ADVERTISEMENT

ಹಾಳು ಹಂಪಿಯಲಿ ಕತೆಯ ಮೂಡಿಸಿ...

ಹೇಮಾ ವೆಂಕಟ್
Published 24 ನವೆಂಬರ್ 2013, 19:30 IST
Last Updated 24 ನವೆಂಬರ್ 2013, 19:30 IST
ಹಾಳು ಹಂಪಿಯಲಿ	 	ಕತೆಯ ಮೂಡಿಸಿ...
ಹಾಳು ಹಂಪಿಯಲಿ ಕತೆಯ ಮೂಡಿಸಿ...   

ಹಿರಿಯ ಪತ್ರಿಕಾ ಛಾಯಾಗ್ರಾಹಕ ವೆಂಕಟೇಶ್‌ ಪ್ರತಿವರ್ಷ ವಿಭಿನ್ನ ವಸ್ತು ವಿಷಯ ಇಟ್ಟುಕೊಂಡು ಛಾಯಾಚಿತ್ರ ಪ್ರದರ್ಶನ ನಡೆಸುತ್ತಿರುವ ಉತ್ಸಾಹಿ. ಈ ವರ್ಷ ಅವರು ಹಾಳು ಹಂಪಿಯ ಮಧ್ಯೆ ಲಿಂಗ ಪರಿವರ್ತಿತ ಹೆಣ್ಣೊಬ್ಬಳ ಬಗೆ ಬಗೆಯ ಭಾವಗಳನ್ನು  ಫ್ರೇಮ್‌ನೊಳಗೆ ತಂದಿದ್ದಾರೆ.

ಈ ಚಿತ್ರಗಳ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಇಂದು (ನ.25) ಬೆಳಿಗ್ಗೆ 12.30ಕ್ಕೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಉದ್ಘಾಟಿಸಲಿದ್ದಾರೆ. ಐದು ದಿನ ನಡೆಯುವ ಪ್ರದರ್ಶನಕ್ಕೆ ‘ದಿ ಎಯ್ತ್‌ ವಂಡರ್‌’ (ಎಂಟನೇ ಅದ್ಭುತ) ಎಂದು ಹೆಸರಿಟ್ಟಿದ್ದಾರೆ.

ಹಂಪಿಯ ವೈಭವವನ್ನು, ಅಲ್ಲಿನ ಸುಂದರ ಬಂಡೆಗಳು, ಹಳೆಯ ವೈಭವ ಸಾರುವ ಕಲ್ಲಿನ ಕಟ್ಟಡಗಳನ್ನು ಅನೇಕರು ಸೆರೆಹಿಡಿದಿದ್ದಾರೆ. ಅನೇಕ ಸಿನಿಮಾಗಳು ಅಲ್ಲಿ ಚಿತ್ರೀಕರಣಗೊಂಡಿವೆ. ಇತಿಹಾಸ ತಜ್ಞರಿಗೆ, ವಾಸ್ತುಶಿಲ್ಪಿಗಳಿಗೆ, ಕಲಾವಿದರಿಗೆ, ಪ್ರವಾಸಿಗಳಿಗೆ ಹಂಪಿ ನಿರಂತರ ಅಧ್ಯಯನ ವಿಷಯವಾಗಿದೆ. ಆದರೆ ವೆಂಕಟೇಶ್‌ ಹಂಪಿಯ ನಿರ್ಲಕ್ಷಿತ ಪ್ರದೇಶಗಳನ್ನೇ ಈ ಛಾಯಾಗ್ರಹಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣವೂ ಕುತೂಹಲಕರವಾಗಿದೆ.

‘ಇಲ್ಲಿ ಲಿಂಗಪರಿವರ್ತಿತ ಸುಮಿತ್ರಾ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಹಂಪಿ ಒಂದು ಕಾಲದಲ್ಲಿ ವಿಜಯನಗರ ಅರಸರ ಶ್ರೀಮಂತಿಕೆಗೆ ಸಾಕ್ಷಿಯಾಗಿತ್ತು. ವಿಜಯನಗರ ಸಾಮ್ರಾಜ್ಯ ಪತನದ ನಂತರ ಹಾಳು ಹಂಪಿ ಎನಿಸಿತ್ತು. ಹಾಗಾಗಿ ಹಂಪಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶಗಳಿಗೆ ರೂಪಕವಾಗಿ ಬಳಕೆಯಾಗುತ್ತಿದೆ.

ಲೈಂಗಿಕ ಅಲ್ಪಸಂಖ್ಯಾತರೂ ಅಷ್ಟೇ, ಎಲ್ಲರಂತೆ ಬಾಲ್ಯ ಕಳೆದು ಹದಿಹರೆಯಕ್ಕೆ ಬರುತ್ತಿದ್ದಂತೆ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಒಂದರ್ಥದಲ್ಲಿ ಹಂಪಿ ಮತ್ತು ದ್ವಿಲಿಂಗಿಗಳ ಪಾಡು ಒಂದೇ ರೀತಿಯದು.

ನಾನು ಲಿಂಗಪರಿವರ್ತಿತ ರೂಪದರ್ಶಿಯೊಬ್ಬಳನ್ನು ಹಂಪಿಯ ಅವಶೇಷಗಳ ನಡುವೆ ಸೆರೆಹಿಡಿಯುವುದು ಅದ್ಭುತ ಅನುಭವವಾಗಿತ್ತು. ಹಂಪಿಯ ವಕ್ರರೂಪಗಳನ್ನು ಸೆರೆಹಿಡಿದಿದ್ದೇನೆ. ಇದು ಸಮಾಜಕ್ಕೊಂದು ಸಂದೇಶ ನೀಡುವ ಪ್ರಯತ್ನವಾಗಿದೆ’ ಎಂಬುದು ವೆಂಕಟೇಶ್‌ ನೀಡುವ ವಿವರಣೆ.

