ADVERTISEMENT

ಸೀಳಿದ ವಿನ್ಯಾಸದ ಕುರ್ತಾ

ಹೇಮಾ ವೆಂಕಟ್
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಹೆಣ್ಣುಮಕ್ಕಳ ನೆಚ್ಚಿನ ಉಡುಗೆ ಕುರ್ತಾದ ವಿನ್ಯಾಸದಲ್ಲಿ ಮತ್ತೆ ಬದಲಾವಣೆ ಕಂಡಿದೆ. ಆರು ತಿಂಗಳ ಹಿಂದೆಯಷ್ಟೇ ಉದ್ದುದ್ದ ಕುರ್ತಾ, ಅದರ ಜೊತೆ ಪಲಾಝೋ ಅಥವಾ ಲಂಗ ತೊಟ್ಟರೂ ಸೈ ಎಂಬಂತಿದ್ದ ಕುರ್ತಾ ಈಗ ಕೊಂಚ ಬದಲಾದ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಎರಡು ಬದಿಗಳಲ್ಲಿ ಮಾತ್ರ ಸೀಳಿದ್ದ  (ಸ್ಪ್ಲಿಟ್‌) ಕುರ್ತಾ ಈಗ ನಾಲ್ಕು ಕಡೆ ಸೀಳಿದ ವಿನ್ಯಾಸದಲ್ಲಿ ಬಂದಿದೆ.  ಮುಂಭಾಗದಲ್ಲಿ ಸೀಳಿದ  ಉದ್ದದ ಕುರ್ತಾ  ಈಗ ಟ್ರೆಂಡ್‌ ಆಗಿದೆ. ಇದರ ಜೊತೆಗೆ ಪಲಾಝೋ, ಜೀನ್ಸ್‌, ಲೆಗ್ಗಿಂಗ್ಸ್‌, ಲಂಗ ಯಾವುದಾದರೂ ತೊಡಬಹುದು.

ಆಧುನಿಕ ಉಡುಗೆ ಬಯಸುವ ಹೆಣ್ಣುಮಕ್ಕಳ ಅಭಿರುಚಿಗೆ ಹೊಂದಿದಂತೆ ವಿವಿಧ ವಿನ್ಯಾಸದಲ್ಲಿ ಕುರ್ತಾಗಳು ಲಭ್ಯ. ಹೊಟ್ಟೆಯವರೆಗೂ ಸೀಳಿದಂತಿರುವ  ಕುರ್ತಾಗಳೂ ಸಿಗುತ್ತಿವೆ. ಹೆಚ್ಚು ಉದ್ದವಿಲ್ಲದ ಕುರ್ತಾದ ಜೊತೆ ಕಲಂಕರಿ ವಿನ್ಯಾಸದ ಪಲಾಝೋ  ಚೆನ್ನಾಗಿ ಒಪ್ಪುತ್ತದೆ. ಪಾದದವರೆಗೂ ಇರುವ ಕುರ್ತಾಗೆ ಎಲ್ಲ ಬಗೆಯ ಪ್ಯಾಂಟುಗಳು  ಸರಿ ಹೊಂದುತ್ತವೆ.

‘ಸಾಮಾನ್ಯ ಅಳತೆಯ ಕುರ್ತಾಗಳೂ ಮುಂದೆ ಸೀಳಿದ ವಿನ್ಯಾಸದಲ್ಲಿ ಸಿಗುತ್ತದೆ. ಇವುಗಳಿಗೆ ಪಲಾಝೋ ಸರಿ ಹೊಂದಿದರೆ, ಹೆಚ್ಚು ಉದ್ದದ ಕುರ್ತಾಗಳಿಗೆ ಲೆಗ್ಗಿಂಗ್ಸ್‌  ಧರಿಸುವುದೇ ಸೂಕ್ತ.ಹೂವಿನ ಚಿತ್ರವಿರುವ ಉದ್ದದ ಕುರ್ತಾಗಳಿಗೆ ಕಪ್ಪು ಲೆಗ್ಗಿಂಗ್ಸ್‌, ಕಪ್ಪು ಪಲಾಝೋ ಹೊಂದುತ್ತದೆ. ಕಿವಿಗೆ ದೊಡ್ಡ ಹ್ಯಾಂಗಿಂಗ್‌, ಜುಮುಕಿ ತೊಟ್ಟರೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ’ ಎಂದು ಫ್ಯಾಷನ್ ತಜ್ಞರು  ಅಭಿಪ್ರಾಯಪಡುತ್ತಾರೆ.

