ADVERTISEMENT

ಉಮನ್‌ ಚಾಂಡಿಗೆ ಆಂಧ್ರಪ್ರದೇಶ ಉಸ್ತುವಾರಿ ಹೊಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆ ಮಾಡಿದ್ದು, ಅಸ್ಸಾಂನಿಂದ ಮೊದಲ ಬಾರಿ ಸಂಸದರಾಗಿರುವ ಯುವ ನಾಯಕ ಗೌರವ್‌ ಗೊಗೊಯ್‌ಗೆ ಪಶ್ಚಿಮ ಬಂಗಾಳ ಉಸ್ತುವಾರಿ ವಹಿಸಿದ್ದಾರೆ. ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿಯೂ ಪಕ್ಷದ ಜವಾಬ್ದಾರಿಯನ್ನು ಗೊಗೊಯ್‌ ಅವರಿಗೆ ನೀಡಲಾಗಿದೆ.

ಕೇರಳದ ಮಾಜಿ ಮುಖ್ಯಮಂತ್ರಿ ಉಮನ್‌ ಚಾಂಡಿ ಅವರನ್ನು ಆಂಧ್ರಪ್ರದೇಶದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಪಕ್ಷದ ಹಿರಿಯ ಮುಖಂಡರಾದ ದಿಗ್ವಿಜಯ್‌ ಸಿಂಗ್‌ ಹಾಗೂ ಸಿ.ಪಿ. ಜೋಶಿ ಅವರನ್ನು ಪಕ್ಷದಲ್ಲಿನ ಹುದ್ದೆಯಿಂದ ಮುಕ್ತರನ್ನಾಗಿ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ದಿಗ್ವಿಜಯ್‌ ಸಿಂಗ್‌ ಅವರು ಆಂಧ್ರ ಪ್ರದೇಶ ಮತ್ತು ಸಿ.ಪಿ. ಜೋಶಿ ಅವರು ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿದ್ದರು. ‘ದಿಗ್ವಿಜಯ್‌ ಸಿಂಗ್‌ ಅವರ ದಕ್ಷತೆ ಹಾಗೂ ಅವರು ಕಾಂಗ್ರೆಸ್‌ಗೆ ನೀಡಿದ ಕೊಡುಗೆಗಳನ್ನು ಪಕ್ಷವು ಪ್ರಶಂಸಿಸುತ್ತದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೊಟ್‌ ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಸಿ.ಪಿ. ಜೋಶಿ ನಿರಾಸಕ್ತಿ ತೋರಿದರು ಎಂಬ ಆರೋಪ ಕೇಳಿ ಬಂದಿತ್ತು. ಈಗ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಬಿಹಾರ, ಮೇಘಾಲಯ, ನಾಗಾಲ್ಯಾಂಡ್‌, ತ್ರಿಪುರಾ, ಮಣಿಪುರದಲ್ಲಿ ಪಕ್ಷವನ್ನು ಸಮರ್ಪಕ ವಾಗಿ ಸಂಘಟಿಸದ ಕಾರಣದಿಂದಲೂ ಅಲ್ಲಿನ ಮುಖಂಡರಿಂದ ಜೋಶಿ ಟೀಕೆಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.