ADVERTISEMENT

ಸಿ–ಟೌನ್‌ಗೆ ಅನುಶ್ರೀ ಲಗ್ಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಸಿ–ಟೌನ್‌ಗೆ ಅನುಶ್ರೀ ಲಗ್ಗೆ
ಸಿ–ಟೌನ್‌ಗೆ ಅನುಶ್ರೀ ಲಗ್ಗೆ   
ಸಂಪ್ರಿಯ ಕಾಶಿಪಟ್ಣ
ಆಕೆ ಮೈಕ್‌ ಹಿಡಿದು ಕಾರ್ಯಕ್ರಮ ನಿರೂಪಣೆ ಮಾಡಲು ಆರಂಭಿಸಿದರೆ ಸಾಕು ಜನರಿಗೆ ಮನ ರಂಜನೆಗೆ ಏನೂ ಕಮ್ಮಿ ಇಲ್ಲ. ಮಾತು ಶುರು ಮಾಡಿಬಿಟ್ಟರೆ ಅಲ್ಲಿ ನಗುವಿಗೇನು ಕೊರತೆಯಿಲ್ಲ. ಈಕೆಯ ನಿರೂಪಣೆಯ ಶೈಲಿಗೆ ಅದೆಷ್ಟೋ ಮಂದಿ ಮನಸೋತಿದ್ದು ಉಂಟು.
 
ಯಾಕೆಂದರೆ ಆಕೆಗಿರುವ ಸಂವಹನ ಕಲೆ ಅಂತಹದ್ದು. ಜತೆಗೆ ಸೌಂದರ್ಯವತಿ ಬೇರೆ. ಮಂಗಳೂರಿನಿಂದ ಬೆಂಗಳೂರಿಗೆ ಪಯಣ ಬೆಳೆಸಿ ನಿರೂಪಣೆಯ ಜತೆಗೆ ಕನ್ನಡ ಚಿತ್ರರಂಗದಲ್ಲಿ ಹೆಜ್ಜೆ ಇಟ್ಟು, ಬಿಗ್‌ಬಾಸ್‌ ರಿಯಾಲಿಟಿ ಷೋನಲ್ಲಿ ಭಾಗವಹಿಸಿ ಇಂದು ರಾಜ್ಯದ ಮನೆಮಾತಾದವರು ಅನುಶ್ರೀ.
 
ಸ್ಯಾಂಡಲ್‌ವುಡ್‌ನಲ್ಲಿ ‘ಬೆಂಕಿಪಟ್ಣ’ ಗೀರಿ ಬೆಳಕು ಚೆಲ್ಲಿದ ಈಕೆ ಇದೀಗ ‘ಕೋರಿ ರೊಟ್ಟಿ’ ಉಣ ಬಡಿಸಲು ಸಿ ಟೌನ್‌ನತ್ತ ಮುಖ ಮಾಡಿದ್ದಾರೆ. ಉಪ್ಪು ಹುಳಿ ಖಾರದ ಚೆಲುವೆ ಅನುಶ್ರೀ ಮಾತಿಗೆ ಸಿಕ್ಕಾಗ ಕೋಸ್ಟಲ್‌ವುಡ್ ಮತ್ತು ಮಂಗಳೂರಿನ ನಂಟಿನ ಕುರಿತಂತೆ ಮಾತನಾಡಿದ್ದಾರೆ.
 
l ಮಂಗಳೂರಿನವರಾದರೂ ತುಳು ಚಿತ್ರದಲ್ಲಿ ಅಭಿನಯಿಸಲು ಯಾಕೆ ಇಷ್ಟುಸಮಯ ತೆಗೆದುಕೊಂಡ್ರಿ?
ತುಳು ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ‘ಕೋರಿರೊಟ್ಟಿ’ ಚಿತ್ರದ ನಿರ್ದೇಶಕ, ನಾಯಕ ರಜನೀಶ್ ಅವರು ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದರು. ಚಿತ್ರದ ಕಥೆ ಇಷ್ಟವಾಯಿತು, ಒಪ್ಪಿಕೊಂಡೆ. ಅಮ್ಮನಿಗೆ ನಾನು ತುಳು ಚಿತ್ರದಲ್ಲಿ ನಟಿಸಬೇಕೆಂಬ ಕನಸು ಇತ್ತು. ಅದನ್ನು ‘ಕೋರಿರೊಟ್ಟಿ’ಯಲ್ಲಿ ಅಭಿನಯಿಸುವ ಮೂಲಕ ಈಡೇರಿಸುತ್ತಿದ್ದೇನೆ. 
 
