ADVERTISEMENT

ಸಮ್ಮರ್‌ ಕಟ್‌ ಔಚಿತ್ಯ

ಪೃಥ್ವಿರಾಜ್ ಎಂ ಎಚ್
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಯೊ ಯೊ ಹನಿ ಸಿಂಗ್‌ ಸಮ್ಮರ್‌ ಕಟ್‌
ಯೊ ಯೊ ಹನಿ ಸಿಂಗ್‌ ಸಮ್ಮರ್‌ ಕಟ್‌   

ಬಿರು ಬೇಸಿಗೆಯ ಬಿಸಿಗೆ ತತ್ತರಿಸಿ ಹೋಗಿರುವ ಬೆಂಗಳೂರಿನ ಜನತೆ ದೇಹವನ್ನು ತಂಪಾಗಿಟ್ಟುಕೊಳ್ಳಲು ಜೀವನ ಶೈಲಿಯನ್ನೇ ಬದಲಿಸಿಕೊಳ್ಳುತ್ತಿದ್ದಾರೆ. ಹತ್ತಿ ಬಟ್ಟೆ, ತಂಪು ಕನ್ನಡಕ  ಧರಿಸುವುದು, ತಂಪು ಪಾನೀಯ, ಹಣ್ಣು ತರಕಾರಿಗಳ ಸೇವನೆ ಹೀಗೆ ಸಾಧ್ಯವಾದಷ್ಟೂ ತಂಪಾಗಿರಲು ಬಯಸುತ್ತಿದ್ದಾರೆ.

ಇನ್ನು ಯುವಕರಂತೂ ವಿಪರೀತ ಸೆಕೆಯಿಂದ ಪಾರಾಗಲು ತಮ್ಮ ಕೇಶ ವಿನ್ಯಾಸವನ್ನೇ ಬದಲಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಜನಪ್ರಿಯ ‘ಸಮ್ಮರ್‌ ಕಟ್‌’ ಸ್ಟೈಲ್‌ಗೆ ಮೊರೆಹೋಗುತ್ತಿದ್ದಾರೆ.

ಅತಿ ಹೆಚ್ಚು ಕೂದಲು ಇದ್ದರೆ ಬೆವರು ಹರಿದು ದುವಾರ್ಸನೆ ಬರುತ್ತದೆ.  ಇಂತಹ ಮುಜುಗರವನ್ನು ತಪ್ಪಿಸಲು ಯುವಕರು ಸಾಮಾನ್ಯವಾಗಿ ಸಮ್ಮರ್‌ ಹೇರ್‌ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಸಮ್ಮರ್‌ ಕಟ್‌ನಲ್ಲಿ ಹಲವಾರು ವಿಶೇಷ ವಿನ್ಯಾಸಗಳಿವೆ. ಕ್ರೀವ್‌ ಕಟ್‌, ಕ್ಲಾಸಿ ಹೇರ್‌ ಸ್ಟೈಲ್‌, ಕರ್ವ್ಡ್‌ ಅಂಡರ್‌ ಕಟ್‌,  ಬ್ಯಾಕ್‌ ಕೊಂಬ್ಡ್‌,  ಬ್ಲವ್‌ಬ್ಯಾಕ್ಡ್‌,  ಪೇಡ್‌ ಹೇರ್‌ ಸ್ಟೈಲ್‌, ಮಿಲಿಟರಿ ಕಟ್‌, ಸ್ಪೈಕೀ ಕ್ರೀವ್‌, ಶಾರ್ಟ್‌ಕಟ್‌ ಹೇರ್‌ ಸ್ಟೈಲ್‌ಗಳು ಬೇಸಿಗೆಯ ಜನಪ್ರಿಯ ಸ್ಟೈಲ್‌ಗಳು.

