ADVERTISEMENT

ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಮೌನ ಪ್ರಶ್ನಿಸಿದ ಜೆಡಿಯು

ಏಜೆನ್ಸೀಸ್
Published 22 ಜುಲೈ 2017, 12:52 IST
Last Updated 22 ಜುಲೈ 2017, 12:52 IST
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಮೌನ ಪ್ರಶ್ನಿಸಿದ ಜೆಡಿಯು
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಮೌನ ಪ್ರಶ್ನಿಸಿದ ಜೆಡಿಯು   

ಪಟ್ನಾ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಪ್ರಕರಣ ಸಂಬಂಧ ಮೌನ ವಹಿಸಿರುವುದನ್ನು ಜೆಡಿಯು ವಕ್ತಾರ ನೀರಜ್‌ ಕುಮಾರ್‌ ಅವರು ಪ್ರಶ್ನಿಸಿದ್ದಾರೆ. ಇದರಿಂದಾಗಿ ಆಡಳಿತಾರೂಢ ಆರ್‌ಜೆಡಿ ಮತ್ತು ಜೆಡಿಯು ಮೈತ್ರಿಕೂಟದಲ್ಲಿ ಮೂಡಿರುವ ಬಿರುಕು ಮತ್ತಷ್ಟು ಹೆಚ್ಚಾದಂತಾಗಿದೆ.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ‘ಮೌನ ಎಲ್ಲಕ್ಕೂ ಪರಿಹಾರವಲ್ಲ’ ಎಂದಿರುವ ಕುಮಾರ್‌, ‘ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಸಂಬಂಧ ಸಿಬಿಐ ದಾಖಲಿಸಿಕೊಂಡಿರುವ ದೂರಿನಿಂದ ತೇಜಸ್ವಿ ಅವರು ಆರೋಪ ಮುಕ್ತವಾಗಿ ಹೊರಬರಲಿ’ ಎಂದು ಹೇಳಿದ್ದಾರೆ.

‘ತೇಜಸ್ವಿ ಅವರು ಮೌನವಹಿಸಿರುವುದು ತಾವು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಥವಾ ತನ್ನ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ಸಾರ್ವಜನಿಕವಾಗಿ ವಿವರಿಸುವ ಅಗತ್ಯವಿಲ್ಲ ಎಂಬುದನ್ನು ಹೇಳುತ್ತದೆ. ಭ್ರಷ್ಟಾಚಾರ ಪ್ರಕರಣವನ್ನು ಒಪ್ಪಲು ಸಾಧ್ಯವಿಲ್ಲ. ತೇಜಸ್ವಿಯವರು ತಮ್ಮ ಆದಾಯದ ಮೂಲದ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಜನರ ಆಶಯದಂತೆ ಮೈತ್ರಿಕೂಟ ರಚಿಸಿ ಸರ್ಕಾರ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತೇಜಸ್ವಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಲಘವಾಗಿ ಪರಿಗಣಿಸಿಲ್ಲ. ಮಂಗಳವಾರ ನಡೆದ ತೇಜಸ್ವಿ ಯಾದವ್‌ ಜತೆಗಿನ 40 ನಿಮಿಷದ ಮಾತುಕತೆಯಿಂದ ಮುಖ್ಯಮಂತ್ರಿಗಳಿಗೆ ತೃಪ್ತಿಯಾಗಿಲ್ಲ’ ಎಂದೂ ಜೆಡಿಯು ವಕ್ತಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.