l ಕೋರಿರೊಟ್ಟಿಯಲ್ಲಿ ನಿಮ್ಮ ಪಾತ್ರ. 
ತುಳುನಾಡಿನ ಹೆಣ್ಣು ಮಗಳು ತನ್ನ ಅಣ್ಣಂದಿರ ಏಳಿಗೆಗಾಗಿ ಏನೆಲ್ಲ ಮಾಡುತ್ತಾಳೆ ಎಂಬುಂದು ನನ್ನ ಪಾತ್ರದಲ್ಲಿದೆ. ಅಣ್ಣಂದಿರ ಪಾತ್ರ ದಲ್ಲಿ ತುಳು ರಂಗಭೂಮಿಯ ಮೇರು ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು ಹಾಗೂ ಅರವಿಂದ್ ಬೋಳಾರ್ ಕಾಣಿಸಿಕೊಂಡಿದ್ದಾರೆ. 
 
l ಕೋರಿರೊಟ್ಟಿ ಅನುಭವ ಹೇಗಿತ್ತು?
ಅದ್ಭುತವಾಗಿತ್ತು. ಹೊಸ ಅವಕಾಶ, ಹೊಸ ಅನುಭವ ನೀಡಿತು. ತುಳುವಿನ ಚಿತ್ರರಂಗದ ಮೇರು ಕಲಾವಿದರ ಜತೆ ನಟಿಸಿ ತುಂಬಾ ಖುಷಿಯಾಯಿತು. ನನ್ನ ಆಡು ಭಾಷೆ ತುಳು ಆದು ದರಿಂದ ಯಾವುದೇ ತೊಂದರೆ ಆಗಲಿಲ್ಲ. ಇನ್ನು ಚಿತ್ರದ ಹಾಡುಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಉಳಿದಿದೆ. ಚಿತ್ರ ಅದ್ಭುತವಾಗಿ ಮೂಡಿ ಬರುತ್ತಿದೆ. 
 
l ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಯಾವುದು?
ಬಿಗ್‌ಬಾಸ್‌ ಷೋ ನನಗೆ ಹೊಸ ಇಮೇಜ್‌ ಕೊಟ್ಟಿತ್ತು. ಜನರಿಗೆ ಇನ್ನಷ್ಟು ಹತ್ತಿರವಾ ಗಲು ಸಾಧ್ಯವಾಯಿತು. ಈ ಷೋನಿಂದಲೇ ನಾನು ಮಂಗಳೂರಿನ ಹುಡುಗಿ ಎಂದು ಹೆಚ್ಚಿನ ವರಿಗೆ ಗೊತ್ತಾಗಿದ್ದು ಕೂಡ. 
 
l ಜೀವನದ ಪಯಣ ಹೇಗಿತ್ತು?
ತುಂಬಾ ಏರುಪೇರು ಇತ್ತು. ಆದರೆ ಎಲ್ಲೂ ಕೈ ಕಟ್ಟಿ ಕೂರಲಿಲ್ಲ. ಕಷ್ಟ ಬಂದಾಗ ಕುಗ್ಗಲಿಲ್ಲ, ಸುಖ ಬಂದಾಗ ಹಿಗ್ಗಲಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. 
 
