ADVERTISEMENT

ಎಂಸಿಐಗೆ ‘ಸುಪ್ರೀಂ’ ನಿಗಾ

ಲೋಧಾ ನೇತೃತ್ವದಲ್ಲಿ ಕಣ್ಗಾವಲು ಸಮಿತಿ ನೇಮಕ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಕಾರ್ಯನಿರ್ವಹಣೆ ಮೇಲೆ ನಿಗಾ ಇಡುವುದಕ್ಕಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಮೂವರು ಸದಸ್ಯರ  ‘ನಿಗಾ ಸಮಿತಿ’ಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೇಮಕ ಮಾಡಿದೆ.

ಸಂವಿಧಾನದ ಕಲಂ 142ರ ಅಡಿಯಲ್ಲಿ ತನಗಿರುವ ಹೆಚ್ಚುವರಿ ಅಧಿಕಾರವನ್ನು ಬಳಸಿಕೊಂಡು ನ್ಯಾಯಮೂರ್ತಿ ಅನಿಲ್‌. ಆರ್‌. ದವೆ ನೇತೃತ್ವದ ಸಾಂವಿಧಾನಿಕ ಪೀಠವು ಈ ಸಮಿತಿ ರಚಿಸಿದೆ. ಮಾಜಿ ಮಹಾಲೇಖಪಾಲ ವಿನೋದ್‌ ರಾಯ್‌ ಹಾಗೂ ಯಕೃತ್‌ ಮತ್ತು ಪಿತ್ತಕ್ಕೆ ಸಂಬಂಧಿಸಿದ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಪ್ರೊ. ಶಿವ ಸರೀನ್‌ ಅವರು ಸಮಿತಿಯ ಇತರ ಸದಸ್ಯರು.

ಭಾರತೀಯ ವೈದ್ಯಕೀಯ ಮಂಡಳಿಯು ವೃತ್ತಿಪರತೆ ಪ್ರದರ್ಶಿಸುತ್ತಿಲ್ಲ ಎಂದು ಪೀಠ ಟೀಕಿಸಿದೆ. ‘ಇನ್ನು ಮುಂದೆ  ಎಂಸಿಐ ಕೈಗೊಳ್ಳುವ ಎಲ್ಲ  ನೀತಿ– ನಿರ್ಧಾರಗಳು ಅನುಷ್ಠಾನಕ್ಕೆ ಬರಬೇಕಾದರೆ ಸಮಿತಿಯ ಒಪ್ಪಿಗೆ ಬೇಕು. ಕೇಂದ್ರ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ರೂಪಿಸುವವರೆಗೆ ನಿಗಾ ಸಮಿತಿಯು ಎಂಸಿಐಗೆ ಅಗತ್ಯ ಸಲಹೆ–ಸೂಚನೆಗಳನ್ನು ನೀಡಲಿದೆ’ ಎಂದು ಅದು ಹೇಳಿದೆ.

ರಾಜ್ಯಗಳಿಗೆ ಇದೆ ಅಧಿಕಾರ: ಉನ್ನತ ಶಿಕ್ಷಣದ ವ್ಯಾಪಾರೀಕರಣ ನಿಯಂತ್ರಿಸಲು ಮತ್ತು ಪ್ರತಿಭೆ ಆಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಮಾಡುವ ಕಾನೂನುಗಳನ್ನು ಜಾರಿ ಅಧಿಕಾರ ರಾಜ್ಯಗಳಿಗೆ ಇದೆ ಎಂದು ನ್ಯಾಯಪೀಠ ಹೇಳಿದೆ.

‘ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ  (ಸಿಇಟಿ) ಹಾಗೂ ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳೆರಡಕ್ಕೂ (ಎನ್‌ಇಇಟಿ) ಮಾನ್ಯತೆ ಇದೆ’ ಎಂದು ಅಭಿಪ್ರಾಯ ಪಟ್ಟಿದೆ.