ಈ ಎಲ್ಲ ಹೇರ್‌ ಸ್ಟೈಲ್‌ಗಳ ವಿನ್ಯಾಸ ಒಂದೇ ರೀತಿ ಇರುವುದು ವಿಶೇಷ.  ತಲೆಯ ಎಡ, ಬಲ ಮತ್ತು ಹಿಂಭಾಗದಲ್ಲಿ ಕೂದಲನ್ನು ಅತಿ ಚಿಕ್ಕದಾಗಿ ಕತ್ತರಿಸಲಾಗುವುದು. ಮುಂದಲೆ ಮತ್ತು ಮೇಲ್ಭಾಗದಲ್ಲಿ  ಕೂದಲನ್ನು ಸ್ವಲ್ಪ ಉದ್ದವಾಗಿ ಬಿಟ್ಟು, ವಿವಿಧ ರೀತಿಯ ವಿನ್ಯಾಸ ಮಾಡಲಾಗುವುದು.

ವೈದ್ಯರು ಹೇಳುವುದೇನು?
ಬೇಸಿಗೆ ಕಾಲದಲ್ಲಿ ಮಿಲಿಟರಿ ಶೈಲಿಯ ಕಟ್ಟಿಂಗ್‌ ಮಾಡಿಸುವುದು ಒಳಿತು ಎಂದು ವೈದ್ಯರು ಸಲಹೆ ನೀಡುತ್ತಾರೆ. ‘ತಲೆಯಲ್ಲಿ  ಅತಿ ಹೆಚ್ಚು ಕೂದಲಿದ್ದರೆ ಬಿಸಿಗೆ ಪದೇ ಪದೇ ಬೆವರು ಹರಿಯುತ್ತದೆ. ಇದರಿಂದ ದೇಹದಲ್ಲಿರುವ ನೀರಿನ ಪ್ರಮಾಣ ಬೆವರಿನ ಮೂಲಕ ಹರಿದು ಹೋಗುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರು ಬೇಕಾಗುತ್ತದೆ’ ಎಂದು ಚರ್ಮ ತಜ್ಞ ಡಾ. ನಿರಂಜನ ಪ್ರಕಾಶ್‌ ತಿಳಿಸುತ್ತಾರೆ.

‘ಮಾರ್ಕೆಟಿಂಗ್‌ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವವರು ಸಮ್ಮರ್‌ ಕಟಿಂಗ್‌ ಮಾಡಿಸಿಕೊಂಡು ತಲೆಗೆ ಟೋಪಿಯನ್ನು  ಬಳಸುವುದು ಕಡ್ಡಾಯ. ರಕ್ಷಣೆ  ಇಲ್ಲದೆ ಉರಿ ಬಿಸಿಲಿಗೆ ತಲೆಯನ್ನು ಒಡ್ಡುವುದು  ಮೆದುಳಿಗೆ ಅಪಾಯಕಾರಿ’ ಎನ್ನುತ್ತಾರೆ ನಿರಂಜನ ಪ್ರಕಾಶ್‌.

ಗ್ರಾಹಕರು ಬಯಸುವ ಸ್ಟೈಲ್‌
ನಮ್ಮ ಸಲೂನ್‌ ಶಾಪ್‌ಗೆ ಬರುವ ಬಹುತೇಕ ಗ್ರಾಹಕರು ಸಮ್ಮರ್‌ ಕಟ್‌ ಮಾಡಿಸಿಕೊಳ್ಳುತ್ತಾರೆ. ಬಿಸಿ ಹೆಚ್ಚಾಗಿರುವುದರಿಂದ ಗಡ್ಡವನ್ನು ಪೂರ್ತಿ ಶೇವ್‌ ಮಾಡಿಸಿಕೊಳ್ಳುತ್ತಾರೆ.  ಗ್ರಾಹಕರು ಹೆಚ್ಚಾಗಿ ಮಿಲಿಟರಿ ಕಟಿಂಗ್‌, ಕ್ರೀವ್‌ ಕಟ್‌, ಸ್ಪೈಕೀ, ಶಾರ್ಟ್‌ಕಟ್‌ ಹೇರ್‌ ಸ್ಟೈಲ್‌ಗಳನ್ನು ಬಯಸುತ್ತಾರೆ.
-ಕೇಶವ್‌, ಕೆ.ಜೆ.ಆರ್‌ ಸಲ್ಯೂನ್‌, ಶಿವನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.