ADVERTISEMENT

ಆಧಾರ್‌ಗೆ ಕೇಂದ್ರ ಸರ್ಕಾರದ ಬೆಂಬಲ

ಪ್ರೋತ್ಸಾಹ ನೀಡಲು ರಾಜ್ಯಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2014, 19:30 IST
Last Updated 26 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಆಧಾರ್‌  ಯೋಜನೆ ಬಗ್ಗೆ ತನ್ನ ಈ ಹಿಂದಿನ ನಿಲುವಿಗೆ ವ್ಯತಿರಿಕ್ತ ಹೇಳಿಕೆ ನೀಡಿರುವ ಗೃಹ ಸಚಿವಾಲಯ, ‘ಈ ಯೋಜ­ನೆಯು ಯಾವುದೇ ಸಮಯ, ಸ್ಥಳ ಹಾಗೂ ಸಂದರ್ಭದಲ್ಲಿ ಫಲಾನುಭವಿಗಳ ಗುರುತನ್ನು ರುಜುವಾತುಪಡಿಸುತ್ತದೆ’ ಎಂದಿದೆ.

  ‘ಪ್ರತಿಯೊಬ್ಬರಿಗೂ ನಿರ್ದಿಷ್ಟ ಆಧಾರ್‌ ಸಂಖ್ಯೆ ಕೊಡುವುದರಿಂದ ವ್ಯಕ್ತಿಯ ಗುರುತನ್ನು ಸಾರ್ವತ್ರಿಕ­ವಾಗಿ ದೃಢಪಡಿಸಬಹುದು. ಸೌಲಭ್ಯ ವಂಚಿತರು ಹಾಗೂ ಬಡವರು ಬ್ಯಾಂಕಿಂಗ್‌ನಂಥ ಸೇವೆ ಪಡೆದು­ಕೊಳ್ಳುವುದಕ್ಕೆ ಇದು ನೆರವಾಗುತ್ತದೆ’ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿದೆ.

‘ಆಧಾರ್‌ ಕಾರ್ಡ್‌, ವ್ಯಕ್ತಿಯ ಜೈವಿಕ ಮಾಹಿತಿ ಆಧರಿಸಿರುವುದರಿಂದ ವಂಚನೆ, ನಕಲಿ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತದೆ. ಆಧಾರ್‌ ಕಾರ್ಡ್‌ ಹೊಂದಿರುವ ವ್ಯಕ್ತಿ ದೇಶ­ದಾದ್ಯಂತ ಎಲ್ಲ ಸಂದರ್ಭದ­ಲ್ಲಿಯೂ ತನ್ನ ಗುರುತನ್ನು ರುಜು­ವಾತು­ಪಡಿಸ­ಬಹುದು’ ಎಂದು ಅದು ಹೇಳಿದೆ.

ಇನ್ನಷ್ಟು ಸೌಲಭ್ಯ ಸೇರ್ಪಡೆ
ಸರ್ಕಾರವು ಹೆಚ್ಚು ಹೆಚ್ಚು ಯೋಜನೆಗಳನ್ನು ಆಧಾರ್‌ ಕಾರ್ಡ್‌ ಮೂಲಕ ಒದಗಿಸಲು ಯೋಜಿಸುತ್ತಿದೆ. ಹಾಗಾಗಿ ಆಧಾರ್‌ ಕಾರ್ಡ್‌ ಹೊಂದುವುದು ಅತ್ಯಂತ ಉಪಯುಕ್ತ. ಆಧಾರ್‌ ಒಬ್ಬ ವ್ಯಕ್ತಿಯ ಅತ್ಯಂತ ಸರಳವಾದ ಗುರುತು ಚೀಟಿಯಾಗಲಿದೆ.
–ಕೇಂದ್ರ ಗೃಹ ಸಚಿವಾಲಯ

ವಿಶಿಷ್ಟ ಗುರುತಿನ ಚೀಟಿ ಯೋಜನೆ ಅಡಿ ಸಂಗ್ರಹಿಸುವ ವೈಯಕ್ತಿಕ ಮಾಹಿತಿ­ಗಳ ಸತ್ಯಾಸತ್ಯತೆ ಬಗ್ಗೆ ಯುಪಿಎ ಅವಧಿಯಲ್ಲಿ ಗೃಹ ಸಚಿವಾಲಯ ಸಂಶಯ ವ್ಯಕ್ತಪಡಿಸಿತ್ತು.  ಗುರುತನ್ನು ಖಾತ್ರಿ ಪಡಿಸುವುದಕ್ಕೆ ಅಥವಾ ಇತರ ದಾಖಲಾತಿಗಳ ಅಸಲಿತನ ಸಾಬೀತುಪಡಿಸಲು ‘ವಿಶಿಷ್ಟ ಗುರುತು’ ಅತ್ಯಗತ್ಯವಲ್ಲ ಎಂದು ಹೇಳಿತ್ತು.

‘ಬ್ಯಾಂಕ್‌ ಖಾತೆ ತೆರೆಯು­ವುದಕ್ಕೆ, ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸು­ವಿಕೆಗೆ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸು­ವುದಕ್ಕೆ ಆಧಾರ್‌ ಸಂಖ್ಯೆ­ಯನ್ನು ಗುರುತಿನ ಪುರಾವೆ­ಯಾಗಿ ಬಳಸಿಕೊಳ್ಳಬಹುದು’ ಎಂದು ಆಧಾರ್‌ ಕಾರ್ಡ್‌ ಮಹತ್ವವನ್ನು ರಾಜ್ಯ ಸರ್ಕಾರ­ಗಳಿಗೆ ಸಚಿವಾಲಯ ಇದೀಗ ಮನವರಿಕೆ ಮಾಡಿಕೊಟ್ಟಿದೆ.

ದೆಹಲಿಯ ತಿಹಾರ್‌ ಜೈಲಿನಲ್ಲಿ ಕೂಡ ಆಧಾರ್‌ ನೋಂದಣಿ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಕೈದಿಗಳ ಗುರುತು ಕಾಯ್ದೆ–೧೯೨೦ರ ಪ್ರಕಾರ ಕೈದಿಗಳು ಆಧಾರ್‌ ಕಾರ್ಡ್‌ ಹೊಂದುವುದು ಕಡ್ಡಾಯವಲ್ಲ. ಕೈದಿಗಳು ಸ್ವಇಚ್ಛೆ­ಯಿಂದ ಈ ಅವಕಾಶವನ್ನು ಬಳಸಿಕೊಳ್ಳ­ಬಹುದು. ೨೦೧೦ರ ಆಗಸ್ಟ್‌ವರೆಗೆ ೬೭.೩೯ ಕೋಟಿಗೂ ಹೆಚ್ಚು ಆಧಾರ್‌ ಕಾರ್ಡ್‌ಗಳನ್ನು ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.