ADVERTISEMENT

ಅತ್ಯಾಚಾರಿಗಳಿಗೆ ಗಲ್ಲು

ಮುಂಬೈ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಬರ್ಬರ ಕೃತ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 20:10 IST
Last Updated 4 ಏಪ್ರಿಲ್ 2014, 20:10 IST

ಮುಂಬೈ(ಪಿಟಿಐ): ಇಲ್ಲಿಯ ಶಕ್ತಿ ಮಿಲ್‌ ಆವರಣದಲ್ಲಿ ಇಬ್ಬರು ಯುವತಿ­ಯರ ಮೇಲೆ ನಡೆದ ಪ್ರತ್ಯೇಕ ಸಾಮೂಹಿಕ ಅತ್ಯಾಚಾರ ಪ್ರಕರಣ­ಗಳಲ್ಲಿ ಮೂವರು ಅಪರಾಧಿ­ಗಳಿಗೆ ಸೆಷನ್ಸ್‌ ಕೋರ್ಟ್‌ ಶುಕ್ರವಾರ ಗಲ್ಲುಶಿಕ್ಷೆ ವಿಧಿಸಿದೆ.

ಅಪರಾಧ ಪುನರಾವರ್ತನೆಗೆ ಸಂಬಂಧಿಸಿ ರೂಪಿಸ­ಲಾದ ಹೊಸ ಕಾನೂನಿನ ಅಡಿಯಲ್ಲಿ ಶಿಕ್ಷೆ­ ವಿಧಿಸಿದ ಮೊಟ್ಟ ಮೊದಲ ಪ್ರಕರಣ ಇದಾಗಿದೆ. ಟೆಲಿಪೋನ್‌ ಆಪರೇಟರ್‌ ಹಾಗೂ ಪತ್ರಿಕಾ ಛಾಯಾ­ಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಮುಂಬೈ ನಗರವನ್ನು ಬೆಚ್ಚಿ ಬೀಳಿಸಿದ್ದವು.

ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಸಿರಾಜ್‌ ರೆಹಮಾನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ವಿಜಯ್‌ ಜಾಧವ್‌, ಖಾಸಿಂ ಬೆಂಗಾಲಿ ಮತ್ತು ಸಲೀಂ ಅನ್ಸಾರಿಗೆ ಭಾರತೀಯ ದಂಡಸಂಹಿತೆ 376(ಇ)­ಕಲಂ ಅನ್ವಯ ಮರಣದಂಡನೆ ವಿಧಿಸಿದ ಪ್ರಧಾನ ಸೆಷನ್ಸ್‌ ನ್ಯಾಯಾಧೀಶೆ ಶಾಲಿನಿ ಫನ್‌ಸಾಲ್ಕ­ರ್‌ ಜೋಶಿ, ‘ಅಪರಾಧಿಗಳು ತಪ್ಪು ತಿದ್ದಿಕೊಳ್ಳುವ ಯಾವುದೇ ಲಕ್ಷಣ­ಗಳಿಲ್ಲ’ ಎಂದು ಹೇಳಿದರು.

ಈ ಮೂವರು ಎರಡೂ ಪ್ರಕರಣ­ಗಳಲ್ಲಿ ಭಾಗಿಯಾಗಿದ್ದರು. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕ್ಕಂ ಮಂಡಿಸಿದ ವಾದವನ್ನು ಪರಿಗಣಿಸಿದ ಬಳಿಕ ಕೋರ್ಟ್‌ ತೀರ್ಪು ನೀಡಿತು. 

‘ಅತ್ಯಾಚಾರವೆಸಗಿದ ಸಂದರ್ಭವನ್ನು ಪರಿಗಣಿಸಿ ಅಪರಾಧಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆಯನ್ನು ವಿಧಿಸಬೇಕು’ ಎಂದು ಅವರು ಬಲವಾಗಿ ವಾದಿಸಿದ್ದರು.

ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಈ ಮೂವರನ್ನು ತಪ್ಪಿತಸ್ಥರೆಂದು ಸೆಷನ್ಸ್‌ ಕೋರ್ಟ್‌ ಗುರುವಾರ ಘೋಷಿಸಿತ್ತು.

ಶಕ್ತಿ­ಮಿಲ್‌ನ ನಿರ್ಜನ ಪ್ರದೇಶದಲ್ಲಿ 2013 ಜುಲೈ 18ರಂದು  18 ವರ್ಷದ ದೂರವಾಣಿ ಆಪರೇಟರ್‌ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.  ಆಗಸ್ಟ್‌ 22ರಂದು ಪತ್ರಿಕಾ ಛಾಯಾ­ಗ್ರಾಹಕಿ ಮೇಲೆ  ವಿಜಯ್‌ ಜಾಧವ್‌, ಖಾಸಿಂ ಬೆಂಗಾಲಿ, ಸಲೀಂ ಅನ್ಸಾರಿ ಮತ್ತು ಸಿರಾಜ್‌ ರೆಹಮಾನ್‌ ಬರ್ಬರ­ವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಇದರಲ್ಲಿ ಬಾಲಕ­ನೊಬ್ಬನೂ ಭಾಗಿಯಾಗಿದ್ದ.

ಸೆಷನ್ಸ್‌ ಕೋರ್ಟ್‌ನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಬಾಂಬೆ ಹೈಕೋರ್ಟ್‌ ಕಳೆದ ವಾರವೇ ನಿರಾಕ­ರಿಸಿತ್ತು. 2012ರಲ್ಲಿ ದೆಹಲಿ­ಯಲ್ಲಿ ಪ್ಯಾರಾ­ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಅಮಾ­ನವೀಯ ಸಾಮೂಹಿಕ ಅತ್ಯಾ­ಚಾರ ಪ್ರಕರಣದ ನಂತರ ಮಾಡಲಾದ ತಿದ್ದು­ಪಡಿ ಕಾಯ್ದೆಯನ್ವಯ ಶಿಕ್ಷೆ ವಿಧಿ­ಸಿದ ಮೊದಲ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.