ADVERTISEMENT

ಅಮೆರಿಕ ಮಧ್ಯಪ್ರವೇಶಿಸಿದರೆ ಕಾಶ್ಮೀರವು ಸಿರಿಯಾ, ಇರಾಕ್‌ನಂತಾಗುತ್ತದೆ: ಮೆಹಬೂಬ ಮುಫ್ತಿ

ಏಜೆನ್ಸೀಸ್
Published 22 ಜುಲೈ 2017, 11:31 IST
Last Updated 22 ಜುಲೈ 2017, 11:31 IST
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ   

ಶ್ರೀನಗರ: ‘ಕಾಶ್ಮೀರ ವಿವಾದದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದರೆ ಕಣಿವೆ ರಾಜ್ಯ ಸಿರಿಯಾ, ಇರಾಕ್‌ ಇಲ್ಲವೇ ಆಫ್ಘಾನಿಸ್ತಾನದಂತಾಗುತ್ತದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಮೂರನೆಯವರ ಮಧ್ಯಪ್ರವೇಶದ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಫ್ತಿ, ‘ಚೀನಾ ಮತ್ತು ಅಮೆರಿಕ ತಮ್ಮ ಕೆಲಸ ನೋಡಿಕೊಳ್ಳಲಿ. ಅವು ಮಧ್ಯ ಪ್ರವೇಶ ಮಾಡಿರುವ ದೇಶಗಳಾದ ಆಫ್ಘಾನಿಸ್ತಾನ, ಸಿರಿಯಾ ಇಲ್ಲವೇ ಇರಾಕ್‌ನ ಪರಿಸ್ಥಿತಿ ಹೇಗಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ’ ಎಂದಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆ ಮಾತ್ರ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಹಾಯವಾಗಬಲ್ಲದು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅಮೆರಿಕ ಇಲ್ಲವೇ ಚೀನಾದ ಮಧ್ಯಪ್ರವೇಶದ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಹಾಗೂ ಜಮ್ಮು– ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಶುಕ್ರವಾರ ಹೇಳಿದ್ದರು.

ಫಾರೂಕ್‌ ಹೇಳಿಕೆಗೆ ಮುಫ್ತಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ‘ಅಮೆರಿಕ ಮತ್ತು ಚೀನಾ ಮಧ್ಯಪ್ರವೇಶ ಮಾಡಿರುವ ರಾಷ್ಟ್ರಗಳ ಈಗಿನ ಪರಿಸ್ಥಿತಿ ಫಾರೂಕ್‌ ಅವರಿಗೆ ತಿಳಿದಿದೆಯೇ?’ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.

ಫಾರೂಕ್‌ ಹೇಳಿಕೆಗೆ ಶುಕ್ರವಾರವೇ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ‘ಭಾರತ ಎಂದರೆ ಕಾಶ್ಮೀರ ಮತ್ತು ಕಾಶ್ಮೀರ ಎಂದರೆ ಭಾರತ. ಇದು ನಮ್ಮ ಆಂತರಿಕ ವಿಚಾರ. ಈ ವಿಚಾರದಲ್ಲಿ ಬೇರೆ ದೇಶದ ಮಧ್ಯಪ್ರವೇಶಕ್ಕೆ ಅವಕಾಶವೇ ಇಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.