‘ವೃತ್ತಿಯಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿರುವ, ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೆ ಒಳಗಾದ ಸುಮಿತ್ರಾ ಈ ರೂಪದರ್ಶಿ. ಈ ಛಾಯಾಗ್ರಹಣದ ಹಿಂದೆ ಇರುವ ಆಕೆಯ ಆಸಕ್ತಿ ಮಹತ್ವದ್ದು. ಈ ಹಿಂದೆ ಬೀದರ್‌ನಲ್ಲಿ ಸೆರೆಹಿಡಿದ ಲೈಂಗಿಕ ಅಲ್ಪಸಂಖ್ಯಾತೆಯ ಚಿತ್ರಗಳನ್ನು ನೋಡಿ ತಾನೇ ರೂಪದರ್ಶಿಯಾಗಲು ಮುಂದೆ ಬಂದಿರುವುದಲ್ಲದೆ ಉಡುಪು, ಅಲಂಕಾರಕ್ಕೆ ಬೇಕಾದ ವಸ್ತುಗಳು ಎಲ್ಲವನ್ನೂ ತಾವೇ ಹೊಂದಿಸಿಕೊಂಡಿದ್ದಾರೆ.

ಸಹಾಯಕಿಯೊಬ್ಬಳನ್ನು ಜೊತೆಗಿರಿಸಿಕೊಂಡು ಮೂರು ದಿನ ಹಂಪಿಯ ಬಿಸಿಲು ಮತ್ತು ಭಯದ ನಡುವೆ ಕಾರಿನಲ್ಲೇ ಉಡುಪು ಬದಲಾಯಿಸಿಕೊಳ್ಳುತ್ತಿದ್ದ ಸುಮಿತ್ರಾ ಪಕ್ಕಾ ವೃತ್ತಿಪರ ರೂಪದರ್ಶಿಯಂತೆ ಕಂಡಿದ್ದಾರೆ. ಸೌಂದರ್ಯಪ್ರಜ್ಞೆ ಆಕೆಗಿದೆ’ ಎನ್ನುತ್ತಾರೆ ವೆಂಕಟೇಶ್‌. ನ. 25ರಿಂದ 29ರವರೆಗೆ ಈ ಛಾಯಾಗ್ರಹಣ ಪ್ರದರ್ಶನ ನಡೆಯಲಿದೆ.

ADVERTISEMENT

ಕಲ್ಲಿನ ರೂಪಕ

ಸುಂದರವಾಗಿರುವ ಬೆಟ್ಟವನ್ನು ಒಡೆದು ಕಲ್ಲಿಗೆ ಅಂದದ ರೂಪ ನೀಡುತ್ತಾನೆ ಶಿಲ್ಪಿ. ಅದೇ ರೀತಿ ನಮ್ಮ ಜೀವನವೂ. ಬಾಲ್ಯದಲ್ಲಿ ಸಹಜವಾಗಿರುವ ನಾವು ಬೇಕೋ ಬೇಡವೋ ಒಡೆದ ಕಲ್ಲಿನಂತಾಗಿ ಬದಲಾಗುತ್ತೇವೆ.

ನನ್ನ ಜೀವನ ಮತ್ತು ಕಲ್ಲಿನ ಕತೆ ಭಿನ್ನವಾಗಿಲ್ಲ. ಕಲ್ಲು ಮೌನವಾಗಿರುತ್ತದೆ. ನಾವು ಮಾತನಾಡುತ್ತೇವೆ. ಆದರೂ ನಮ್ಮನ್ನು ಸಮಾಜದ ಭಾಗ ಎಂದು ಯಾರೂ ಪರಿಗಣಿಸುತ್ತಿಲ್ಲ. ಹಣ ಬಲ, ಜನ ಬಲ ಎರಡೂ ನಮಗಿಲ್ಲ. ಆದರೆ ನಮ್ಮಲ್ಲೂ ಸೌಂದರ್ಯ ಇದೆ. ಹಾಗಂತ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡಿದ್ದೇನೆ.

ಪ್ರದರ್ಶನದ ಆಮಂತ್ರಣ ಪತ್ರಿಕೆ ನೋಡಿದವರು ಆಕಾಶದಿಂದ ನಕ್ಷತ್ರ ಕೆಳಗೆ ಬಿದ್ದ ಹಾಗಾಗಿದೆ. ನಕ್ಷತ್ರ ಬಿದ್ದಾಗಿನ ಭಯ ಮತ್ತು ನೋಡುವ ಕುತೂಹಲ ಎರಡೂ ಇರುವ ಭಾವ ಮೂಡಿಸಿದೆ. ಯಾರಾದರೂ ನನ್ನ ಪ್ರತಿಭೆ, ಸೌಂದರ್ಯವನ್ನು ಮಾಡೆಲಿಂಗ್‌ ಅಥವಾ ಸಿನಿಮಾಗಳಲ್ಲಿ ಬಳಸಿಕೊಳ್ಳಲು ಮನಸ್ಸು ಮಾಡಿದರೆ ನನ್ನ ಬದುಕು ಬದಲಾಗಬಹುದು ಎಂಬ  ನಿರೀಕ್ಷೆಯಲ್ಲಿದ್ದೇನೆ.
–ಸುಮಿತ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.