ADVERTISEMENT

ಸಂಗೀತದ ವಿದ್ವತ್ತು ಸಾಹಿತ್ಯ ನುಂಗಬಾರದು

ಸುಕೃತ ಎಸ್.
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಗರ್ತಿಕೆರೆ ರಾಘಣ್ಣ
ಗರ್ತಿಕೆರೆ ರಾಘಣ್ಣ   

* ಕೀರ್ತನೆ, ತತ್ವಪದ ಹಾಗೂ ಭಾವಗೀತೆಗಳ ರಾಗ ಸಂಯೋಜನೆಯಲ್ಲಿ ವ್ಯತ್ಯಾಸ ಇದೆಯೇ?
ಈಗ ನೋಡಿ. ದಾಸ ಅಥವಾ ವಚನ ಸಾಹಿತ್ಯದಲ್ಲಿ ಭಕ್ತಿಯೇ ಮುಖ್ಯ ಭಾವ. ಕವಿತೆಯ ಭಾವವನ್ನು ನಾವು ಮೊದಲು ಅರಿತುಕೊಳ್ಳಬೇಕು. ಭಾವಗೀತೆ ನಾಟಕೀಯವಾದುದು. 20 ವರ್ಷ ರಂಗಭೂಮಿಯಲ್ಲಿ ದುಡಿದಿದ್ದೀನಿ. ಈ ಅನುಭವವೇ ನಾನು ಸಂಯೋಜನೆ ಮಾಡುವಾಗ ಸಹಾಯ ಮಾಡುತ್ತದೆ. ಕವಿಯ ಆಶಯ, ಕವಿತೆಯ ಧ್ವನಿ ಇವೆಲ್ಲವೂ ಸಂಗೀತ ಸಂಯೋಜನೆ ಮಾಡುವಾಗ ಮುಖ್ಯವಾಗುತ್ತವೆ.

* ಭಾವಗೀತೆಗಳಿಗೆ ಸಂಗೀತ ನೀಡುವವರಿಗೆ ಸಾಹಿತ್ಯದ ಜ್ಞಾನ ಎಷ್ಟು ಮುಖ್ಯ?
ನಿಜ. ಸಾಹಿತ್ಯವೇ ಬಹಳ ಮುಖ್ಯ. ಯಾಕೆ ಎಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಾನು ಕೆ.ಎಸ್‌.ನ ಅವರ ‘ಕೃಷ್ಣ ಬರುವನಂತೆ’ ಕವಿತೆಯನ್ನು ಹಾಡುತ್ತೇನೆ. ಅದರಲ್ಲಿನ ಒಂದು ಸಾಲು ಹೀಗೆ ಬರುತ್ತದೆ, ‘ಅಲ್ಲಿ ನೋಡು ತಾನೆ ತನ್ನ ತೇರನೇರಿದಾನೆ...’ ಎಂದು. ಈ ಸಾಲನ್ನು ಹಾಡುವಾಗ ಎಲ್ಲಿ ನಿಲುಗಡೆ (ಉಸಿರು ತೆಗೆದುಕೊಳ್ಳುವ ಸಮಯ) ತೆಗೆದುಕೊಳ್ಳಬೇಕು ಎನ್ನುವುದು ಬಹಳ ಮುಖ್ಯ. ‘ಅಲ್ಲಿ ನೋಡುತಾನೆ...’ ಎಂದು ನಿಲ್ಲಿಸಿ, ‘ತನ್ನ ತೇರನೇರಿದಾನೆ’ ಎಂದು ಮುಂದುವರೆಸಿದರೆ ಅರ್ಥವೇ ವಿರೂಪವಾಗುತ್ತದೆ. ಅದು ‘ಅಲ್ಲಿ ನೋಡು’ ಎಂದು ಹೇಳಿ ಒಂದು ಉಸಿರು ತೆಗೆದುಕೊಳ್ಳಬೇಕು. ನಂತರ ‘ತಾನೆ ತನ್ನ ತೇರನೇರಿದಾನೆ’ ಎಂದು ಮುಂದುವರಿಸಬೇಕು. ಆಗಷ್ಟೇ ಆ ಸಾಲಿನ ಭಾವ ಪ್ರತಿಫಲನವಾಗುತ್ತದೆ. ಆದ್ದರಿಂದ ಇಂದಿಗೂ ನಾನು ರಾಗ ಸಂಯೋಜನೆ ಮಾಡುವಾಗ ಸಾಹಿತ್ಯದ ಕುರಿತು, ಭಾಷೆಯ ಕುರಿತು ಸಂಶಯ ಇದ್ದರೆ ಸಾಹಿತ್ಯ ಗೊತ್ತಿದ್ದವರಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ.

* ನಾವು ಎಷ್ಟೋ ಕವಿಗಳ ಕವಿತೆಗಳನ್ನು ಮರೆತಿದ್ದೇವೆ ಎನ್ನಿಸುವುದಿಲ್ಲವೇ? ಕೆಲವಷ್ಟೇ ಗೀತೆಗಳ ಪುನರಾವರ್ತನೆ ಆಗುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ?
ಒಂದು ಗೀತೆ ಒಂದು ನಿರ್ದಿಷ್ಟ ರಾಗ ಸಂಯೋಜನೆಯಲ್ಲಿ ಪ್ರಸಿದ್ಧಿಗೆ ಬಂದಿರುತ್ತದೆ. ಅದನ್ನೇ ಹಲವು ಗಾಯಕರು ಕಲಿಯುತ್ತಾರೆ. ಹೋದ ಕಡೆಯಲ್ಲಾ ಅದೇ ರಾಗದಲ್ಲಿ ಹಾಡುತ್ತಾರೆ. ಕೇಳುಗರು ಸಹ ಇಂತಹ ಪ್ರಸಿದ್ಧಿ ಪಡೆದ ಹಾಡುಗಳನ್ನೇ, ರಾಗವನ್ನೂ ಬದಲಿಸದೇ ಕೇಳಲು ಬಯಸುತ್ತಾರೆ. ಕೇಳುಗರ ಇಷ್ಟಾನಿಷ್ಟದಂತೆ ಹಾಡಿದರೇ ತಾನು ಪ್ರಸಿದ್ಧಿಗೆ ಬರುತ್ತೇನೆ ಎನ್ನುವುದು ಹಲವು ಗಾಯಕರ ಭಾವನೆ. ಆದ್ದರಿಂದ ಇಂತಹ ಪುನರಾವರ್ತನೆ ಆಗುತ್ತಿದೆ.

ADVERTISEMENT

* ಸು.ರಂ ಎಕ್ಕುಂಡಿ ರಚನೆಯ ನಿಮ್ಮ ಇಷ್ಟದ ಕವಿತೆ ಯಾವುದು?
ಅವರ ರಚನೆಯ ‘ಮಿಥಿಲೆ’ ನನ್ನ ನೆಚ್ಚಿನ ಕವಿತೆ. ಈ ಕವಿತೆಯೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇದೆ. ಇದು ನನಗೆ ಪ್ರಸಿದ್ಧಿ ತಂದುಕೊಟ್ಟ ಕವಿತೆಯೂ ಹೌದು. ಮಿಥಿಲೆಗೆ ಹೋಗುವುದು, ಅಲ್ಲಿನ ಮಣ್ಣು ತರುವುದು ಎನ್ನುವ ಕಲ್ಪನೆಯೇ ವಿಶಿಷ್ಟವಾದುದು. ಎಷ್ಟೋ ಬಾರಿ ಈ ಕವಿತೆಯನ್ನು ಹಾಡುವಾಗ ಭಾವುಕನಾಗಿದ್ದೇನೆ.

* ಭಾವಗೀತೆ ಗಾಯನದಲ್ಲಿ ಶಾಸ್ತ್ರೀಯ ಸಂಗೀತ ಹೆಚ್ಚಾಗಿ ನುಸುಳುತ್ತಿದೆ ಎಂದು ನಿಮಗೆ ಅನಿಸುತ್ತದೆಯೇ?
ನಿಜ. ಇತ್ತೀಚೆಗೆ ಭಾವಗೀತೆ ಯಾವುದು, ಶಾಸ್ತ್ರೀಯ ಸಂಗೀತದ ಕಛೇರಿ ಯಾವುದು ಎನ್ನುವುದೇ ತಿಳಿಯುವುದಿಲ್ಲ. ಕಾಳಿಂಗರಾಯರದು ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಛೇರಿ ನೀಡುವ ಮಟ್ಟಿಗೆ ಕಲಿತಿದ್ದರು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿಯೇ ಬಲ್ಲವರಾಗಿದ್ದರು. ಆದರೆ, ಅವರ ಭಾವಗೀತೆಗಳನ್ನು ಕೇಳಿದರೆ ಎಲ್ಲಿಯೂ ಅವರ ಶಾಸ್ತ್ರೀಯ ವಿದ್ವತ್ತು ಕಾಣುತ್ತಿರಲಿಲ್ಲ. ಕವಿತೆಗೆ ತಕ್ಕ ರಾಗ, ಅದಕ್ಕೆ ತಕ್ಕ ಹಾಡುಗಾರಿಕೆ. ಹಾಗಾಗಿ, ನಮ್ಮ ಸಂಗೀತದ ವಿದ್ವತ್ತು ಆ ಸಾಹಿತ್ಯವನ್ನು ನುಂಗಿ ಹಾಕಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.