l ನಟನೆ ಮತ್ತು ನಿರೂಪಣೆ ಇವೆರಡನ್ನೂ ಹೇಗೆ ನಿಭಾಯಿಸುತ್ತೀರಿ? 
ಈಗ ಅವಕಾಶವಿದೆ, ಅವಕಾಶ ದೊರಕಿದಾಗ ಕೈ ಕಟ್ಟಿ ಕುಳಿತಿಕೊಳ್ಳಬಾರದು. ನನಗೆ ಸುಮ್ಮನೆ ಕೂತು ಅಭ್ಯಾಸ ಇಲ್ಲ. ನಾನು ಮಾಡುವ ಕೆಲಸದಿಂದ ನಾಲ್ಕು ಜನರಿಗೆ ಸಹಾಯವಾಗುತ್ತದೆಯೇ ಎಂದು ಮೊದಲು ನೋಡಿ ಮತ್ತೆ ಕೆಲಸಕ್ಕೆ ಕೈ ಹಾಕುತ್ತೇನೆ. ಯಾವುದೇ ಕೆಲಸ ಕೊಟ್ಟರೂ ಶ್ರದ್ಧೆ ಭಕ್ತಿಯಿಂದ ಮಾಡುತ್ತೇನೆ. 
 
l ತುಂಬಾ ಖುಷಿ ಕೊಟ್ಟ ಕ್ಷಣ ಯಾವುದು?
ನಟ ಕಮಲ್ ಹಾಸನ್ ಜತೆ ಸ್ಕ್ರೀನ್ ಶೇರ್ ಮಾಡಿದ್ದು ನನಗೆ ಮರೆಯಾಲಾಗದ ಕ್ಷಣ. 
 
l ಅನುಶ್ರೀ ಗುಟ್ಟಾಗಿ ಮದುವೆ ಆದರಂತೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿತ್ತು?
ಅಯ್ಯೋ, ಅದು ‘ಕೋರಿರೊಟ್ಟಿ’ ಚಿತ್ರದ ಶೂಟಿಂಗ್‌ಗಾಗಿ ಮಾಡಿಕೊಂಡಿದ್ದ ಗೆಟಪ್‌. ಅದನ್ನೇ ಬ್ರೇಕಿಂಗ್ ನ್ಯೂಸ್ ಮಾಡಿ ನನಗೆ ಮದುವೆ ಮಾಡಿದ್ರು. ಒಂದಲ್ಲ ಒಂದು ದಿವಸ ಮದುವೆ ಆಗಲೇ ಬೇಕಲ್ಲ. 
 
l ‘ಕೋರಿರೊಟ್ಟಿ’ ರೆಡಿ ಆಗುತ್ತಿದೆ. ಪಾಯಸದ ಊಟ ಯಾವಾಗ?
ಸದ್ಯಕ್ಕೆ ಮದುವೆ ಇಲ್ಲ. ಅದಕ್ಕೆ ಇನ್ನೂ ಸ್ವಲ್ಪ ಸಮಯವಿದೆ. 
 
l ಮದುವೆ ಆಗುವ ಹುಡುಗ ಯಾವ ರೀತಿ ಇರಬೇಕು? 
ನಾನು ತುಂಬಾ ಸಿಂಪಲ್‌ ಹುಡುಗಿ. ನನಗೆ ಆಡಂಬರದ ಜೀವನ ಇಷ್ಟವಿಲ್ಲ. ಜೀವನವನ್ನು ತುಂಬಾ ಸಿಂಪಲ್‌ ಆಗಿ ನೋಡುತ್ತೇನೆ. ಹುಡುಗ ನನ್ನ ಹಾಗೇ ತುಂಬಾ ಸಿಂಪಲ್‌್ಲ್ ಆಗಿರಬೇಕು. ಜೀವನದಲ್ಲಿ ಸಾಧಿಸುವ ಛಲ ಹೊಂದಿರಬೇಕು. ನನ್ನ ಅಮ್ಮನಿಗೆ ಇಷ್ಟ ಆಗಬೇಕು. 
 
l ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳುತ್ತೀರಾ?
ಬೆಳಿಗ್ಗೆ ಯೋಗ ಮತ್ತು ಜಿಮ್‌ಗೆ ಹೋಗುತ್ತೇನೆ. ಊಟದಲ್ಲಿ ಹಿತಮಿತವಿಲ್ಲ. ಬೇಕಾದ ತಿಂಡಿ ತಿನ್ನುತ್ತೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.