ADVERTISEMENT

ಆಸ್ಪತ್ರೆಯ ಬಾಕಿ ಮೊತ್ತ ಪಾವತಿಸದ ಸರ್ಕಾರ, ಚಿಕಿತ್ಸೆಗೆ ನಿರಾಕರಿಸಿದ ವೈದ್ಯರು: ‌ನವಜಾತ ಶಿಶು ಸಾವು

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 12:57 IST
Last Updated 19 ಸೆಪ್ಟೆಂಬರ್ 2017, 12:57 IST
ಆಸ್ಪತ್ರೆಯ ಬಾಕಿ ಮೊತ್ತ ಪಾವತಿಸದ ಸರ್ಕಾರ, ಚಿಕಿತ್ಸೆಗೆ ನಿರಾಕರಿಸಿದ ವೈದ್ಯರು: ‌ನವಜಾತ ಶಿಶು ಸಾವು
ಆಸ್ಪತ್ರೆಯ ಬಾಕಿ ಮೊತ್ತ ಪಾವತಿಸದ ಸರ್ಕಾರ, ಚಿಕಿತ್ಸೆಗೆ ನಿರಾಕರಿಸಿದ ವೈದ್ಯರು: ‌ನವಜಾತ ಶಿಶು ಸಾವು   

ಭೋಪಾಲ್‌: ಮಧ್ಯಪ್ರದೇಶ ಸರ್ಕಾರ ಆಸ್ಪತ್ರೆಗೆ ‍ಪಾವತಿಸಬೇಕಿರುವ ₹ 6 ಕೋಟಿ ಚಿಕಿತ್ಸಾ ವೆಚ್ಚವನ್ನು ಭರಿಸದ ಕಾರಣ, ಸರ್ಕಾರದ ಯೋಜನೆ ಅಡಿಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ನವಜಾತ ಶಿಶುವಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಇದರಿಂದ ಶಿಶು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಆಗಸ್ಟ್‌ 23ರಂದು ಜನಿಸಿದ್ದ ಹೆಣ್ಣು ಮಗುವಿನ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಹಣ್ಣಿನ ವ್ಯಾಪಾರಿಯಾಗಿರುವ ಮಗುವಿನ ತಂದೆ ಮನೋಜ್‌ ವರ್ಮಾ ಅವರು ಸರ್ಕಾರದ ರಾಷ್ಟ್ರೀಯ ಬಾಲ ಸ್ವಸ್ಥ ಕಾರ್ಯಕ್ರಮ(ಆರ್‌ಬಿಎಸ್‌ಕೆ) ಹಾಗೂ ಮುಖ್ಯಮಂತ್ರಿ ಬಾಲ ಹೃದಯ ಉಪಚಾರ್‌(ಎಂಬಿಎಚ್‌ಯುವೈ) ಯೋಜನೆಗಳ ಅಡಿಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದರು.

ಆರ್‌ಬಿಎಸ್‌ಕೆ ಯೋಜನೆಯಡಿಯಲ್ಲಿ 0–18 ವರ್ಷದವರ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಚಿಕಿತ್ಸಾ ವೆಚ್ಚ ಬಾಕಿಯಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ADVERTISEMENT

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ವರ್ಮಾ, ‘ಈ ಯೋಜನೆಗಳಿಗಾಗಿ ಮಧ್ಯಪ್ರದೇಶ ಸರ್ಕಾರದಿಂದ ಆಸ್ಪತ್ರೆಗೆ ₹6 ಕೋಟಿ ಚಿಕಿತ್ಸಾ ವೆಚ್ಚ ಪಾವತಿಯಾಗಬೇಕಿದೆ. ಹಾಗಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದರು’ ಎಂದು ಹೇಳಿದ್ದಾರೆ.

‘ವೈದ್ಯರು ಕೇವಲ ತಪಾಸಣೆಗಾಗಿಯೇ ₹ 86 ಸಾವಿರ ಹಣ ಪಾವತಿಸಬೇಕು ಎಂದ ವೈದರು, ಎಂಬಿಎಚ್‌ಯುವೈ ಯೋಜನೆ ಅಡಿಯಲ್ಲಿ ಚಿಕಿತ್ಸೆಗೆ ಎಷ್ಟು ವೆಚ್ಚವಾಗಲಿದೆ ಎಂಬ ಅಂದಾಜು ಪಟ್ಟಿಯನ್ನು ನೀಡಲೂ ನಿರಾಕರಿಸಿದರು’ ಎಂದು ಹೇಳಿದ್ದಾರೆ.

ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದ್ದ ಧಾರ್‌ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಆರ್‌.ಸಿ ಪನಿಕಾ ಅವರು, ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ನಾರಾಯಣ ಹೃದಯಾಲಯದ ಆಡಳಿತಾಧಿಕಾರಿ ವಿಕ್ಕಿ, ಮಧ್ಯಪ್ರದೇಶ ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.