ADVERTISEMENT

ಹುಲಿ ಸಂರಕ್ಷಣೆಗೆ ಪ್ರದರ್ಶನ

ಕಲಾ ಕಲಾಪ

ಅನಿತಾ ಎಚ್.
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

‘ಆಕರ್ಷಕವಾದ ಮೈ ಬಣ್ಣ, ತೀಕ್ಷ್‍ಣವಾದ ಕಣ್ಣುಗಳಿಂದ ಕಂಗೊಳಿಸುವ ಹುಲಿಯನ್ನು ನೋಡಿದಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ. ಇಂತಹ ಸುಂದರವಾದ ಪ್ರಾಣಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದು. ಈ ಕುರಿತು ಜಾಗೃತಿ ಮೂಡಿಸುವುದು ಪ್ರದರ್ಶನದ ಉದ್ದೇಶ...’

ನಗರದ ರಂಗೋಲಿ ಕಲಾ ಕೇಂದ್ರದಲ್ಲಿ ‘ಹುಲಿಗಳ ಸಂರಕ್ಷಣೆ’ ಕುರಿತು ಚಿತ್ರಕಲಾ ಪ್ರದರ್ಶನ ಏರ್ಪಡಿಸಿರುವ ಚಿತ್ರ ಕಲಾವಿದ ಕೆ.ಚಂದ್ರನ್‌ ಅವರು ಪ್ರದರ್ಶನದ ಬಗ್ಗೆ ವಿವರಣೆ ನೀಡಿದ್ದು ಹೀಗೆ.

ಮೂಲತಃ ಕೇರಳ ರಾಜ್ಯದ ಆಲಪ್ಪಿ ಜಿಲ್ಲೆಯ ಪುರಕ್ಕಾಡು ಗ್ರಾಮದವರಾದ ಚಂದ್ರನ್‌ ಅವರು ಚಿಕ್ಕಂದಿನಿಂದಲೇ ಚಿತ್ರಕಲೆಯ ಗೀಳು ಹಚ್ಚಿಕೊಂಡವರು. ತಮ್ಮಲ್ಲಿದ್ದ ಕಲೆಯ ಹುಚ್ಚಿನಿಂದಾಗಿ ಹದಿನೇಳನೇ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಬಂದು ನಾನಾ ಕಷ್ಟಗಳನ್ನು ಎದುರಿಸಿ ಇದೀಗ ವೃತ್ತಿಪರ ಚಿತ್ರಕಲಾವಿದರಾಗಿ ಗುರುತಿಸಿಕೊಂಡಿರುವವರು.

‘ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ ಚಿತ್ರಕಲೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯಿಂದ ‘ರಾಜ್‌ ಕಮಲ್‌ ಆರ್ಟ್ಸ್‌’ಗೆ ಸೇರಿಕೊಂಡೆ. ನನ್ನ ಬಳಿ ಹಣ ಇರಲಿಲ್ಲ. ಚಿತ್ರಕಲೆ ಕಲಿಯಲು ಅಲ್ಲಿ ಪಾತ್ರೆಗಳನ್ನು ತೊಳೆದೆ. ಇತರೆ ಸ್ವಚ್ಛತಾ ಕೆಲಸಗಳನ್ನೂ ನಿರ್ವಹಿಸಿದೆ. ಚಿತ್ರಗಳನ್ನು ಬಿಡಿಸಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗಳ ಬದಿಯಲ್ಲಿ ಇಟ್ಟು ಮಾರಾಟ ಮಾಡಿದೆ. ಪ್ರಖ್ಯಾತ ಚಿತ್ರಕಲಾವಿದರ ಬಗ್ಗೆ ತಿಳಿದುಕೊಂಡೆ. ಅವರು ಮಾಡಿದ್ದ ಕೆಲಸಗಳನ್ನು ನೋಡಿದೆ. ಮನೆಗೆ ಬಂದು ಅಂತೆಯೇ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದೆ. ಈ ಎಲ್ಲ ಕಠಿಣ ಪರಿಶ್ರಮಗಳಿಂದ  ನಾನಿಂದು ಸಮಾಜ ಗುರುತಿಸುವ ಮಟ್ಟಿಗೆ ಚಿತ್ರಕಲಾವಿದನಾಗಿ ಬೆಳೆದಿರುವುದು ಸಂತಸ ತಂದಿದೆ’ ಎಂದು ಅನಿಸಿಕೆ ಹಂಚಿಕೊಂಡರು.

‘ಕಳೆದ ಮೂವತ್ತು ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು,  ಲ್ಯಾಂಡ್‌ಸ್ಕೇಪ್‌ ಕೆಲಸಗಳನ್ನು ಹೆಚ್ಚಾಗಿ ನಿರ್ವಹಿಸಿದ್ದೇನೆ. ಈ ಕುರಿತ ಹಲವು ಪ್ರದರ್ಶನಗಳನ್ನೂ ನಡೆಸಿದ್ದೇನೆ. ಆದರೆ ಇದೇ ಮೊದಲ ಸಲ ವಿಷಯಾಧಾರಿತವಾಗಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದೇನೆ. ಜುಲೈ 29 ವಿಶ್ವ ಹುಲಿಗಳ ಸಂರಕ್ಷಣಾ ದಿನ. ಹುಲಿಗಳ ಸಂರಕ್ಷಣೆ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳವರಿಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ಹುಲಿಗಳನ್ನು ಕೊಲ್ಲುವವರು ಹಣದ ಆಸೆಗಾಗಿ ನಗರಗಳಿಗೆ ತಂದು ಮಾರಾಟ ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ಹುಲಿಗಳ ಸಂರಕ್ಷಣೆ ಬಗ್ಗೆ ಅರಿವು ಇದ್ದಲ್ಲಿ ಯಾರೂ ಕೊಳ್ಳಲು ಮುಂದಾಗುವುದಿಲ್ಲ. ಈ ಮೂಲಕ ಕೊಲ್ಲುವವರ ಕಾಯಕಕ್ಕೆ ಕಡಿವಾಣ ಬೀಳಲಿದೆ ಎಂಬುದು ನನ್ನ ನಂಬಿಕೆ. ಈ ಮೂಲಕವೇ ಹುಲಿಗಳ ಸಂರಕ್ಷಣೆ ಆಗಿ ಬಿಡುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಇದೊಂದು ಸಣ್ಣ ಪ್ರಯತ್ನ. ಚಿತ್ರಕಲೆಯ ಮೂಲಕ ಸಾಮಾಜಿಕವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ತೃಪ್ತಿ ನನ್ನದಾಗಲಿದೆ’ ಎನ್ನುವ ಅವರು, ಭವಿಷ್ಯದಲ್ಲಿಯೂ ಸಾಮಾಜಿಕ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸುವ ಗುರಿ ಹೊಂದಿದ್ದಾರೆ.

ಹುಲಿಗಳ ಸಂರಕ್ಷಣೆ ಕುರಿತ ಈ ಚಿತ್ರಕಲಾ ಪ್ರದರ್ಶನವು ಜುಲೈ 31ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯ. (ಮಾಹಿತಿಗೆ: 9341073104)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.