ADVERTISEMENT

ಉತ್ತರ ಕರ್ನಾಟಕ: ಕಹಿಯೇ ಹೆಚ್ಚು

ಸುದ್ದಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ಹುಬ್ಬಳ್ಳಿ: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಮಂಗಳವಾರ ಮಂಡಿಸಿದ ರೈಲ್ವೆ ಬಜೆಟ್ ಉತ್ತರ ಕರ್ನಾಟಕದ ಪಾಲಿಗೆ ಕಹಿಯಾಗಿದೆ. ಪ್ರತಿ ವರ್ಷ ರೈಲ್ವೆ ಬಜೆಟ್‌ ಮಂಡನೆ ಸಂದರ್ಭದಲ್ಲಿ ಭಾರಿ ಕೊಡುಗೆಗಳ ನಿರೀಕ್ಷೆ ಇಟ್ಟುಕೊಳ್ಳುವ ಈ ಭಾಗದ ಜನರಿಗೆ ಈ ಬಾರಿಯೂ ತೀವ್ರ ನಿರಾಸೆ ಉಂಟಾಗಿದೆ.

ಧಾರವಾಡ–ದಾಂಡೇಲಿ ನಡುವೆ ಪ್ಯಾಸೆಂಜರ್ ರೈಲು, ಗದಗ–ವಿಜಾಪುರ– ಪಂಢರಪುರ ರೈಲು, ಗಬ್ಬೂರು–ಬಳ್ಳಾರಿ, ತಾಳಗುಪ್ಪ–ಸಿದ್ದಾಪುರ ಹಾಗೂ ಗದಗ–ಹರಪನ­ಹಳ್ಳಿ ಮಾರ್ಗ ಸಮೀಕ್ಷೆ, ಧಾರವಾಡ ಸಮೀಪದ ನವಲೂರಿಗೆ ಶೈತ್ಯಾಗಾರ ಸ್ಥಾಪನೆ ಘೋಷಣೆಗಳಿಗಷ್ಟೇ ರೈಲು ಪ್ರಯಾಣಿ­ಕರು ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ನನಸಾಗದ ಕನಸು: ಹುಬ್ಬಳ್ಳಿ–ಮುಂಬೈ ನಡುವೆ ನಿತ್ಯ ಓಡಾಡುವ ರೈಲಿನ ಕನಸು ಈ ಬಾರಿಯೂ ಕನಸಾಗಿಯೇ ಉಳಿದಿದೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ಬೆಳಗಾವಿ–ಧಾರವಾಡ ಹಾಗೂ ತುಮಕೂರು–ದಾವಣಗೆರೆ ಮಾರ್ಗದ ಪ್ರಸ್ತಾಪವೂ ಆಗಿಲ್ಲ. ಕಾಮಗಾರಿ ಆರಂಭವಾಗಿ­ರುವ ಕುಡಚಿ–ಬಾಗಲಕೋಟೆ, ಗದಗ–ವಾಡಿ ಹಾಗೂ ಗದಗ–ಹಾವೇರಿ ಮಾರ್ಗಗಳ ಯೋಜನೆಗಳಿಗೆ ಹೆಚ್ಚು ಹಣ ಒದಗಿಸುವ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. 
ವಸಂತ ಲದ್ವಾ  ಅಸಮಾಧಾನ: ‘ಹುಬ್ಬಳ್ಳಿ–ಅಂಕೋಲಾ ಮಾರ್ಗ ನಿರ್ಮಿಸಬೇಕು ಎಂಬುದು ಈ ಭಾಗದ ಮೂರು ದಶಕ­ಗಳ ಬೇಡಿಕೆ. ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರ­ಣಕ್ಕೆ ಈ ಮಾರ್ಗ ನಿರ್ಮಾಣಕ್ಕೆ ಕೆಲ ಪರಿಸರವಾದಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರಿಂದ ವ್ಯಾಜ್ಯ ಈಗ ಸುಪ್ರೀಂ ಕೋರ್ಟ್‌ನ ಹಸಿರು ಪೀಠದ ಮುಂದಿದೆ. ಆದರೂ, ಈ ಮಾರ್ಗಕ್ಕೆ ಹಣ ತೆಗೆದಿರಿಸಬೇಕು ಎಂಬ ಈ ಭಾಗದ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಸಂತ ಲದ್ವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ– ಸಂಕೇಶ್ವರ– ನಿಪ್ಪಾಣಿ– ಕೊಲ್ಹಾಪುರ– ಕರಾಡ ಮೂಲಕ ಪುಣೆಗೆ ಹಾಗೂ ಚಿಕ್ಕೋಡಿ– ಘಟಪ್ರಭಾ– ಗೋಕಾಕ– ಸವದತ್ತಿ– ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬೇಡಿಕೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಬೆಳಗಾವಿ ಹಾಗೂ ಘಟಪ್ರಭಾ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಬೇಕು ಎಂಬ ಬೇಡಿಕೆಗಳೂ ಈಡೇರಿಲ್ಲ.