ಜೀನ್ಸ್‌ಗೂ ಸೈ: ತೆಳ್ಳಗಿನ ನೈಲಾನ್‌ ಬಟ್ಟೆಯ ಮೇಲೆ ತೆಳು ಬಣ್ಣದ ಹೂಗಳ ಚಿತ್ತಾರವಿರುವ ಕುರ್ತಾಗಳನ್ನು ಹೆಣ್ಣುಮಕ್ಕಳು ಜೀನ್ಸ್‌ ಮೇಲೂ ತೊಡುತ್ತಿದ್ದಾರೆ. ಇದು ಕೊಂಚ ಪಾರದರ್ಶಕ ಕುರ್ತಾ. ಇದನ್ನು ಫ್ಯಾಷನ್‌ಪ್ರಿಯ ತರುಣಿಯರು ಹೆಚ್ಚು ಇಷ್ಟಪಡುತ್ತಿದ್ದಾರೆ. ಕಾಟನ್‌, ಕೈಮಗ್ಗ, ರೇಷ್ಮೆ, ಜಾರ್ಜೆಟ್‌, ಶಿಫಾನ್‌ ಬಟ್ಟೆಗಳ  ಕುರ್ತಾಗಳು ಸಿಗುತ್ತಿವೆ. ತುಂಬು ತೋಳಿನ ಜೊತೆಗೆ ಕಾಲರ್‌ ಇರುವುದರಿಂದ ಹೆಚ್ಚು ಆರಾಮದಾಯಕ ಹಾಗೂ ಗೌರವಯುತ ಉಡುಪು ಎನಿಸಿದೆ.

‘ಮುಂಭಾಗ ಸೀಳಿದ ವಿನ್ಯಾಸದ, ಉದ್ದದ ಕುರ್ತಾಗಳು ಈಗ ಹೆಚ್ಚು ಬೇಡಿಕೆಯಲ್ಲಿವೆ. ಸಿನಿಮಾ ನಟಿಯರಲ್ಲದೇ ಸಾಮಾನ್ಯರೂ ಈ ವಿನ್ಯಾಸಕ್ಕೆ ಮನಸೋತಿದ್ದಾರೆ. ನಮ್ಮಲ್ಲಿಗೆ ಬರುವ ಹೆಚ್ಚಿನ ಗ್ರಾಹಕರು ಇಂಥಾ ಕುರ್ತಾಗಳನ್ನೇ ಖರೀದಿಸುತ್ತಿದ್ದಾರೆ’ ಎಂದು ವಸ್ತ್ರ ವಿನ್ಯಾಸಕಿ ರೇಷ್ಮಾ ಕುನ್ಹಿ ಹೇಳುತ್ತಾರೆ.

‘ಪಾದದವರೆಗಿನ  ಉದ್ದದ ಕುರ್ತಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಾಲೇಜು, ಕಚೇರಿ, ಪಾರ್ಟಿಗಳಿಗೆ ಹೀಗೆ ಸಂದರ್ಭಕ್ಕೆ ಸರಿಯಾದ  ಕುರ್ತಾಗಳು ಸಿಗುತ್ತವೆ. ಪಾರ್ಟಿಗೆ ಹೋಗುವವರಿಗಾಗಿ ಸ್ವಲ್ಪ ಅದ್ಧೂರಿ ಕುರ್ತಾಗಳನ್ನು ಸಿದ್ಧಪಡಿಸುತ್ತೇವೆ.  ಬಟ್ಟೆಯ ಬೆಲೆಗೆ ಅನುಗುಣವಾಗಿ ಕುರ್ತಾದ ದರ ನಿಗದಿಪಡಿಸುತ್ತೇವೆ’ ಎನ್ನುತ್ತಾರೆ ಚಾಮರಾಜಪೇಟೆಯ ರೋಹಿಣಿ ಫ್ಯಾಷನ್ಸ್‌ ಗ್ಯಾಲರಿಯ ಜಯ್‌ ಜೈನ್‌. 

*
ಮುಂಭಾಗ ಸೀಳಿದ ವಿನ್ಯಾಸ ಇರುವ ಕುರ್ತಾವನ್ನು ಎಲ್ಲ ಮಹಿಳೆಯರೂ ಇಷ್ಟಪಡುತ್ತಿದ್ದಾರೆ. ಇದು ಎಷ್ಟು ಆರಾಮದಾಯಕ ಉಡುಗೆ ಎಂದರೆ, ಇದನ್ನು ಬೀಚ್‌ಗೆ ಹೋಗುವಾಗಲೂ ತೊಡಬಹುದು.
ರೇಷ್ಮಾ ಕುನ್ಹಿ,
ವಸ್ತ್ರವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT