ADVERTISEMENT

ಎಐಎಡಿಎಂಕೆ: ನಾಳೆ ವಿಲೀನ?

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಒ. ಪನ್ನೀರ್‌ ಸೆಲ್ವಂ
ಒ. ಪನ್ನೀರ್‌ ಸೆಲ್ವಂ   

ಚೆನ್ನೈ: ಎಐಎಡಿಎಂಕೆ ಬಣಗಳು ಸೋಮವಾರ ಅಧಿಕೃತವಾಗಿ ವಿಲೀನಗೊಳ್ಳುವ ಸುಳಿವನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಬಂಡಾಯ ಬಣದ ನಾಯಕ ಒ. ಪನ್ನೀರ್‌ ಸೆಲ್ವಂ ನೀಡಿದ್ದಾರೆ.

ಶುಕ್ರವಾರ ರಾತ್ರಿ ಎರಡೂ ಬಣಗಳ ವಿಲೀನದ ಅಧಿಕೃತ ಘೋಷಣೆ ಹೊರಬೀಳುವ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ಪನ್ನೀರ್‌ ಸೆಲ್ವಂ ಬಣದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ನಿರೀಕ್ಷೆ ಹುಸಿಯಾಗಿತ್ತು.

’ಚರ್ಚೆಯ ಸಂದರ್ಭದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದವು. ಮಾತುಕತೆ ಮೂಲಕ ಅವುಗಳನ್ನು ಪರಿಹರಿಸಲಾಗಿದೆ. ಎರಡೂ ಬಣಗಳು ಶೀಘ್ರದಲ್ಲಿ ವಿಲೀನವಾಗಲಿವೆ’ ಎಂದು ಪಳನಿಸ್ವಾಮಿ ಶನಿವಾರ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಕೂಡ ಇದೇ ರೀತಿಯ ಮಾತುಗಳನ್ನು ಹೇಳಿದ್ದಾರೆ.

ಶನಿವಾರ ಚೆನ್ನೈನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಲೀನ ಪ್ರಕ್ರಿಯೆ ಮಾತುಕತೆ ಸರಾಗವಾಗಿ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶ ಬರಲಿದೆ’ ಎಂದು ಹೇಳಿದ್ದಾರೆ.

ವೀಲಿನಕ್ಕೆ ಸಂಬಂಧಿಸಿದಂತೆ ಪಕ್ಷದ ಒಳಗಡೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಬದಲಿಸುವ ಎಚ್ಚರಿಕೆ: ಈ ಮಧ್ಯೆ ಶಶಿಕಲಾ ಸಂಬಂಧಿ ಹಾಗೂ ಪಳನಿಸ್ವಾಮಿ ಬಣದಿಂದ ಮೂಲೆಗುಂಪಾಗಿರುವ ಟಿ.ಟಿ.ವಿ. ದಿನಕರನ್‌ ಅವರನ್ನು ಎಐಎಡಿಎಂಕೆಯ 10 ಶಾಸಕರು ಭೇಟಿ ಮಾಡಿ, ಎರಡೂ ಬಣಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಒಂದು ವೇಳೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಅವರನ್ನು ಬದಲಾಯಿಸುವ ಎಚ್ಚರಿಕೆಯನ್ನು ದಿನಕರನ್‌ ಬಣ ನೀಡಿದೆ.

‘ಪಳನಿಸ್ವಾಮಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೇವೆ. ಆದರೆ, ಅವರು ಸರಿಯಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿಲ್ಲ’ ಎಂದು ದಿನಕರನ್‌ ಬೆಂಬಲಿಗ ಶಾಸಕ ಪಳನಿಯಪ್ಪನ್‌ ಹೇಳಿದ್ದಾರೆ.

ವಿಲೀನ ಮಾತುಕತೆಗೆ ಹೆಚ್ಚು ಮಹತ್ವ ನೀಡಿರುವ ದಿನಕರನ್‌, ಇದು ತುಂಬ ದಿನ ಬಾಳುವುದಿಲ್ಲ. ಒಂದು ವೇಳೆ ಬಣಗಳು ವಿಲೀನವಾದರೆ ತಮಗೆ ಹಿನ್ನಡೆಯಾದಂತೆ ಆಗುವುದಿಲ್ಲ ಎಂದು ಹೇಳಿದ್ದಾರೆ.
*
ವಿಳಂಬದ ಹಿಂದಿನ ಕಾರಣ
ಪಕ್ಷ ಮತ್ತು ಸರ್ಕಾರದಲ್ಲಿ ವಿವಿಧ ಹುದ್ದೆಗಳ ಹಂಚಿಕೆ ವಿಚಾರದಲ್ಲಿ ಎರಡೂ ಬಣಗಳ ನಡುವೆ ತೀವ್ರ ಚೌಕಾಸಿ ನಡೆಯುತ್ತಿರುವುದರಿಂದ ವಿಲೀನ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಎರಡು ಸಚಿವ ಸ್ಥಾನದ ಜೊತೆಗೆ ಮುಖ್ಯಮಂತ್ರಿ ಹುದ್ದೆ ತನಗೆ ನೀಡಬೇಕು ಎಂದು ಪನ್ನೀರ್‌ ಸೆಲ್ವಂ ಬಣ ಹೊಸ ಬೇಡಿಕೆ ಮುಂದಿಟ್ಟಿದೆ ಎಂದು ಪಳನಿಸ್ವಾಮಿ ಬಣದ ಮೂಲಗಳು ಹೇಳಿವೆ.

ADVERTISEMENT

‘ಉಪಮುಖ್ಯಮಂತ್ರಿ ಹುದ್ದೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪನ್ನೀರ್‌ಸೆಲ್ವಂ ಬಣಕ್ಕೆ ನೀಡಲು ನಾವು ಸಿದ್ಧರಿದ್ದೇವೆ. ಆದರೆ, ಇದನ್ನು ಅವರು ತಿಸ್ಕರಿಸಿದ್ದಾರೆ’ ಎಂದು ಪಳನಿಸ್ವಾಮಿ ಬಣದ ಮುಖಂಡರೊಬ್ಬರು ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.