ADVERTISEMENT

ಹಳ್ಳಿಗೊಂದು ಬೇಕು ‘ಅಳ್ಳೀಮರ’

ಬ್ಲಾಗಿಲನು ತೆರೆದು...

ಸಾಕ್ಷಿ
Published 21 ನವೆಂಬರ್ 2013, 19:30 IST
Last Updated 21 ನವೆಂಬರ್ 2013, 19:30 IST

ಮಕ್ಕಳ ಪತ್ರಿಕೆಯ ಮುಂದುವರಿದ ಭಾಗದಂತೆ ಬ್ಲಾಗ್‌ ರೂಪುಗೊಂಡಿದೆ. ಈ ಬ್ಲಾಗಿನಲ್ಲಿ ಹೆಗ್ಗಡನಹಳ್ಳಿ ಶಾಲೆಯ ಮಕ್ಕಳ ವಿವಿಧ ಚಟುವಟಿಕೆಗಳ ವಿವರಗಳಿವೆ. ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಪರ್ಧೆಯಲ್ಲಿ ಶಾಲೆಯ ಹುಡುಗಿಯರು ಫಸ್ಟ್‌ ಪ್ರೈಜ್‌ ಗೆದ್ದ ಬಗ್ಗೆ ವಿವರಗಳೂ ಚಿತ್ರಗಳೂ ಇವೆ.

ಅರಳೀಮರದ ಕೆಳಗೆ ಹುಲ್ಲುಕಡ್ಡಿಯೂ ಬೆಳೆಯೋದಿಲ್ಲ ಎನ್ನುವ ಮಾತಿದೆ. ಆದರೆ, ಈ ಅರಳೀಮರದ ಕೆಳಗೆ ಮಕ್ಕಳು ಆಡಿಕೊಳ್ಳುತ್ತಿದ್ದಾರೆ. ಮರದ ನೆರಳಿನಲ್ಲಿ ಚಿಣ್ಣರ ನಾಳೆಗಳು ಅರಳುತ್ತಿವೆ. ಅಂದಹಾಗೆ, ಇದು ಮಕ್ಕಳ ಮಾತಿನಲ್ಲಿ ‘ಅಳ್ಳೀಮರ’. ಇದು ಬ್ಲಾಗಿನ ಹೆಸರೂ (allimara.blogspot.in) ಹೌದು.

‘ಅಳ್ಳೀಮರ’– ಮಯ್ಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಆಟದ ಮೈದಾನದಂತಿದೆ. ಅಂದಹಾಗೆ, ‘ಅಳ್ಳೀಮರ’ ಹೆಸರಿನ ತಿಂಗಳ ಪತ್ರಿಕೆಯೊಂದು ಈ ಶಾಲೆಯಿಂದ ಪ್ರಕಟಗೊಳ್ಳುತ್ತಿದೆ. ನಾಟ್ಕದ ಮೇಷ್ಟ್ರು ಸಂತೋಷ್‌ ಗುಡ್ಡಿಯಂಗಡಿ ಈ ಪತ್ರಿಕೆಯನ್ನು ರೂಪಿಸುತ್ತಿದ್ದಾರೆ. ಶಾಲಾ ಮಕ್ಕಳ ಕನಸು ಕನವರಿಕೆಗಳು ಗದ್ಯ, ಪದ್ಯ, ಚಿತ್ರಗಳ ರೂಪದಲ್ಲಿ ಈ ಅಳ್ಳೀಮರದ ಪುಟಗಳಲ್ಲಿ ಉತ್ಸಾಹದಿಂದ ಪುಟಿಯುತ್ತಿರುತ್ತವೆ. ಸಹೃದಯರ ಬಳಗವೊಂದಕ್ಕೆ ಸಂತೋಷ್‌ ಪ್ರತಿ ತಿಂಗಳು ನಿಷ್ಠೆಯಿಂದ ಪತ್ರಿಕೆ ತಲುಪಿಸುತ್ತಿದ್ದಾರೆ. ಈ ಪತ್ರಿಕೆಯ ಕೆಲವು ಪಿಡಿಎಫ್‌ ಪುಟಗಳನ್ನೂ ಬ್ಲಾಗಿನಲ್ಲಿ ಕಾಣಬಹುದು.

