ADVERTISEMENT

ಅಭಿವ್ಯಕ್ತಿ ದಮನ ಸಲ್ಲದು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
'ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌’  ಸಾಕ್ಷ್ಯಚಿತ್ರ
'ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌’ ಸಾಕ್ಷ್ಯಚಿತ್ರ   

ನವದೆಹಲಿ: ಸೃಜನಶೀಲ ಅಭಿವ್ಯಕ್ತಿಯ ಮೇಲೆ ನಿರ್ಬಂಧ ಹೇರಲಾಗದು. ಸಿನಿಮಾ ನಿರ್ದೇಶಕರು ಮತ್ತು ಬರಹಗಾರರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ‘ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿರುವ ಸಾಕ್ಷ್ಯಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೀಗೆ ಹೇಳಿದೆ. ಸಾಕ್ಷ್ಯಚಿತ್ರ ಬಿಡುಗಡೆಗೆ ನಿಷೇಧ ಹೇರಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

‘ಕಾನೂನಿನ ಅನ್ವಯ ನಿಷೇಧ ಹೇರಿಲ್ಲದ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಲು ಕಲಾವಿದರಿಗೆ ಅವಕಾಶ ಇದೆ. ಚಿಂತನೆಗೆ ಹಚ್ಚುವ ಸಿನಿಮಾಗಳು ಮಡಿವಂತಿಕೆಯಿಂದ ಕೂಡಿರಬೇಕು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪವಿತ್ರವಾದುದು. ಸಾಮಾನ್ಯವಾಗಿ, ಹಕ್ಕುಗಳಲ್ಲಿ ಮಧ್ಯಪ್ರವೇಶ ಮಾಡಬಾರದು’ ಎಂದು ಪೀಠ ಹೇಳಿದೆ. ಸಿನಿಮಾ, ನಾಟಕಗಳಂತಹ ಕೃತಿಗಳ ಮೂಲಕ ತಮ್ಮ ಕೆಲಸವನ್ನು ಆನಂದಿಸುವ ಹಕ್ಕು ಎಲ್ಲ ಸೃಜನಶೀಲ ವ್ಯಕ್ತಿಗಳಿಗೂ ಇದೆ ಎಂಬುದನ್ನು ಪೀಠ ದೃಢವಾಗಿ ಹೇಳಿದೆ.

ಸಂಜಯ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಎಂಬ ಹಿಂದಿ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ದೇಶದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಸಿನಿಮಾ ಮಾಡುವುದಕ್ಕೆ ಮೊದಲು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರೆಲ್ಲರಿಂದ ಅನುಮತಿ ಪಡೆಯಬೇಕೇ ಎಂದು ಪೀಠ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ ದಿನ ಹತ್ತಾರು ಘಟನೆಗಳು ನಡೆಯುತ್ತವೆ. ಅಲ್ಲಿ ಇರುವ ಮಾಧ್ಯಮ ಪ್ರತಿನಿಧಿಗಳು ತಮ್ಮ ಗ್ರಹಿಕೆಗೆ ಅನುಗುಣವಾಗಿ ಅದನ್ನು ವರದಿ ಮಾಡುತ್ತಾರೆ. ನಾವು ಅವರ ಮೇಲೆ ನಿರ್ಬಂಧ ಹೇರುವುದಕ್ಕಾಗುತ್ತದೆಯೇ ಎಂದು ಪೀಠ ಪ್ರಶ್ನಿಸಿದೆ.

ಅರ್ಜಿದಾರರ ವಾದ:

ಸಾಕ್ಷ್ಯಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ನಚಿಕೇತ ವಾಲೇಕರ್‌ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಕೇಜ್ರಿವಾಲ್‌ ಅವರ ಮೇಲೆ ತಾವು ಮಸಿ ಚೆಲ್ಲುವ ದೃಶ್ಯ ಸಾಕ್ಷ್ಯಚಿತ್ರದಲ್ಲಿ ಇದೆ. ವಾಲೇಕರ್‌ ಅವರು 2013ರಲ್ಲಿ ಕೇಜ್ರಿವಾಲ್‌ ಮೇಲೆ ಮಸಿ ಎರಚಿದ್ದಾರೆ ಎಂದು ಆರೋಪಿಸಲಾಗಿತ್ತು. ಸಾಕ್ಷ್ಯಚಿತ್ರ ಬಿಡುಗಡೆಯಾದರೆ ಪ್ರಕರಣದ ವಿಚಾರಣೆಯ ಮೇಲೆ ಅದು ಪರಿಣಾಮ ಬೀರುತ್ತದೆ. ಹಾಗಾಗಿ ಬಿಡುಗಡೆಗೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಡುವುದಾದರೆ, ಅರ್ಜಿದಾರರನ್ನು ಗೇಲಿ ಮಾಡಲಾಗಿದೆ ಎಂಬ ಒಕ್ಕಣೆ ಸಾಕ್ಷ್ಯಚಿತ್ರದಲ್ಲಿ ಇರಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.

‘ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಪ್ರಮಾಣಪತ್ರ ನೀಡಿರುವ ಸಿನಿಮಾ ಅಥವಾ ಸಾಕ್ಷ್ಯಚಿತ್ರದ ಕೆಲವು ಭಾಗಗಳನ್ನು ಅಥವಾ ದೃಶ್ಯಗಳನ್ನು ಕತ್ತರಿಸಲು ನಾವು ಯಾರು’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಆದರೆ, ಈ ಸಾಕ್ಷ್ಯಚಿತ್ರವನ್ನು ಅರ್ಜಿದಾರರ ವಿರುದ್ಧ ಸಾಕ್ಷ್ಯವಾಗಿ ಪರಿಗಣಿಸಬಾರದು ಎಂದು ಪೀಠವು ಸೂಚಿಸಿದೆ.

‘ದೀಪಿಕಾ ಮೂಗು ಕತ್ತರಿಸುತ್ತೇವೆ’

ಪದ್ಮಾವತಿ ಸಿನಿಮಾದ ವಿರುದ್ಧದ ಪ್ರತಿಭಟನೆಯನ್ನು ರಾಜಸ್ಥಾನದ ಕರ್ನಿ ಸೇನಾ ಎಂಬ ಗುಂಪು ತೀವ್ರಗೊಳಿಸಿದೆ. ಸಿನಿಮಾ ಬಿಡುಗಡೆ ನಿಗದಿಯಾಗಿರುವ ಡಿ. 1ರಂದು ಭಾರತ ಬಂದ್‌ಗೆ ಈ ಗುಂಪು ಕರೆ ನೀಡಿದೆ. ಅಷ್ಟಲ್ಲದೆ, ಸಿನಿಮಾದಲ್ಲಿ ಪದ್ಮಾವತಿಯ ಪಾತ್ರ ಮಾಡಿರುವ ನಟಿ ದೀಪಿಕಾ ಪಡುಕೋಣೆ ಅವರ ಮೂಗು ಕತ್ತರಿಸುವುದಾಗಿ ಹೇಳಿದೆ.

‘ರಜಪೂತರು ಮಹಿಳೆಯರ ಮೇಲೆ ಕೈ ಎತ್ತುವುದಿಲ್ಲ. ಆದರೆ, ಅಗತ್ಯ ಬಿದ್ದರೆ ಶೂರ್ಪನಖಿಗೆ ಲಕ್ಷ್ಮಣ ಮಾಡಿದ್ದನ್ನು ನಾವು ದೀಪಿಕಾಗೆ ಮಾಡಲು ಹೇಸುವುದಿಲ್ಲ’ ಎಂದು ಕರ್ನಿ ಸೇನಾ ಹೇಳಿದೆ.

(ಪದ್ಮಾವತಿ ಸಿನಿಮಾ ಬಿಡುಗಡೆ ವಿರೋಧಿಸಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ಅಲಹಾಬಾದ್‌ನಲ್ಲಿ ಗುರುವಾರ ರೈಲು ತಡೆ ನಡೆಸಿದರು. –ಪಿಟಿಐ ಚಿತ್ರ)

ದನಿಗೂಡಿಸಿದ ಯೋಗಿ

ಪದ್ಮಾವತಿ ಸಿನಿಮಾ ಬಿಡುಗಡೆಗೆ ತಡೆ ನೀಡಿ ಎಂಬ ಕೂಗಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ದನಿಗೂಡಿಸಿದ್ದಾರೆ. ಸಿನಿಮಾಗಳಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಆಗಬಾರದು ಎಂದು ಯೋಗಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯುವ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಸಿನಿಮಾ ಬಿಡುಗಡೆ ಮುಂದೂಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

* ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪವಿತ್ರವಾದುದು. ಬೇಕು ಬೇಕಾದಾಗಲೆಲ್ಲ ಅದರ ಮೇಲೆ ಹಸ್ತಕ್ಷೇಪ ಸಲ್ಲದು

–ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.