ADVERTISEMENT

ಆನಂದಿಬೆನ್‌ ಪಟೇಲ್‌ ಗುಜರಾತ್‌ ಸಿ.ಎಂ?

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST

ಅಹಮದಾಬಾದ್‌:  ಗುಜರಾತ್‌ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್‌ ಪಟೇಲ್‌ ಅವ­ರನ್ನು ಬುಧವಾರ ಅಧಿಕೃತ­ವಾಗಿ ಮುಖ್ಯಮಂತ್ರಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಆನಂದಿ ಬೆನ್‌ ಅವರು ಮುಖ್ಯಮಂತ್ರಿ­ಯಾಗು­ವುದಕ್ಕೆ ಅಮಿತ್‌ ಷಾ ಸೇರಿ­ದಂತೆ ಕೆಲವು ಮುಖಂಡರು ಆಕ್ಷೇಪ ಎತ್ತಿದ್ದಾರೆ. ಈ ವಿಷಯವನ್ನು ಆರೆಸ್ಸೆಸ್‌ ಹಿರಿಯ ಮುಖಂಡರಿಗೆ ತಿಳಿಸಲಾಗಿದೆ.

ವಿಜುಭಾಯ್‌್ ವಾಲಾ, ನಿತಿನ್‌್ ಪಟೇಲ್‌ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಭಿಖು­ಭಾಯ್‌್ ದಲ್‌­ಸಾನಿಯಾ ಕೂಡ ಸಿ.ಎಂ ಸ್ಥಾನಕ್ಕೆ ಸಂಭವನೀಯ ಅಭ್ಯರ್ಥಿ­ಗಳಾಗಿದ್ದಾರೆ. ಆನಂದಿ ಬೆನ್‌್ ಅವರಿಗೆ ಮೋದಿ ವರ್ಚಸ್ಸು ಇಲ್ಲದಿದ್ದರೂ ಹೆಚ್ಚು­ಕಡಿಮೆ ಅವರೇ ಸಿ.ಎಂ ಆಗುವುದು ನಿಶ್ಚಿತ ಎನ್ನಲಾಗಿದೆ.

ಮೋದಿ ಇಂದು ರಾಜೀನಾಮೆ: ಪ್ರಧಾನಿಯಾಗಿ ಅಧಿಕಾರ­ವಹಿ­ಸಿಕೊಳ್ಳಲಿರುವ     ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಬುಧವಾರ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿಯಾಗಿ 2001 ಅಕ್ಟೋಬರ್‌ 7ರಂದು  ಪ್ರಮಾಣ ವಚನ ಸ್ವೀಕರಿಸಿದ್ದ ಮೋದಿ 12 ವರ್ಷಗಳ  ಕಾಲ ಈ ಹುದ್ದೆಯಲ್ಲಿ­ದ್ದರು.
ಮುಖ್ಯಮಂತ್ರಿ ಸ್ಥಾನದ ಜತೆ  ಶಾಸಕ ಸ್ಥಾನಕ್ಕೂ ಅವರು ಇದೇ ವೇಳೆ ರಾಜೀನಾಮೆ ಸಲ್ಲಿಸಲಿದ್ದಾರೆ  ಎಂದು ಬಿಜೆಪಿ ವಕ್ತಾರ ಹರ್ಷದ್‌ ಪಟೇಲ್‌ ತಿಳಿಸಿದ್ದಾರೆ. ಮೋದಿ ಬೀಳ್ಕೊಡುಗೆಗಾಗಿಯೇ   ಗುಜರಾತ್‌ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಅದರಲ್ಲಿ ಪಾಲ್ಗೊಂಡ ನಂತರ ಮೋದಿ ಮಧ್ಯಾಹ್ನ 3.30 ಗಂಟೆಗೆ ರಾಜಭವನಕ್ಕೆ ತೆರಳಿ  ರಾಜ್ಯಪಾಲ ಕಮಲಾ ಬೆನಿವಾಲ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ಬುಧವಾರ ಅಹಮದಾಬಾದ್‌ನಲ್ಲಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮೋದಿ ರಾಜೀನಾಮೆ ನೀಡಿದ ನಂತರ ನೇರವಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ  ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಮೋದಿ ಅವರ ಉತ್ತರಾಧಿಕಾರಿ ಆಯ್ಕೆ ನಡೆಯಲಿದ್ದು, ಹಿರಿಯ ನಾಯಕ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಪಕ್ಷ ವೀಕ್ಷಕ­ರನ್ನಾಗಿ ನೇಮಕ ಮಾಡಿದೆ. ನೂತನ ಮುಖ್ಯ­ಮಂತ್ರಿ ಪ್ರಮಾಣ ವಚನ ಕಾರ್ಯಕ್ರಮ ಗುರುವಾರ ಗಾಂಧಿ­ನಗರದ ಮಹಾತ್ಮ ಮಂದಿರದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.