ಬೇಡಿಕೆಗಳಿಗೆ ಸಿಗದ ಮನ್ನಣೆ: ಬೆಳಗಾವಿ– ಬೆಂಗಳೂರು, ಹುಬ್ಬಳ್ಳಿ–ಬೆಳಗಾವಿ– ಮುಂಬೈ, ಹುಬ್ಬಳ್ಳಿ– ಬೆಳಗಾವಿ– ನವದೆಹಲಿ, ಬೆಳಗಾವಿ– ಲೋಂಡಾ– ಗೋವಾ, ಬೆಳಗಾವಿ– ಮಿರಜ್‌– ಸೊಲ್ಲಾಪುರ ನಡುವೆ ಹೊಸ ರೈಲಿಗೆ ಬೇಡಿಕೆ ಇತ್ತು. ಮೈಸೂರು– ಹಜರತ್‌ ನಿಜಾಮುದ್ದಿನ್‌ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ ನಿತ್ಯವೂ ಈ ಮಾರ್ಗವಾಗಿಯೇ ಸಂಚರಿಸಬೇಕು ಎಂಬ ಬೇಡಿಕೆಯೂ ಇತ್ತು. ಆದರೆ, ಬೆಳಗಾವಿಯ ಈ ಯಾವ ಬೇಡಿಕೆಗಳಿಗೂ ಮನ್ನಣೆ ಸಿಕ್ಕಿಲ್ಲ.
ವಿಜಾಪುರ ಜಿಲ್ಲೆಗೆ ಸಿಕ್ಕ ಕೊಡುಗೆ: ಗದಗ–-ವಿಜಾಪುರ–- ಪಂಢರಪುರ ನಡುವೆ ವಿಶೇಷ ರೈಲು, ಯಶವಂತಪುರ–-ವಿಜಾಪುರ–-ಜೈಪುರ (ವಾರಕ್ಕೊಮ್ಮೆ ) ನಡುವೆ ಸಂಚರಿಸುತ್ತಿದ್ದ ರೈಲು ಇನ್ಮುಂದೆ ಅಧಿಕೃತವಾಗುವುದೇ ವಿಜಾಪುರ ಜಿಲ್ಲೆಗೆ ಸಿಕ್ಕ ಕೊಡುಗೆಗಳು.

ಗದಗ–ಹುಟಗಿ ನಡುವೆ ಜೋಡಿ ಮಾರ್ಗ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಇದು ಕೂಡಗಿಯಲ್ಲಿ ಎನ್‌ಟಿಪಿಸಿ ಸ್ಥಾಪಿಸಲಿರುವ ಸ್ಥಾವರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಜೋಡಿ ಮಾರ್ಗಕ್ಕಾಗಿ ಹೋರಾಟ ಮುಂದುವರಿಸಲಾಗುವುದು ಎಂದು ವಿಜಾಪುರದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ ಭಾವಿ ತಿಳಿಸಿದ್ದಾರೆ.
ಇನ್ನು, ಆಮೆಗತಿಯಲ್ಲಿ ಸಾಗುತ್ತಿರುವ ಕುಡಚಿ – ಬಾಗಲಕೋಟೆ ರೈಲ್ವೆ ಮಾರ್ಗ ತ್ವರಿತಗೊಳಿಸುವುದು, ಈ ಮಾರ್ಗವನ್ನು ರಾಯ­ಚೂರುವರೆಗೆ ವಿಸ್ತರಿಸುವ ಬಗ್ಗೆಯೂ ಬಜೆಟ್‌ನಲ್ಲಿ ಒತ್ತು ನೀಡದಿರುವುದು ಬಾಗಲಕೋಟೆ ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ನಿರೀಕ್ಷೆ ಹುಸಿ: ಆಲಮಟ್ಟಿ–ಕೂಡಲಸಂಗಮ–ಹುನಗುಂದ–ಕೊಪ್ಪಳ ನಡುವೆ ಹೊಸ ಮಾರ್ಗ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿಸುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಹುಬ್ಬಳ್ಳಿ–ನವದೆಹಲಿ ನೂತನ ರೈಲನ್ನು ಗದಗ, ಸೊಲ್ಲಾಪುರ ಮಾರ್ಗವಾಗಿ, ಸೊಲ್ಲಾಪುರ– ಮಂಗಳೂರು ರೈಲನ್ನು ಗದಗ–ಹುಬ್ಬಳ್ಳಿ ಮಾರ್ಗ­ವಾಗಿ ಹಾಗೂ ಸೊಲ್ಲಾಪುರ–ತಿರುಪತಿ ರೈಲನ್ನು ಗದಗ–ಕೊಪ್ಪಳ–ಗುಂತಕಲ್‌ ಮಾರ್ಗವಾಗಿ ಪ್ರತಿ ದಿನ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಗದಗ ಜಿಲ್ಲೆ ಜನರ ಬೇಡಿಕೆಗಳಿಗೂ ಮನ್ನಣೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.