ADVERTISEMENT

ವಿಶಿಷ್ಟ ರಬ್ಬರ್ ಒಣಗುಮನೆ

ಪ.ರಾಮಕೃಷ್ಣ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ರಬ್ಬರ್ ಹಾಲಿನಿಂದ ಹಾಳೆ ತಯಾರಿಸಿದರೆ ಸಾಲದು, ಅದು ಉತ್ತಮ ಗುಣಮಟ್ಟ ಪಡೆಯಬೇಕಾದರೆ ಹದವರಿತು ಒಣಗಿಸುವುದೂ ಮುಖ್ಯ. ಮಳೆಗಾಲದಲ್ಲಿ ಅನೇಕ ರೈತರಿಗೆ ಯೋಗ್ಯವಾದ ಹೊಗೆಗೂಡು ಅಥವಾ ಒಣಗುಮನೆಗಳಿಲ್ಲದೆ ಮೊದಲ ದರ್ಜೆಯ ಹಾಳೆ ತಯಾರಿಸಲು ಸಾಧ್ಯವಾಗುವುದಿಲ್ಲ. ಬೇರೆ ಕಡೆ ಇಂಥ ಡ್ರೈಯರ್ ಮಾಡಿಸಿದರೆ 18 ಸಾವಿರದಿಂದ 45 ಸಾವಿರದವರೆಗೆ ಖರ್ಚಾಗುತ್ತದೆ. ಹೀಗಾಗಿ ಸಣ್ಣ ಕೃಷಿಕರ ಕಿಸೆಗೆ ಅದು ಭಾರ.

ಇಂಥ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡು ಮೊದಲ ದರ್ಜೆಯ ಹಾಳೆಗಳನ್ನು ತಯಾರಿಸುತ್ತಿದ್ದಾರೆ ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರಿನ ದೋಟ ಸುಬ್ರಹ್ಮಣ್ಯ ಭಟ್ಟರು. ಅವರಲ್ಲಿ ಸಾಕಷ್ಟು ರಬ್ಬರ್ ಮರಗಳಿದ್ದರೂ ಕೂಲಿಯವರ ಅಭಾವದಿಂದ ಕೆಲಸ ನಿಲ್ಲಿಸಿಲ್ಲ. ತಮ್ಮ ಮಗನನ್ನೇ ರಬ್ಬರ್ ಹಾಲು ತೆಗೆಯುವ ಕೆಲಸಕ್ಕೆ ತರಬೇತಿ ನೀಡಿ ಯಶಸ್ವಿಯಾಗಿ ಅದರ ಲಾಭ ಪಡೆಯುತ್ತಿದ್ದಾರೆ. ಸ್ನಾನದ ನೀರನ್ನು ಕಟ್ಟಿಗೆ ಉರಿಯ ಒಲೆಯಲ್ಲೇ ಬಿಸಿ ಮಾಡುತ್ತಾರೆ. ಮೂರು ಅಡಿ ಉದ್ದವಾಗಿರುವ ಒಲೆಯ ಕೊನೆಯಲ್ಲಿ ಇನ್ನೂ ಮೂರು ಅಡಿ ವಿಸ್ತರಿಸಿದ್ದಾರೆ. ಹೊಗೆ ಅಲ್ಲಿ ಹೊರಬರುತ್ತದೆ. ಈ ಭಾಗದಲ್ಲಿ ಬೇಯಿಸಿದ ಇಟ್ಟಿಗೆಯಿಂದ 4 ಅಡಿ ಉದ್ದ, 5 ಅಡಿ ಅಗಲದ ಒಂದು ಕೋಣೆ ಕಟ್ಟಿ ಅದರ ಮೇಲ್ಭಾಗಕ್ಕೆ ಒಂದು ಎಸ್‌ಬೇಸ್‌ಟಾಸ್ ಷೀಟ್ ಮುಚ್ಚಿದ್ದಾರೆ. ಹೆಚ್ಚಾದ ಹೊಗೆ ಹೊರ ಬರಲು ಒಂದು ಕೊಳವೆಯಿಟ್ಟಿದ್ದಾರೆ.
ಈ ಕೋಣೆಯೊಳಗೆ ಬಿಸಿ ಹೊಗೆಯಾಡುತ್ತದೆ. ಅಡಿಕೆಮರದ ಸಲಿಕೆಗಳನ್ನು ಸಾಲಾಗಿ ಇಟ್ಟು ಒಮ್ಮೆಗೆ 64 ರಬ್ಬರ್ ಹಾಳೆಗಳನ್ನು ಇಡಬಹುದು. ಬೇಸಿಗೆಯಲ್ಲಾದರೆ 24 ತಾಸುಗಳಲ್ಲಿ ಒಣಗಿ ಮಾರಾಟಕ್ಕೆ ಸಿದ್ಧವಾಗುವ ಹಾಳೆಗೆ ಮಳೆಗಾಲದಲ್ಲಿ 48 ತಾಸು ಬೇಕಾಗುತ್ತದೆ. ಈ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್, 300 ಇಟ್ಟಿಗೆ ಬೇಕಾಗಿದೆ.

ಇವರಿಗೆ ಖರ್ಚಾದದ್ದು 4 ಸಾವಿರ. ಇದರಲ್ಲಿ ಹಣ್ಣಡಿಕೆಯನ್ನೂ ಒಣಗಿಸಬಹುದು. ಕಡಿಮೆ ಖರ್ಚಿನ ಈ ಫಲಪ್ರದ ಮಾದರಿಯನ್ನು ನೋಡಿ ಹಲವರು ತಾವೂ ಅಳವಡಿಸಿಕೊಂಡಿದ್ದಾರೆ. ಸಂಪರ್ಕಕ್ಕೆ: 08256 279088

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.