ಮಕ್ಕಳ ಪತ್ರಿಕೆಯ ಮುಂದುವರಿದ ಭಾಗದಂತೆ ಬ್ಲಾಗ್‌ ರೂಪುಗೊಂಡಿದೆ. ಈ ಬ್ಲಾಗಿನಲ್ಲಿ ಹೆಗ್ಗಡನಹಳ್ಳಿ ಶಾಲೆಯ ಮಕ್ಕಳ ವಿವಿಧ ಚಟುವಟಿಕೆಗಳ ವಿವರಗಳಿವೆ. ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಪರ್ಧೆಯಲ್ಲಿ ಶಾಲೆಯ ಹುಡುಗಿಯರು ಫಸ್ಟ್‌ ಪ್ರೈಜ್‌ ಗೆದ್ದ ಬಗ್ಗೆ ವಿವರಗಳೂ ಚಿತ್ರಗಳೂ ಇವೆ. ‘ಝಣ ಝಣ ಚುನಾವಣೆ’ ಎನ್ನುವ ಈ ನಾಟಕದ ರಚನೆ ಮತ್ತು ನಿರ್ದೇಶನ ಸಂತೋಷ್‌ ಗುಡ್ಡಿಯಂಗಡಿ ಅವರದು.

ಶಾಲೆಯ ಚೌಕಟ್ಟಿನ ನಡುವೆ ಮಾತ್ರವಲ್ಲದೆ, ಪರಿಸರದ ನಡುವೆಯೂ ಮಕ್ಕಳು ಪಾಠ ಕಲಿಯುತ್ತಿರುವ, ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ಛಾಯಾಚಿತ್ರಗಳು ಬ್ಲಾಗ್‌ನಲ್ಲಿವೆ. ಗ್ರಾಮ್ಯ ಸೊಗಡು ಬ್ಲಾಗ್‌ನ ಬರಹ–ಚಿತ್ರಗಳಲ್ಲಿ ಎದ್ದುಕಾಣುವಂತಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವು ಲೇಖನಗಳೂ ಬ್ಲಾಗಿನಲ್ಲಿವೆ. ಕವಯಿತ್ರಿ ರೂಪ ಹಾಸನ ಅವರ ‘ಆತಂಕದಲ್ಲಿ ತಲ್ಲಣಿಸುತ್ತಿದೆ ಹೆಣ್ಣುಜೀವ’ ಬರಹದ ಒಂದು ತುಣುಕು ನೋಡಿ:

‘‘ಹಳ್ಳಿಯ ಬಡ ಕುಟುಂಬವೊಂದರ ೧೧ ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಕಳೆದ ವಾರವಷ್ಟೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು? ಎಂಬ ಪ್ರಶ್ನೆಗೆ ಏನು ಉತ್ತರಿಸುವುದೆಂಬ ಅರಿವಿಲ್ಲದೇ ಕಂಗಳು ತುಂಬುತ್ತವೆ. ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಇನ್ನೂ ಆತಂಕದಿಂದ ತಲ್ಲಣಿಸುತ್ತಿದ್ದಾರೆ. ಈಗ ಆ ಮಗು ಅನುಭವಿಸಿದ ವಿನಾ ಕಾರಣದ ಮಾನಭಂಗದ ಶಿಕ್ಷೆಗೆ ನ್ಯಾಯ ಯಾರು ಕೊಡುತ್ತಾರೆ?’’.

ರೂಪ ಅವರ ಬರಹದಲ್ಲಿ ವರ್ತಮಾನದ ಕ್ರೌರ್ಯದ ಘಟನೆಗಳ ವಿವರಗಳಿವೆ. ಇಂಥ ತಲ್ಲಣಗಳ ನಡುವೆಯೂ ಒಳ್ಳೆಯತನದ ಬಗ್ಗೆ ನಂಬಿಕೆ ಉಳಿಸುವ ವಿಷಯಗಳೂ ಸಮಾಜದಲ್ಲಿ ಇವೆಯಷ್ಟೇ. ಅಂಥ, ಒಳ್ಳೆಯತನ, ಜಾಕನಪಲ್ಲಿ ಮೇಷ್ಟ್ರು ಅಶೋಕ ತೊಟ್ನಳ್ಳಿ ಅವರ ಕುರಿತ ಬರಹ ಬಿಂಬಿಸುತ್ತದೆ. ಈ ಲೇಖನದ ಒಂದು ಭಾಗ– ‘‘ಜನವರಿ ತಿಂಗಳ ಎರಡನೇ ವಾರದಂದು ಗುಲ್ಬರ್ಗಾದಿಂದ ಪ್ರಕಟಗೊಳ್ಳುವ ಎಲ್ಲಾ ಸಣ್ಣ ದೊಡ್ಡ ಪತ್ರಿಕೆಗಳು ಜಾಕನಪಲ್ಲಿಯನ್ನು ಹಾಡಿ ಹೊಗಳಿದವು. ಇದಕ್ಕೆ ಕಾರಣ ಈ ಪುಟ್ಟ ಊರಿನ ಪ್ರೌಢಶಾಲಾ ಮಕ್ಕಳು. ಈ ಬಾರಿಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ಧೆಯಲ್ಲಿ ಈ ಮಕ್ಕಳು ಪ್ರಥಮ ಸ್ಥಾನ ಗಳಿಸಿ, ಆತಿಥೇಯ ಗುಲ್ಬರ್ಗ ಜಿಲ್ಲೆಗೆ ಏಕೈಕ ಪ್ರಥಮ ಬಹುಮಾನದ ಕಾಣಿಕೆ ನೀಡಿದ್ದರು. ಈ ಮಕ್ಕಳ ಪ್ರತಿಭೆಯ ಹಿಂದೊಂದು ಸ್ಫೂರ್ತಿಯ ಚಿಲುಮೆಯಿದೆ. ಅದು ಜಾಕನಪಲ್ಲಿ ಪ್ರೌಢಶಾಲೆಯ ನಾಟಕದ ಮೇಸ್ಟ್ರು ಅಶೋಕ ತೊಟ್ನಳ್ಳಿ’’. ಇಂಥ ಮೇಷ್ಟ್ರುಗಳೇ ಸಮಾಜದ ನಾಳೆಗಳ ಬಗ್ಗೆ ನಿರೀಕ್ಷೆ ಉಳಿಸುತ್ತಾರೆ.

‘ಅಳ್ಳೀಮರ’ ಅನೇಕ ಸಹೃದಯರಿಗೆ ಮೆಚ್ಚುಗೆಯಾಗಿದೆ. ಹಿರಿಯ ಕವಿ ಚೆನ್ನವೀರ ಕಣವಿ– ‘‘ಹೆಗ್ಗಡಹಳ್ಳಿ ಮಕ್ಕಳ ಶಾಲೆಯ ಪತ್ರಿಕೆ ನೋಡಿ ಸಂತೋಷವಾಯಿತು. ಗದ್ಯ–ಪದ್ಯ–ಚಿತ್ರ ಎಲ್ಲದರಲ್ಲಿಯೂ ಈ ಶಾಲೆಯ ಮಕ್ಕಳು ಸಹಜವಾಗಿ, ಸರಳವಾಗಿ ಮುಗ್ಧತೆಯಿಂದ ಬರವಣಿಗೆ ನಡೆಸಿರುವುದು ಹಾಗೂ ಅದಕ್ಕೆ ತಾವು ಪ್ರೋತ್ಸಾಹ ನೀಡುತ್ತಿರುವುದೂ ತುಂಬಾ ಮೆಚ್ಚುಗೆಯನ್ನುಂಟುಮಾಡಿತು. ಹಾಗೆಯೇ ‘ನಮ್ಮ ಅತಿಥಿ’ ಅಂಕಣದಲ್ಲಿ ಸ. ರಘುನಾಥ ಮೇಷ್ಟ್ರು ಬಗ್ಗೆ ಬರೆದು ಮಕ್ಕಳಿಗೆ ಪ್ರೇರಣೆ ನೀಡಿರುವುದು ಔಚಿತ್ಯಪೂರ್ಣವಾಗಿದೆ’’ ಎಂದು ಬರೆದಿರುವ ಪತ್ರವೂ ಬ್ಲಾಗ್‌ನಲ್ಲಿದೆ.

ಇಂಥ ‘ಅಳ್ಳೀಮರ’ಗಳು ಹಳ್ಳಿಗೊಂದಾದರೂ ಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.