ADVERTISEMENT

ಸಮಯ ಸಿಕ್ಕರೆ ಊಟ!

ವೈದ್ಯರ ದಿನ

ಪ್ರಜಾವಾಣಿ ವಿಶೇಷ
Published 29 ಜೂನ್ 2018, 14:47 IST
Last Updated 29 ಜೂನ್ 2018, 14:47 IST
ಪತ್ನಿ ಮಕ್ಕಳ ಜತೆ ಡಾ.ಸೋಮೇಶ್ ಮಿತ್ತಲ್
ಪತ್ನಿ ಮಕ್ಕಳ ಜತೆ ಡಾ.ಸೋಮೇಶ್ ಮಿತ್ತಲ್   

ಮೊದಲು ವೃತ್ತಿ ನಂತರ ಕುಟುಂಬ!

ನಾನು ನಾರಾಯಣ ಹೆಲ್ತ್‌ ಸಿಟಿಯಲ್ಲಿ ತುರ್ತು ವಿಭಾಗದಲ್ಲಿ ಫಿಸಿಷಿಯನ್ ಆಗಿದ್ದೇನೆ. ದಿನಕ್ಕೆ 70ರಿಂದ 80 ರೋಗಿಗಳು ಬರ್ತಾರೆ. ಹೃದಯ ಸಂಬಂಧಿ ಕಾಯಿಲೆ, ಹೊಟ್ಟೆನೋವು, ಕೆಮ್ಮು, ಅಪಘಾತ ಹೀಗೆ ಅನೇಕ ರೀತಿಯ ರೋಗಿಗಳನ್ನು ನೋಡ್ತೀನಿ. ತುರ್ತುಚಿಕಿತ್ಸಾ ವಿಭಾಗದಲ್ಲಿರುವುದರಿಂದ ಸಹಜವಾಗಿಯೇ ಒತ್ತಡವಿರುತ್ತದೆ.

ಆದರೆ, ನನ್ನ 20 ವರ್ಷಗಳ ಅನುಭವ ವೃತ್ತಿಯಲ್ಲಿ ನನ್ನ ಕೈಹಿಡಿದಿದೆ. ರೋಗಿ ಮತ್ತು ಅವರ ಸಂಬಂಧಿಕರು ನೋವಿನಿಂದ ಇರ್ತಾರೆ. ಆಗ ನಾನು ತಾಳ್ಮೆಯಿಂದ ನೋಡಿಕೊಳ್ಳಬೇಕಾಗುತ್ತದೆ. ರೋಗಿಯ ಚಿಕಿತ್ಸೆಯ ಜತೆಜತೆಗೇ ಅವರನ್ನು ನೋಡಿಕೊಳ್ಳುವವರಿಗೆ ಕಾಯಿಲೆ ಕುರಿತು ಸರಳವಾಗಿ ಅರ್ಥೈಸಬೇಕು.

ADVERTISEMENT

ನನ್ನ ಹೆಂಡತಿಯೂ ಇದೇ ಆಸ್ಪತ್ರೆಯಲ್ಲಿ ಪೆಥಾಲಜಿಸ್ಟ್ ಆಗಿದ್ದಾರೆ. ದ್ವಿತೀಯ ಪಿಯು ಓದುತ್ತಿರುವ ಮಗಳಿದ್ದಾಳೆ. ಆಸ್ಪತ್ರೆಯ ಕೆಲಸದ ನಂತರ ಅವಳ ಕಡೆಗೆ ಗಮನ ಕೊಡುತ್ತೇನೆ. ಮಗಳು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದರಿಂದ ವೃತ್ತಿಯಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಮನೆಯಲ್ಲಿ ಬೆಳಿಗ್ಗೆ ತಿಂಡಿ ತಯಾರಿಸಲು ಹೆಂಡತಿಗೆ ಸಹಾಯ ಮಾಡಿ, ಮಗಳನ್ನು ಟ್ಯೂಷನ್‌ಗೆ ಬಿಟ್ಟು ಬರ್ತೀನಿ. ನಂತರ ಸ್ವಲ್ಪ ವಾಕಿಂಗ್ ಮಾಡಿ, ಆಸ್ಪತ್ರೆಗೆ ತಯಾರಾಗುತ್ತೇನೆ.

ಆಸ್ಪತ್ರೆಗೆ ಬಂದ್ಮೇಲೆ ಪೂರ್ತಿ ಗಮನ ರೋಗಿಗಳ ಕಡೆಗೆ ಇರುತ್ತದೆ.
ಊಟದ ಸಮಯ ಮೀರಿಯೂ ಕೆಲವು ಬಾರಿ ಕೆಲಸ ಮಾಡಬೇಕಾಗುತ್ತದೆ. ವಾರದಲ್ಲಿ ಎರಡ್ಮೂರು ದಿನ
ಮಧ್ಯಾಹ್ನದ ಊಟ ಮಾಡಲಾಗದು. ಸಮಯ ಸಿಕ್ಕಾಗ ಏನಾದರೂ ತಿನ್ತೀನಿ. ಇದುವರೆಗೂ ಆರೋಗ್ಯದ ಮೇಲೆ ಪರಿಣಾಮವಾಗಿಲ್ಲ.

–ಡಾ.ಶ್ರೀನಾಥ್ ಕುಮಾರ್ ಟಿ.ಎಸ್., ಹಿರಿಯ ಸಲಹೆಗಾರ, ತುರ್ತು ಚಿಕಿತ್ಸಾ ವಿಭಾಗ, ನಾರಾಯಣ ಹೆಲ್ತ್‌ ಸಿಟಿ

**

ನಿರ್ಧಾರದ ಜೊತೆ ಸಮಾಧಾನ

ನಾನು ವೃತ್ತಿಯಲ್ಲಿ ವೈದ್ಯೆ. ಇತರ ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸವಾಲುಗಳು ನನಗೂ ಎದುರಾಗಿವೆ. ಮಗಳು ಹುಟ್ಟಿದ ನಂತರ ನಾನು ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗಿದ್ದು ಗಂಡ ಮತ್ತು ಅತ್ತೆ–ಮಾವನವರ ಸಹಕಾರದಿಂದ. ಬೆಳಿಗ್ಗೆ 6 ಗಂಟೆಗೆ ನನ್ನ ದಿನಚರಿ ಆರಂಭ. ಅತ್ತೆ ಇರುವುದರಿಂದ ಮನೆಯ ಜವಾಬ್ದಾರಿ ಅಷ್ಟಾಗಿ ನನ್ನ ಹೆಗಲೇರಿಲ್ಲ.

ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ಬೆಳಗಿನ ತಿಂಡಿಗೆ ರೆಡಿ ಮಾಡಿ, ಮಗಳನ್ನು ಶಾಲೆಗೆ ತಯಾರು ಮಾಡಿ ಕಳುಹಿಸುವಷ್ಟರಲ್ಲಿ ಎಂಟು ಗಂಟೆಯಾಗುತ್ತದೆ. ನಂತರ ನಾನು ತಿಂಡಿ ತಿಂದು ರೆಡಿ ಆಗಿ ಸರಿಯಾಗಿ 9 ಗಂಟೆಗೆ ಆಸ್ಪತ್ರೆ ತಲುಪುತ್ತೇನೆ.

ನಾನು ತುರ್ತು ಚಿಕಿತ್ಸಾ ಘಟಕದ ಸಲಹೆಗಾರ್ತಿ. ನಿತ್ಯವೂ ರೋಗಿಗಳನ್ನು ತಪಾಸಣೆ ಮಾಡುವುದು, ಕಿರಿಯ ವೈದ್ಯರಿಗೆ ಚಿಕಿತ್ಸೆಯ ಬಗ್ಗೆ ಮಾರ್ಗದರ್ಶನ ಮಾಡುವುದು ಇದ್ದೇ ಇರುತ್ತದೆ. ಈ ವಿಭಾಗದಲ್ಲಿ ಅಪಘಾತ, ಆತ್ಮಹತ್ಯೆ ಯತ್ನ ಹೀಗೆ ಅನೇಕ ಬಗೆಯ ವಿಭಿನ್ನ ಬಗೆಯ ರೋಗಿಗಳು ಬರುತ್ತಿರುತ್ತಾರೆ.

ರೋಗಿಗಳ ಗಂಭೀರ ಸ್ಥಿತಿಯ ನಡುವೆ ಸೂಕ್ತ ನಿರ್ಧಾರ ಕೈಗೊಂಡು ಸಂಬಂಧಿಕರನ್ನು ಸಮಾಧಾನ ಪಡಿಸುವ ಕೆಲಸವೂ ಆಗಬೇಕಿರುತ್ತದೆ.ಇದು ನಿಜಕ್ಕೂ ಸವಾಲು. ಆದರೆ, ನಾನು ತುರ್ತು ಚಿಕಿತ್ಸಾ ವಿಭಾಗವನ್ನು ಇಷ್ಟಪಟ್ಟೇ ಆರಿಸಿಕೊಂಡಿದ್ದೀನಿ.

ನನಗೆ ಮೂರುವರೆ ವರ್ಷದ ಮಗಳಿದ್ದಾರೆ. ಪತಿ ಕೂಡಾ ವೈದ್ಯರು. ಅವರು ರೇಡಿಯೊಲಾಜಿಸ್ಟ್. ನನ್ನಂತೆ ಅವರಿಗೆ ಕ್ಲಿನಿಕಲ್ ಒತ್ತಡ ಹೆಚ್ಚಿರುವುದಿಲ್ಲ. ಆದರೆ, ವೃತ್ತಿ ಸಂಬಂಧಿತ ಇತರ ಒತ್ತಡಗಳಂತೂ ಇದ್ದೇ ಇರುತ್ತವೆ.

ನಮ್ಮನೆಯ ಹತ್ತಿರವೇ ನಮ್ಮಪ್ಪ–ಅಮ್ಮನ ಮನೆಯೂ ಇರುವುದರಿಂದ ಮಗಳು ಅಜ್ಜ–ಅಜ್ಜಿಯರ ಪ್ರೀತಿಯಲ್ಲಿ ಸುಖವಾಗಿ ಬೆಳೆಯುತ್ತಿದ್ದಾಳೆ. ಮಗಳು ದೊಡ್ಡವಳಾದ್ಮೇಲೆ ನನ್ನ ಅಗತ್ಯ ಹೆಚ್ಚಿದೆ ಅಂತ ಮನವರಿಕೆಯಾದಾಗ ಕೆಲಕಾಲ ವೈದ್ಯವೃತ್ತಿಯಿಂದ ಬಿಡುವು ಪಡೆಯುವ ಆಲೋಚನೆ ಇದೆ. ಆದರೆ, ಮತ್ತೆ ವೃತ್ತಿಗೆ ಮರಳುವುದಂತೂ ಗ್ಯಾರಂಟಿ.

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮನೆಗೆ ತಲುಪುವ ಹೊತ್ತಿನ ತನಕ ಗಡಿಯಾರದ ಮುಳ್ಳುಗಳೇ ನನ್ನ ದಿನಚರಿಯನ್ನು ನಿಯಂತ್ರಿಸುತ್ತದೆ. ಮಧ್ಯಾಹ್ನ 3ರಿಂದ 4ಗಂಟೆ ಹೊತ್ತಿಗೆ ಊಟ ಮಾಡುವೆ. ಆದರೆ, ಕೆಲವೊಮ್ಮೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಊಟ ಮಾಡಲಾಗದು. ಮತ್ತೆ ಕೆಲ ಬಾರಿ ಮಧ್ಯಾಹ್ನದ ಊಟವನ್ನು ಸಂಜೆ 5.30ಗೆ ಮಾಡಿದ್ದೂ ಇದೆ.

ಆಸ್ಪತ್ರೆಯಲ್ಲಿ ಲಿಫ್ಟ್ ಬದಲು ಮೆಟ್ಟಿಲು ಹತ್ತಿ ಇಳಿಯುತ್ತೇನೆ ಅದೇ ನನ್ನ ವ್ಯಾಯಾಮ. ಮನಸು ದಣಿದಾಗ ಸಂಗೀತ ಕೇಳ್ತೀನಿ. ಇಲ್ಲವೇ ಮಗಳೊಂದಿಗೆ ಹಾಡಿ, ಕುಣಿಯುತ್ತೇನೆ.

–ಡಾ.ಹರ್ಷಿತಾ ಶ್ರೀಧರ್, ಸಲಹೆಗಾರ್ತಿ ಮತ್ತು ಮೇಲ್ವಿಚಾರಕಿ, ತುರ್ತು ಚಿಕಿತ್ಸಾ ವಿಭಾಗ, ವಿಕ್ರಮ್ ಆಸ್ಪತ್ರೆ

**

ಹೊಂದಾಣಿಕೆಯೇ ಬದುಕು

ನಾನು ವಿಕ್ರಮ್ ಆಸ್ಪತ್ರೆಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಬೆಳಿಗ್ಗೆ 6 ಗಂಟೆಗೆ ಏಳ್ತೀನಿ. ವ್ಯಾಯಾಮ ಮುಗಿಸಿ, ಸ್ವಲ್ಪ ತಿಂಡಿ ತಿಂದು ಬೆಳಿಗ್ಗೆ 9ಕ್ಕೆ ಆಸ್ಪತ್ರೆಯಲ್ಲಿರ್ತೀನಿ. 9.30ರಿಂದ 10ರ ತನಕ ವೈದ್ಯರ ಜತೆ ಸಭೆ ಇರುತ್ತದೆ.

