ADVERTISEMENT

ಅಪಹೃತರ ಸುಳಿವಿಲ್ಲ

ಕುಟುಂಬ ವರ್ಗದಲ್ಲಿ ತೀವ್ರ ಆತಂಕ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 19:59 IST
Last Updated 1 ಆಗಸ್ಟ್ 2015, 19:59 IST
ಅಪಹೃತರ ಸುಳಿವಿಲ್ಲ
ಅಪಹೃತರ ಸುಳಿವಿಲ್ಲ   

ಹೈದರಾಬಾದ್‌ (ಪಿಟಿಐ): ಲಿಬಿಯಾದಲ್ಲಿ ಐಎಸ್‌ ಉಗ್ರರು ಅಪಹರಿಸಿರುವ ಹೈದರಾಬಾದ್‌ ಮತ್ತು ಶ್ರೀಕಾಕುಳಂ ಮೂಲದ  ಇಬ್ಬರು ಭಾರತೀಯ ಅಧ್ಯಾಪಕರ ಬಗ್ಗೆ ಇದುವರೆಗೂ ಯಾವುದೇ ಸುಳಿವು ದೊರೆಯದಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತಕ್ಕೆ ಹಿಂದಿರುಗುತ್ತಿದ್ದ ನಾಲ್ವರು ಭಾರತೀಯ ಪ್ರಾಧ್ಯಾಪಕರನ್ನು ಅಪಹರಿಸಿದ್ದ ಐಎಸ್‌ ಉಗ್ರರು, ಆ ಪೈಕಿ ಶುಕ್ರವಾರ ಇಬ್ಬರು ಕನ್ನಡಿಗರನ್ನು ಬಿಡುಗಡೆ ಮಾಡಿದ್ದರು.  ಇದರ ಬೆನ್ನಲ್ಲೇ ಇನ್ನಿಬ್ಬರನ್ನೂ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು.  ಆದರೆ, ಇದುವರೆಗೂ ಅವರು ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

ಉಗ್ರರ ವಶದಲ್ಲಿಯೇ ಇರುವ ಆಂಧ್ರ ಮತ್ತು ತೆಲಂಗಾಣದ ಬಲರಾಂ ಹಾಗೂ ಗೋಪಿಕೃಷ್ಣ  ಅವರ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿ ದೊರೆಯದಿರುವುದು ಅವರ ಕುಟುಂಬ ಸದಸ್ಯರನ್ನು ಚಿಂತೆಗೀಡು ಮಾಡಿದೆ.

ಉಗ್ರರು ಬಿಡುಗಡೆ ಮಾಡಿದ ಕನ್ನಡಿಗ ಪ್ರಾಧ್ಯಾಪಕರಿಂದ ಶುಕ್ರವಾರ ‘ಎಲ್ಲರೂ ಕ್ಷೇಮವಾಗಿದ್ದೇವೆ’ ಎಂಬ ಮೊಬೈಲ್‌ ಸಂದೇಶದ ಹೊರತಾಗಿ  ಬೇರಾವ ಯಾವ ಮಾಹಿತಿಯೂ ಬಂದಿಲ್ಲ ಎಂದು ಬಲರಾಂ  ಸಂಬಂಧಿ ಶ್ರೀದೇವಿ  ತಿಳಿಸಿದ್ದಾರೆ.

ಶ್ರೀಕಾಕುಳಂನ ಗೋಪಿಕೃಷ್ಣ ಅವರು 2007ರಿಂದ ಸಿರ್ತ್‌ ವಿಶ್ವವಿದ್ಯಾಲಯದ ಜುಫ್ರಾ ಅಧ್ಯಯನ ಕೇಂದ್ರದಲ್ಲಿ ಕಂಪ್ಯೂಟರ್‌ ಸೈನ್ಸ್‌ ಅಧ್ಯಾಪಕರು. ಬಲರಾಂ ಅಲ್ಲಿಯೇ 2011ರಿಂದ ಇಂಗ್ಲಿಷ್‌ ಅಧ್ಯಾಪಕರಾಗಿದ್ದಾರೆ.‌‌

ನೀವು ಹೋಗಿ, ಅವರನ್ನು ಬಿಡುತ್ತೇವೆ
‘ನಮ್ಮನ್ನು ಬಿಡುಗಡೆ ಮಾಡುವಾಗ, ಸ್ನೇಹಿತರಾದ ಗೋಪಿಕೃಷ್ಣ, ಬಲರಾಂ ಅವರನ್ನೂ ಬಿಡುಗಡೆ ಮಾಡುವಂತೆ ಕೇಳಿಕೊಂಡೆವು. ಆಗ ಉಗ್ರರ ಗುಂಪಿನ ಹಿರಿಯ ಸದಸ್ಯನೊಬ್ಬ, ಈಗ ನೀವು ಹೊರಡಿ, ಅವರನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ’ ಎಂದು ಶುಕ್ರವಾರ ಐಎಸ್‌ ಉಗ್ರರ ವಶದಿಂದ ಬಿಡುಗಡೆಯಾದ ರಾಯಚೂರಿನ ಲಕ್ಷ್ಮೀಕಾಂತ ಟ್ರಿಪೋಲಿಯಿಂದ ದೂರವಾಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಈಗ  ನಾವಿಬ್ಬರೂ ಭಾರತದ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದೇವೆ. ಸದ್ಯ ಇಲ್ಲಿಂದ ಭಾರತಕ್ಕೆ ಯಾವುದೇ ವಿಮಾನವಿಲ್ಲ. ಇನ್ನೆರಡು ದಿನಗಳಲ್ಲಿ ಭಾರತಕ್ಕೆ ವಾಪಸಾಗಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT