಬೆನ್ನಿಗಾನಹಳ್ಳಿ ಸರೋವರದ ಬಳಿ ಮತ್ತು ಕೇಂದ್ರ ರೇಷ್ಮೆ ಮಂಡಳಿ ಬಳಿಯ ಹೊಸೂರು ರಸ್ತೆಯಲ್ಲಿ ಮತ್ತು ಅನೇಕ ಉಪರಸ್ತೆಗಳಿರುವ ಹೆಬ್ಬಾಳ ಸರೋವರದ ಬಳಿ ಮೇಲು ಸೇತುವೆ ನಿರ್ಮಿಸಿದೆ.

ಕೃಷ್ಣರಾಜಪುರದ ಬಳಿ ನಿರ್ಮಿಸಿರುವ ನೂತನ ಮಾದರಿಯ ತೂಗು ಸೇತುವೆಯು ಆ ದಿಕ್ಕಿನಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಿದೆ. ಈ ಮೇಲುಸೇತುವೆಯು ಅಂಡರ್‌ಪಾಸ್‌, ಗ್ರೇಡ್‌ ಸೆಪರೇಟ್‌ಗಳಿಂದ ಬೆಂಗಳೂರು ನಗರದ ವಾಹನ ಸಂಚಾರವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಹಕಾರಿಯಾಗಿದೆ.
(ಪ್ರಜಾವಾಣಿ ಆರ್ಕೈವ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.