10ರಿಂದ 12 ಗಂಟೆ ತನಕ ಆಸ್ಪತ್ರೆಯಲ್ಲಿ ರೌಂಡ್ಸ್ ಹೋಗ್ತೀನಿ. ನಂತರ ಛೇಂಬರ್‌ಗೆ ಬರ್ತೀನಿ ಅಲ್ಲಿ 12ರಿಂದ 2 ಗಂಟೆ ತನಕ ವೈದ್ಯರ ಭೇಟಿ, ಅವರ ಸಮಸ್ಯೆ ಕೇಳ್ತೀನಿ. ಮಧ್ಯಾಹ್ನ ಸಮಯ ಸಿಕ್ಕರೆ ಊಟ ಮಾಡ್ತೀನಿ. ಇಲ್ಲದಿದ್ದರೆ ಬರೀ ಜ್ಯೂಸ್ ಕುಡಿಯುವೆ. ರಾತ್ರಿ ಮಾತ್ರ ಸರಿಯಾಗಿ ಊಟ ಮಾಡ್ತೀನಿ. ಹೆಚ್ಚು ಕಮ್ಮಿ ಎಲ್ಲಾ ವೈದ್ಯರಿಗೂ ಮಧ್ಯಾಹ್ನದ ಊಟ ಸರಿಯಾಗಿ ಆಗೋದಿಲ್ಲ.

ನಮ್ಮ ವೃತ್ತಿಯಲ್ಲಿ ಬಹುತೇಕ ವೈದ್ಯರಿಗೆ ಸಂವಹನ ಕಲೆಯ ಕೊರತೆ ಇದೆ. ಅವರಿಗೆ ಕೆಲಸ ಮಾಡಿ ಮಾತ್ರ ಗೊತ್ತು. ನಮ್ಮ ವೃತ್ತಿಯಲ್ಲಿ ಓದು ಮುಗಿದು ವೃತ್ತಿಯಲ್ಲಿ ನೆಲೆ ಕಳೆದುಕೊಳ್ಳುವ ಹೊತ್ತಿಗೆ 32 ವರ್ಷವಾಗುತ್ತೆ. ಹಾಗಾಗಿ, ಮದುವೆಯೂ ತಡ.

ನನ್ನ ಹೆಂಡತಿ ವಕೀಲರು. ಮೂವರು ಮಕ್ಕಳಿದ್ದಾರೆ. ನಮ್ಮದು ಕೂಡುಕುಟುಂಬವಾದ್ದರಿಂದ ಮಕ್ಕಳನ್ನು ಬೆಳೆಸುವ ಕುರಿತು ಅಷ್ಟಾಗಿ ಸಮಸ್ಯೆ ಇಲ್ಲ. ಇಬ್ಬರೂ ವಾರಾಂತ್ಯ ಇಲ್ಲವೇ ಬಿಡುವಿನ ವೇಳೆಯಲ್ಲಿ ಮಕ್ಕಳ ಜತೆಗೆ ಕಾಲ ಕಳೆಯಲು ಆದ್ಯತೆ ನೀಡುತ್ತೇವೆ. ಮಕ್ಕಳ ಶಾಲೆಗೆ ಹೋಗಲಾಗದು. ಪೋಷಕರ ಸಭೆಗೂ ಕೆಲವೊಮ್ಮೆ ಹೋಗಲಾಗದು.

ಮೂರು ಅಥವಾ ಆರು ತಿಂಗಳಿಗೊಮ್ಮೆ ಒಂದು ವಾರ ರಜೆ ಹಾಕಿ ಕುಟುಂಬದ ಜತೆಗೆ ಪ್ರವಾಸಕ್ಕೆ ಹೋಗ್ತೀನಿ. ನಮ್ಮ ವೃತ್ತಿಯಲ್ಲಿ ಬಹುತೇಕರು ವೈದ್ಯರನ್ನೇ ಮದುವೆಯಾಗುತ್ತಾರೆ. ಒಟ್ಟಾರೆ ಹೊಂದಾಣಿಕೆಯಿಂದ ಇದ್ದರೆ ಮಾತ್ರ ನಮ್ಮ ಬದುಕು ಸುಂದರ.

–ಡಾ.ಸೋಮೇಶ್ ಮಿತ್ತಲ್, ಸಿಇಒ, ವಿಕ್ರಮ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.