ADVERTISEMENT

‘ಚಿತ್ಕಲೆ’ಯ ಸೃಜನಶೀಲ ವೈಭವ

ಹವ್ಯಾಸದ ಹಾದಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST
ವೈಭವಿ ಅವರು ರಚಿಸಿದ ಕಲಾಕೃತಿ
ವೈಭವಿ ಅವರು ರಚಿಸಿದ ಕಲಾಕೃತಿ   

ವೈದ್ಯ ವೃತ್ತಿಯಲ್ಲಿ ಸಾಕಷ್ಟು ವರಮಾನವಿದ್ದರೂ ತಮ್ಮ ಅಂತರಂಗದ ಬೆಳವಣಿಗೆಗೆ ಹವ್ಯಾಸವನ್ನು ನೆಚ್ಚಿಕೊಂಡವರು ಡಾ. ವೈಭವಿ ಬಿ. ಪ್ರಸಾದ್‌. ತಮ್ಮ ಕಲಾಕೃತಿಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣವನ್ನು ಒಂದು ವೇದಿಕೆಯನ್ನಾಗಿಸಿಕೊಂಡಿದ್ದಾರೆ.

‘ವೃತ್ತಿ ಬದುಕು ಮತ್ತು ಹವ್ಯಾಸ ಇವೆರಡೂ ನನ್ನೆರಡು ಕಣ್ಣುಗಳಿದ್ದಂತೆ. ವೃತ್ತಿ ಬದುಕು ನನ್ನ ಬೌದ್ಧಿಕ ಬೆಳವಣಿಗೆಗೆ ಕಾರಣವಾದರೆ, ಅಧ್ಯಾತ್ಮ ಬೆಳವಣಿಗೆಗೆ ಇರುವ ದಾರಿ ಹವ್ಯಾಸ’

–ಹೀಗೆನ್ನುವ ವೈಭವಿ ಬಿ. ಪ್ರಸಾದ್‌ ವೃತ್ತಿಯಲ್ಲಿ ವೈದ್ಯರು. ತಮ್ಮ ವೃತ್ತಿ ಜೀವನದ ಜಂಜಡಗಳ ನಡುವೆಯೂ ಅವರ ಮನಸ್ಸು ಚಿತ್ರಕಲೆಯತ್ತ ನುಗ್ಗುತ್ತಿದೆ. ಹೊಸ ಹೊಸ ವಿನ್ಯಾಸಗಳಲ್ಲಿ ಹ್ಯಾಂಡ್‌ಮೇಡ್‌ ಆಭರಣಗಳನ್ನು ರೂಪಿಸಲು ಹಾತೊರೆಯುತ್ತದೆ.

ಚಂದದ ಕಿವಿಯೋಲೆ, ಬಣ್ಣಬಣ್ಣದ ಮಣಿಗಳ ಸುಂದರ ಹಾರ, ಕುಂಚದ ಸರಾಗ ನಡಿಗೆಯಲ್ಲಿ ಒಡಮೂಡಿದ ಬಗೆಬಗೆ ಕಲಾಕೃತಿಗಳು, ಹೀಗೆ ಅವರ ಸೃಜನಶೀಲತೆಯ ಬಳ್ಳಿ ಹಲವು ಕವಲುಗಳಲ್ಲಿ ಚಿಗುರೊಡೆದಿವೆ.

ವೈಭವಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಿಂದಲೇ ಅಂದರೆ ನಾಲ್ಕೈದು ವರ್ಷದವರಾಗಿದ್ದಾಗಲೇ ಅವರಿಗೆ ಸಂಗೀತ, ನೃತ್ಯ, ಚಿತ್ರಕಲೆ ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿ ಮೂಡಿತ್ತು.

ಮಗಳ ಆಸಕ್ತಿಯನ್ನು ಎಳವೆಯಲ್ಲಿಯೇ ಗುರುತಿಸಿದ ಅವರ ತಾಯಿ ಪ್ರೋತ್ಸಾಹಿಸಿದರು. ಚಿತ್ರಕಲೆಯ ತರಗತಿಗೂ ಸೇರಿಸಿದರು. ಒಂಬತ್ತನೇ ವರ್ಷದವರೆಗೂ ಚಿತ್ರಕಲೆಯನ್ನು ತರಗತಿಯಲ್ಲಿ ಕಲಿತ ವೈಭವಿ ಅವರಿಗೆ ನಂತರ ಶಾಲೆಯ ವೇಳಾಪಟ್ಟಿಯ ಕಾರಣದಿಂದ ಅದನ್ನು ಮುಂದುವರಿಸಲಾಗಲಿಲ್ಲ. ಆದರೆ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಕುಂಚದ ಬೇರುಗಳು ಅವರನ್ನು ಸುಮ್ಮನಿರಗೊಡಲಿಲ್ಲ.

ತರಗತಿಗೆ ಹೋಗಲು ಸಾಧ್ಯವಾಗದಿದ್ದರೂ ಮನೆಯಲ್ಲಿಯೇ ಕ್ಯಾನ್‌ವಾಸ್‌ ಮೇಲೆ ಮನಸ್ಸಿನ ಭಾವನೆಗಳಿಗೆ ಕಲಾರೂಪ ನೀಡುವುದನ್ನು ಮುಂದುವರಿಸಿದರು. 12ನೇ ವಯಸ್ಸಿಗೆ ಪದ್ಮಿನಿ ಪ್ರಸನ್ನ ಅವರ ಬಳಿ ಪೇಂಟಿಂಗ್‌ ತರಬೇತಿಗೆ ಸೇರಿಕೊಂಡರು.

‘ಇಂದಿಗೂ ಅವರೇ ನನ್ನ ಗುರು’ ಎನ್ನುತ್ತಾರೆ ವೈಭವಿ. ಇಷ್ಟು ದಿನ ಈ ಹವ್ಯಾಸಗಳನ್ನು ತಮ್ಮ ಸಂತೋಷಕ್ಕಾಗಿಯಷ್ಟೇ ಮಾಡುತ್ತಿದ್ದ ವೈಭವಿ ತಮ್ಮ ಸ್ನಾತಕೋತ್ತರ ಪದವಿ ಮುಗಿದು ವೃತ್ತಿ ಜೀವನ ಆರಂಭಿಸಿದ ನಂತರ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.

‘ನಾನು ಮಾಡಿದ ಪೇಂಟಿಂಗ್‌ಗಳನ್ನು ತೂಗಿಹಾಕಲು ಮನೆಯ ಗೋಡೆಯ ಮೇಲೆ ಜಾಗವೇ ಇಲ್ಲದಂತಾಯ್ತು. ಆಗ ನನಗೆ ಇನ್ನೊಂದು ಆಲೋಚನೆ ಮನದಲ್ಲಿ ಮೂಡಿತು. ನನ್ನ ಈ ಕಲಾಕೃತಿಗಳನ್ನು ಆಸಕ್ತರಿಗೆ ತಲುಪುವಂತೇ ಮಾಡಬೇಕು ಎಂದುಕೊಂಡು ಒಂದು ಫೇಸ್‌ಬುಕ್‌ ಪುಟ ಆರಂಭಿಸಿದೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಹೀಗೆ ಎರಡು ವರ್ಷಗಳ ಹಿಂದೆ ಆರಂಭವಾದದ್ದು ‘ಚಿತ್ಕಲಾ ಬೆಂಗಳೂರು’ ಎಂಬ ಫೇಸ್‌ಬುಕ್‌ ಪುಟ. ವೈಭವಿ ಈ ಪುಟದಲ್ಲಿ ತಾವು ರೂಪಿಸಿದ ಕಲಾಕೃತಿಗಳು, ಹ್ಯಾಂಡ್‌ಮೇಡ್‌ ಆಭರಣಗಳ ಚಿತ್ರಗಳನ್ನು ಹಾಕುತ್ತಾರೆ.

ಹಾಗೆಯೇ ಅಮೂರ್ತ, ಜಲವರ್ಣ, ತಂಜಾವೂರ್‌ ಹೀಗೆ ವಿವಿಧ ಮಾಧ್ಯಮಗಳಲ್ಲಿ ಅವರು ರಚಿಸಿದ ಕಲಾಕೃತಿಗಳೂ ಸಿಗುತ್ತವೆ. ಅವರ ಈ ಪ್ರಯತ್ನಕ್ಕೆ ಸಾಕಷ್ಟು ಒಳ್ಳೆಯ ಪ್ರತಿಸ್ಪಂದನೆ ದೊರಕಿರುವುದು ಅವರ ಉತ್ಸಾಹವನ್ನು ಹೆಚ್ಚಿಸಿದೆ.

ವೃತ್ತಿ ಜೀವನದ ಮಧ್ಯವೂ ಹವ್ಯಾಸವನ್ನು ಉಳಿಸಿಕೊಳ್ಳುವುದು ಅವರಿಗೆ ಆಂತರಿಕ ಅಗತ್ಯವೂ ಹೌದು. ಆದ್ದರಿಂದಲೇ ವೃತ್ತಿ ಮತ್ತು ಹವ್ಯಾಸ ಎರಡರ ನಡುವೆ ಸಮತೋಲನ ಕಾಪಾಡಿಕೊಳ್ಳುತ್ತಿದ್ದಾರೆ.

‘ಪೂರ್ಣ ಪ್ರಮಾಣದ ಹವ್ಯಾಸದಲ್ಲಿಯೇ ತೊಡಗಿಕೊಳ್ಳಲೂ ನನಗೆ ಸಾಧ್ಯವಿಲ್ಲ. ಹಾಗೆಂದು ಬರೀ ವೃತ್ತಿ ಜೀವನವನ್ನೇ ನೆಚ್ಚಿಕೊಂಡು ಬದುಕಲೂ ಮನಸ್ಸು ಒಪ್ಪುವುದಿಲ್ಲ. ಅವೆರಡೂ ನನಗೆ ಬೇಕು. ಆದ್ದರಿಂದ ಕಷ್ಟವಾದರೂ ವೃತ್ತಿ ಮತ್ತು ಹವ್ಯಾಸ ಎರಡಕ್ಕೂ ಸಮಾನ ಪ್ರಾಧಾನ್ಯತೆ ನೀಡಿಕೊಂಡು ಹೋಗುತ್ತಿದ್ದೇನೆ’ ಎನ್ನುತ್ತಾರೆ ವೈಭವಿ.

ವೃತ್ತಿಬದುಕಿನ ಒತ್ತಡದ ನಡುವೆ ಹ್ಯಾಂಡ್‌ಮೇಡ್‌ ಆಭರಣಗಳಿಗೆ ಬರುವ ಬೇಡಿಕೆಯನ್ನು ನಿಗದಿತ ಸಮಯದ ಒಳಗೆ ಪೂರೈಸುವುದು ಕಷ್ಟವಾಗುತ್ತದೆ. ಆಗೆಲ್ಲ ನನ್ನ ಮನೆಯವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮನೆಯವರ ಸಹಕಾರ ಇಲ್ಲದಿದ್ದರೆ ಇವ್ಯಾವುದೂ ಸಾಧ್ಯ ವಾಗುತ್ತಿರಲಿಲ್ಲ’ ಎಂದು ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ವೈಭವಿ ಅವರಿಗೆ ಮುಂದೆ ವೆಬ್‌ಸೈಟ್‌ ಒಂದನ್ನು ಆರಂಭಿಸಿ ಇನ್ನಷ್ಟು ವೃತ್ತಿಪರವಾಗಿ ಹ್ಯಾಂಡ್‌ಮೇಡ್‌ ಆಭರಣಗಳನ್ನು ಜನರಿಗೆ ತಲುಪಿಸುವ ಇಂಗಿತವೂ ಇದೆ.

‘ಸದ್ಯಕ್ಕೆ ವೈದ್ಯ ವೃತ್ತಿಯಲ್ಲಿನ ಕೆಲವು ಒತ್ತಡಗಳಿಂದ ಹವ್ಯಾಸಕ್ಕೆ ಹೆಚ್ಚು ಸಮಯ ನೀಡುವುದು ಸಾಧ್ಯವಾಗುತ್ತಿಲ್ಲ. ವೃತ್ತಿಯಲ್ಲಿ ಒಂದು ಹಂತ ತಲುಪಿದ ಕೂಡಲೇ ಹವ್ಯಾಸದಲ್ಲಿ ಇನ್ನಷ್ಟು ಗಾಢವಾಗಿ ತೊಡಗಿಕೊಳ್ಳುತ್ತೇನೆ’ ಎಂದು ಅವರು ವಿಶ್ವಾಸದಿಂದ ನುಡಿಯುತ್ತಾರೆ.

ವೈಭವಿ ಅವರ ಫೇಸ್‌ಬುಕ್ ಪುಟ ‘ಚಿತ್ಕಲಾ ಬೆಂಗಳೂರು’ ಕೊಂಡಿ: facebook.com/chitkalabengaluru

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT