ADVERTISEMENT

ಅಕ್ಷಯ್‌ ಸಂಸ್ಕಾರದಲ್ಲಿ ರಾಹುಲ್,ಕೇಜ್ರಿ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 12:46 IST
Last Updated 5 ಜುಲೈ 2015, 12:46 IST

ನವದೆಹಲಿ (ಪಿಟಿಐ/ಐಎಎನ್ಎಸ್): ನಿಗೂಢವಾಗಿ ಶನಿವಾರ ಸಾವನ್ನಪ್ಪಿದ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ನೇಮಕಾತಿ ಹಗರಣದ ತನಿಖಾ ವರದಿಗಾರ ಅಕ್ಷಯ್ ಸಿಂಗ್‌ ಅವರ ಅಂತ್ಯ ಸಂಸ್ಕಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಾಲ್ಗೊಂಡಿದ್ದರು.

ಅಕ್ಷಯ್ ಸಿಂಗ್ ಅವರ ಅಂತ್ಯ ಸಂಸ್ಕಾರವು ಪೂರ್ವ ದೆಹಲಿಯ ನಿಗಮಬೋದಲ್ಲಿ ಭಾನುವಾರ ನೆರವೇರಿತು. ರಾಹುಲ್ ಅವರಲ್ಲದೇ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಮಾಕನ್‌ ಹಾಗೂ ಕಾಂಗ್ರೆಸ್‌ ಮುಖಂಡರಾದ ದಿಗ್ವಿಜಯ್ ಸಿಂಗ್, ರಣದೀಪ್‌ ಸುರ್ಜೇವಾಲಾ ಅವರೂ ಅಂತ್ಯ ಸಂಸ್ಕಾರ ಭಾಗವಹಿಸಿದ್ದರು.

ಅಕ್ಷಯ್ ಸಿಂಗ್ ಅವರು ವ್ಯಾಪಂ ಹಗರಣದಲ್ಲಿ ಹೆಸರು ಕೇಳಿಬಂದ ಬಳಿಕ ಸಾವನ್ನಪ್ಪಿದ ಯುವತಿಯ ಪೋಷಕರ ಸಂದರ್ಶನ ನಡೆಸಿದ ಬಳಿಕ ಸಾವನ್ನಪ್ಪಿದ್ದರು.

ADVERTISEMENT

ಮತ್ತೊಬ್ಬರು ಸಾವು: ಅಕ್ಷಯ್ ಸಿಂಗ್ ಅವರ ಬೆನ್ನಲ್ಲೆ, ಜಬಲ್‌ಪುರದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ವೈದ್ಯಕೀಯ ಕಾಲೇಜಿನ ಡೀನ್‌ ಆಗಿದ್ದ ಅರುಣ್‌ ಶರ್ಮಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ವ್ಯಾಪಂ ಹಗರಣ ಸಂಬಂಧ ಮೃತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಅವರು ನೈರುತ್ಯ ದೆಹಲಿಯ ದ್ವಾರಾಕಾದಲ್ಲಿ ಹೋಟೆಲ್‌ ಒಂದರಲ್ಲಿ ಶವವಾಗಿ ಶನಿವಾರ ಪತ್ತೆಯಾಗಿದ್ದಾರೆ. ಶರ್ಮಾ ಅವರು ಹಗರಣದಲ್ಲಿ ನಕಲಿ ಅಭ್ಯರ್ಥಿಗಳನ್ನು ಬಗ್ಗೆ ತನಿಖೆ ನಡೆಸುತ್ತಿದ್ದರು ಎನ್ನಲಾಗಿದೆ.

ಸಿಬಿಐ ತನಿಖೆ ಶಿಫಾರಸು ಮಾಡಲ್ಲ: ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸ್ಪಷ್ಟಪಡಿಸಿದ್ದಾರೆ.

‘ನನ್ನ ಸರ್ಕಾರ ನ್ಯಾಯಾಂಗಕ್ಕಿಂತ ದೊಡ್ಡದಲ್ಲ. ಹೈಕೋರ್ಟ್‌ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಲು ನಿರಾಕರಿಸಿರುವಾಗ ನಾವು ಹೇಗೆ ಆದೇಶಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.

ವ್ಯಾಪಂ ಹಗರಣವನ್ನು ವಿಶೇಷ ತನಿಖಾ ತಂಡವು ತನಿಖೆ ಮಾಡುತ್ತಿದೆ. ಮಧ್ಯಪ್ರದೇಶ ಹೈಕೋರ್ಟ್ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ.

‘ಪ್ರಕರಣವನ್ನು ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸಲು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ಮುಂದಾದಲ್ಲಿ ಅದಕ್ಕೆ ನಮಗೇನೂ ಅಭ್ಯಂತರವಿಲ್ಲ’ ಎಂದಿದ್ದಾರೆ.

ಹೆಪ್ಪುಗಟ್ಟುತ್ತಿದೆ ಶಂಕೆ: ಪ್ರಕರಣದಲ್ಲಿ ಸರಣಿ ಸಾವಿನ ಜತೆಗೆ ಅಕ್ಷಯ್ ಅವರ ನಿಗೂಢ ಸಾವಿನ ಬಗ್ಗೆಯೂ ವ್ಯಾಪಕ ಸಂದೇಹಗಳು ವ್ಯಕ್ತವಾಗಿವೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಕೂಡ ಪ್ರಕರಣ ಸಂಬಂಧ ‘ಪಾರದರ್ಶಕ ತನಿಖೆಯ ನಡೆಸಬೇಕು’ ಎಂದಿದ್ದಾರೆ.

ಏನಿದು ಘಟನೆ?: 38 ವರ್ಷ ಅಕ್ಷಯ್ ಸಿಂಗ್ ಅವರು ಶುಕ್ರವಾರ 2012ರಲ್ಲಿ ಮೃತಪಟ್ಟ ನಮೃತಾ ದಾಮೋರ್ ಅವರ ಪೋಷಕರ ಸಂದರ್ಶನ ನಡೆಸಿದರು. ಇದಾದ ಕೆಲವು ನಿಮಿಷಗಳಲ್ಲಿ ಅಕ್ಷಯ್ ಸಿಂಗ್ ಅವರ ಬಾಯಿಂದ ನೊರೆ ಬಂದಿತ್ತು. ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ, ಅಲ್ಲಿಂದ ಮಧ್ಯಪ್ರದೇಶದ ಝಬುವಾದಲ್ಲಿರುವ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಅವರ ಚೇತರಿಸಿಕೊಳ್ಳಲಿಲ್ಲ. ಬಳಿಕ ಅವರನ್ನು ಗುಜರಾತಿನ ದಾಹೋದ್‌ ಸಮೀಪದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.