‘ಒಂದು ವೇಳೆ, ಕೇಂದ್ರ ಸರ್ಕಾರ ಎನ್‌ಇಇಟಿ ನಡೆಸಲು ಅಧಿಸೂಚನೆ ಹೊರಡಿಸಿದಾಗ ರಾಜ್ಯ ಸರ್ಕಾರಗಳು ಸಿಇಟಿ ನಡೆಸಲು ಬಯಸಿದರೆ ಉಂಟಾಗುವ ಬಿಕ್ಕಟ್ಟನ್ನು ಸಂವಿಧಾನದ 254ನೇ ಕಲಂ ಅಡಿಯಲ್ಲಿ ಬಗೆಹರಿಸಬೇಕಾಗುತ್ತದೆ’.

‘ಶಿಕ್ಷಣ, ರಾಜ್ಯ ಮತ್ತು ಕೇಂದ್ರ ಎರಡರ ಸಂಯುಕ್ತ ಪಟ್ಟಿಯಲ್ಲಿನ  ವಿಷಯ. ಆದ್ದರಿಂದ ಈ ಸಂಬಂಧ ಕಲಂ 254ರ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾನೂನುಗಳನ್ನು ರೂಪಿಸುವ ಅಧಿಕಾರ ಹೊಂದಿವೆ. ಆದರೆ, ಕೇಂದ್ರ ಸರ್ಕಾರ ಕಾನೂನು ಮಾಡಿದರೆ ಅಥವಾ ಎನ್ಇಇಟಿಯಂತಹ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸಿದರೆ, ಆಗ ರಾಜ್ಯಗಳ ಕಾನೂನುಗಳು ಅನೂರ್ಜಿತಗೊಳ್ಳುತ್ತವೆ’ ಎಂದು ಸುಪ್ರೀಂ ಕೋರ್ಟ್‌ ವಿವರಿಸಿದೆ.

ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಮೀಸಲಿಡಲು ಅವಕಾಶ ಕಲ್ಪಿಸುವ ಮಧ್ಯಪ್ರದೇಶದ ಕಾನೂನನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಕೇಂದ್ರ ಮನವಿ: ರಾಜ್ಯಗಳಿಗೆ ಸಿಇಟಿ ನಡೆಸಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಕೂಡ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ರಾಜ್ಯಗಳ ಅರ್ಜಿ ಇಂದು ವಿಚಾರಣೆ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿವೆ. ಮಂಗಳವಾರ ಅರ್ಜಿ ವಿಚಾರಣೆ ನಡೆಯಲಿದೆ.

ಖಾಸಗಿಯವರ ಅರ್ಜಿ ಆಶ್ರಯ ಪಡೆದ ರಾಜ್ಯ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ದೇಶದಾದ್ಯಂತ ಏಕರೂಪದ ಪ್ರವೇಶ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಖಾಸಗಿ ವಿವಿಗಳು ಸಲ್ಲಿಸಿರುವ ಅರ್ಜಿಯಲ್ಲಿಯೇ, ಎನ್‌ಇಇಟಿ ಪರೀಕ್ಷೆಯಿಂದ  ವಿದ್ಯಾರ್ಥಿಗಳಿಗೆ ಈ ವರ್ಷದ ಮಟ್ಟಿಗೆ ವಿನಾಯಿತಿ ನೀಡುವಂತೆ ರಾಜ್ಯ ಕೋರಿದೆ.

‘ಸರ್ಕಾರದಿಂದ  ಅರ್ಜಿ ಸಲ್ಲಿಸುವುದಕ್ಕೆ ಕೆಲ ತಾಂತ್ರಿಕ  ಸಮಸ್ಯೆಗಳಿದ್ದವು.   ಅದಕ್ಕಾಗಿ ಖಾಸಗಿ ವಿವಿಗಳು ಈಗಾಗಲೇ ಸಲ್ಲಿಸಿರುವ ಅರ್ಜಿ ಅವಲಂಬಿಸಬೇಕಾಯಿತು’ ಎಂದು ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ಆರ್‌.ನಾಯಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT