ADVERTISEMENT

ಇನ್ಫೊಸಿಸ್‌: ಅಮೆರಿಕನ್ನರ ನೇಮಕಕ್ಕೆ ಹೆಚ್ಚಿದ ಒಲವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 20:08 IST
Last Updated 16 ಏಪ್ರಿಲ್ 2017, 20:08 IST
ಇನ್ಫೊಸಿಸ್‌: ಅಮೆರಿಕನ್ನರ ನೇಮಕಕ್ಕೆ ಹೆಚ್ಚಿದ ಒಲವು
ಇನ್ಫೊಸಿಸ್‌: ಅಮೆರಿಕನ್ನರ ನೇಮಕಕ್ಕೆ ಹೆಚ್ಚಿದ ಒಲವು   

ನವದೆಹಲಿ: ಅಮೆರಿಕದ ‘ಎಚ್‌–1ಬಿ’ ವೀಸಾ ಬಿಕ್ಕಟ್ಟಿಗೆ  ದೇಶದ ಮುಂಚೂಣಿ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಒಂದಾಗಿರುವ ಇನ್ಫೊಸಿಸ್‌, ತನ್ನದೇ ಆದ ಹೊಸ ಪರಿಹಾರ ಮಾರ್ಗ ಕಂಡುಕೊಂಡಿದೆ.

ಅಮೆರಿಕದಲ್ಲಿ ಸ್ಥಳೀಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಕ್ಕೆ ಆದ್ಯತೆ  ನೀಡಲು ಮುಂದಾಗಿದೆ. ಅವರಿಗೆ ವೃತ್ತಿಪರ ತರಬೇತಿ ನೀಡಲು   ಅಲ್ಲಿಯೇ ಕೌಶಲ ಅಭಿವೃದ್ಧಿ ಕೇಂದ್ರಗಳನ್ನೂ ಸ್ಥಾಪಿಸುವ ಆಲೋಚನೆಯನ್ನೂ ಹೊಂದಿದೆ. ಸ್ಥಳೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವುದರಿಂದ  ಐ.ಟಿ ಹೊರಗುತ್ತಿಗೆ ಸಂಸ್ಥೆಗಳ ಕಾರ್ಯನಿರ್ವಹಣಾ ವೆಚ್ಚ ಏರಿಕೆಯಾಗಲಿದೆ. ಆದರೂ, ತಂತ್ರಜ್ಞರ ನೇಮಕಾತಿಯಲ್ಲಿ ಸ್ಥಳೀಯ ಮತ್ತು ವಿದೇಶಿಯರಿಗೆ ಸಮಾನ ಅವಕಾಶ ನೀಡಲು  ಇನ್ಫೊಸಿಸ್‌ ಒಲವು ತೋರಿಸುತ್ತಿದೆ.

ಅಮೆರಿಕದ ಅಧ್ಯಕ್ಷ ಟ್ರಂಪ್‌ ವಲಸಿಗರಿಗೆ ಕಡಿವಾಣ ವಿಧಿಸಲು  ‘ಎಚ್‌–1ಬಿ’ ಉದ್ಯೋಗ ವೀಸಾ ಸಂಬಂಧ ತಳೆದಿರುವ ಕಠಿಣ ನಿಲುವಿನಿಂದ ಉದ್ಭವಿಸಿದ ಪರಿಸ್ಥಿತಿಗೆ ತಕ್ಕಂತೆ ಕಂಪೆನಿ ತನ್ನ ವಹಿವಾಟು ಮತ್ತು ಕಾರ್ಯಾಚರಣೆ ಶೈಲಿಯಲ್ಲಿ  ಮಾರ್ಪಾಡು ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ADVERTISEMENT

‘ಉದ್ಯೋಗ ವೀಸಾಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಎರಡು ವರ್ಷಗಳಿಂದ  ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.    ಸ್ಥಳೀಯರನ್ನೇ (ಅಮೆರಿಕನ್ನರು) ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಅಲ್ಲಿ ನಮ್ಮ ವಹಿವಾಟು ವಿಸ್ತರಿಸಲು ನಿರ್ಧರಿಸಿದ್ದೇವೆ. ಈ ವರ್ಷವೂ ಆ  ನೀತಿಯನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು’ ಎಂದು ಕಂಪೆನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ. ಪ್ರವೀಣ್‌ ರಾವ್‌ ಹೇಳಿದ್ದಾರೆ.

ಭಾರತದ ಮುಂಚೂಣಿ ಸಾಫ್ಟ್‌ವೇರ್‌ ಕಂಪೆನಿಗಳಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌), ವಿಪ್ರೊ  ಕೂಡ ಅಮೆರಿಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.