ADVERTISEMENT

ಅಸ್ಸಾಂ, ತ್ರಿಪುರಾ: ಇಂದು ಮತದಾನ

ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಇಡೀ ದೇಶವೇ ಕುತೂಹ­ಲ­ದಿಂದ ಎದುರು ನೋಡುತ್ತಿ­ರುವ 16ನೇ ಲೋಕ­ಸಭಾ ಚುನಾವಣೆಗೆ ಕ್ಷಣ­ಗಣನೆ ಆರಂಭ­ವಾಗಿದ್ದು, ಮೊದಲ ಹಂತದಲ್ಲಿ ಈಶಾನ್ಯ ರಾಜ್ಯಗಳ ಆರು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ.

ಒಟ್ಟು ಒಂಬತ್ತು ಹಂತಗಳಲ್ಲಿ   ನಡೆ­ಯ­ಲಿರುವ ಲೋಕಸಭಾ ಚುನಾ­ವಣೆಯ ಮೊದಲ ಹಂತದಲ್ಲಿ  ಅಸ್ಸಾಂನ ಐದು ಮತ್ತು ತ್ರಿಪುರಾದ ಒಂದು ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಅಸ್ಸಾಂನ ತೇಜ್‌ಪುರ, ಕಾಲಿಯಾಬೊರ್‌, ಜೋರ್ಹಟ್‌, ದಿಬ್ರುಗಡ ಮತ್ತು ಲಖಿಮ್‌­ಪುರ­ ಹಾಗೂ ತ್ರಿಪುರಾ ಪಶ್ಚಿಮ ಕ್ಷೇತ್ರಗಳಲ್ಲಿ ಮತದಾರರು ಮತ ಚಲಾಯಿಸ­ಲಿದ್ದಾರೆ. 

ಆರು ಕ್ಷೇತ್ರಗಳಲ್ಲಿ ಒಟ್ಟು 64 ಅಭ್ಯರ್ಥಿಗಳಿದ್ದು 77 ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿ­ಸಲಿದ್ದಾರೆ.  ಸೋಮವಾರ ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಈಗಾಗಲೇ ಬಹಿರಂಗ ಪ್ರಚಾರ ಕೊನೆಗೊಂಡಿದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿ­ಗಳು ಮತ್ತು  ಬೆಂಬ­ಲಿ­ಗರು ಮನೆಮನೆಗೆ ತೆರಳಿ ಮತಯಾಚಿಸುತ್ತಿದ್ದು ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿದ್ದಾರೆ. 

ಅಸ್ಸಾಂನಲ್ಲಿ ಆಡಳಿತಾ­ರೂಢ ಕಾಂಗ್ರೆಸ್‌ ಸೇರಿ­ ಬಿಜೆಪಿ, ಆಮ್‌ ಆದ್ಮಿ, ತೃಣ­ಮೂಲ ಕಾಂಗ್ರೆಸ್‌, ಎಐಯು­ಡಿ­ಎಫ್‌, ಎಜಿಪಿ, ಎಎಪಿ, ಎಸ್‌ಯುಸಿಐ, ಸಿಪಿಎಂ, ಎಐಎಫ್‌ಬಿ ಮತ್ತು ಎಸ್‌ಪಿ  ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್‌ನ ಕೇಂದ್ರ ಸಚಿವರಾದ ರಾಣಿ ನರಹ್‌ ಮತ್ತು ಪವನ್‌ ಸಿಂಗ್‌ ಘಟೊವಾರ್, ಹಾಲಿ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಿಜೊಯ್‌ ಕೃಷ್ಣ ಹಂಡಿಕ್‌, ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಸೇರಿದಂತೆ  ಒಟ್ಟು 51 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ.ಕಣದಲ್ಲಿರುವ ಬಂಡಾಯ ಅಭ್ಯರ್ಥಿ ಮೋನಿ ಕುಮಾರ್‌ ಸುಬ್ಬಾ  ಕಾಂಗ್ರೆಸ್‌ಗೆ ತಲೆನೋವಾಗಿದ್ದಾರೆ.

ಆಸ್ಸಾಂನ ಒಟ್ಟು 14 ಕ್ಷೇತ್ರಗ ಳ ಪೈಕಿ ಮೂರು ಕ್ಷೇತ್ರಗಳಿಗೆ ಏಪ್ರಿಲ್‌ 12ರಂದು ಮತ್ತು ಉಳಿದ  ಆರು ಕ್ಷೇತ್ರಗಳಿಗೆ ಏಪ್ರಿಲ್ 24ರಂದು ಮತದಾನ ನಡೆಯಲಿದೆ. 

ತ್ರಿಪುರಾದಲ್ಲಿ ತೀವ್ರ ಸ್ಪರ್ಧೆ: ಎಡಪಂಥೀಯರು ಅಧಿಕಾರದ­ಲ್ಲಿ­ರುವ  ತ್ರಿಪುರಾದ ಒಂದು ಲೋಕಸಭಾ ಕ್ಷೇತ್ರಕ್ಕೆ  ಸಿಪಿಎಂ, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.  ಒಟ್ಟು 13 ಘಟಾನುಘಟಿ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದಾರೆ. ಈ ಕ್ಷೇತ್ರದ ಮೇಲೆ ಭಾರಿ ಪ್ರಾಬಲ್ಯ ಹೊಂದಿರುವ ಸಿಪಿಎಂ,  15 ಚುನಾ­ವಣೆಗಳ ಪೈಕಿ  ಹತ್ತರಲ್ಲಿ ಜಯಗಳಿಸಿದೆ. ಕಾಂಗ್ರೆಸ್ ನಾಲ್ಕು ಬಾರಿ ಹಾಗೂ ಕಾಂಗ್ರೆಸ್‌ ಬಂಡುಕೋರರು ಒಂದು ಬಾರಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಚುನಾವಣಾ ಆಯೋಗ ಮಹಿಳೆ­ಯರಿಗಾಗಿಯೇ 9 ಪ್ರತ್ಯೇಕ ಮತಕೇಂದ್ರ­ಗಳನ್ನು ತೆರೆದಿದೆ. ಏಪ್ರಿಲ್‌ 12ರಂದು  ಪೂರ್ವ ತ್ರಿಪುರಾ ಲೋಕಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ) ಮತದಾನ ನಡೆಯಲಿದೆ.ತ್ರಿಪುರಾದ ಎರಡು ಕ್ಷೇತ್ರಗಳಲ್ಲಿ  ಚುನಾವಣೆಗೆ ಸ್ಪರ್ಧಿಸಿರುವ  ಒಟ್ಟು 25 ಅಭ್ಯರ್ಥಿಗಳ ಪೈಕಿ ಆರು ಮಂದಿ ಕೋಟ್ಯಧಿಪತಿಗಳಿದ್ದಾರೆ. ಅಪರಾಧ ಪ್ರಕರಣ ಎದುರಿಸುತ್ತಿರುವ ಮೂವರು ಕಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.