ADVERTISEMENT

ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಸಂಸದ

ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ

ಐಎಎನ್ಎಸ್
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಸಂಸದ
ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಸಂಸದ   
ನವದೆಹಲಿ: ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಅವರು ಇಲ್ಲಿನ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಮ್ಯಾನೇಜರ್‌ಗೆ ಚಪ್ಪಲಿಯಿಂದ ಹೊಡೆದಿದ್ದಾರೆ. 
 
ಮಹಾರಾಷ್ಟ್ರದ ಉಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಅವರು ಏರ್‌ ಇಂಡಿಯಾದ ಮ್ಯಾನೇಜರ್‌ ಶಿವಕುಮಾರ್ (60) ಅವರಿಗೆ ಚಪ್ಪಲಿ ಯಿಂದ 25 ಬಾರಿ ಹೊಡೆದಿದ್ದಲ್ಲದೆ ಅವರ ಶರ್ಟ್‌ ಅನ್ನು ಹರಿದು ಹಾಕಿ ಕನ್ನಡಕ  ಒಡೆದು ಹಾಕಿದ್ದಾರೆ ಎನ್ನಲಾಗಿದೆ. 
 
ರವೀಂದ್ರ ಅವರು ಬ್ಯುಸಿನೆಸ್‌  ಕ್ಲಾಸ್‌ ಟಿಕೆಟ್‌ ಬುಕ್ ಮಾಡಿದ್ದರು.  ಪುಣೆಯಿಂದ ನವದೆಹಲಿಗೆ ತುರ್ತಾಗಿ  ಹೋಗಬೇಕಿದ್ದರಿಂದ ಎಕಾನಮಿ ಕ್ಲಾಸ್‌ ವಿಮಾನ ವೇರಿದ್ದರು. ವಿಮಾನ ನಿಲ್ದಾಣಕ್ಕೆ ‘ಎಐ 852’ ವಿಮಾನ ಬಂದು ನಿಂತು ಒಂದು  ಗಂಟೆ ಆದರೂ ತಮ್ಮ ಆಸನಬಿಟ್ಟು ಕದಲದೇ ಕುಳಿತಿದ್ದರು.
 
ಆಗ ಬಂದ ಏರ್‌ ಇಂಡಿಯಾ ಮ್ಯಾನೇಜರ್‌ ಶಿವಕುಮಾರ್, ವಿಮಾನವನ್ನು  ಮತ್ತೊಂದು ಪ್ರಯಾಣಕ್ಕೆ ಸಜ್ಜುಗೊಳಿಸಬೇಕಿದ್ದು, ಹೊರ ಹೋಗುವಂತೆ ಸಂಸದರಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ರವೀಂದ್ರ  ಹಲ್ಲೆ ನಡೆಸಿದ್ದಾರೆ.
 
‘ನನ್ನ ಬಳಿ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಇದ್ದರೂ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವಂತೆ ಏರ್ ಇಂಡಿಯಾ ಸಿಬ್ಬಂದಿ ಒತ್ತಾಯ ಮಾಡಿದರು. ನನ್ನನ್ನೇ ಯಾರು ಈ ಸಂಸದ ಎಂದು ಸಿಬ್ಬಂದಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಹೇಳಿದರು. 
 
ನಾನು ಬಿಜೆಪಿಯ ಸಂಸದ ಅಲ್ಲ, ಶಿವಸೇನಾ ಸಂಸದ. ಯಾವುದೇ ಅವಮಾನ ಸಹಿಸುವುದಿಲ್ಲ. ಹಲ್ಲೆ ನಡೆಸಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲ’  ಎಂದರು. 
‘ನನ್ನೊಂದಿಗೆ ವಿಮಾನದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು’ ಎಂದು  ಅವರು ಆರೋಪಿಸಿದ್ದಾರೆ. 
 
ಪ್ರಕರಣದ ತನಿಖೆಗಾಗಿ ಏರ್‌ ಇಂಡಿಯಾ ತಂಡವೊಂದನ್ನು ರಚಿಸಿದ್ದು,  ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಸಲ್ಲಿಸಲಿದೆ. ಅಲ್ಲದೆ ರವೀಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. 
 
ಮತ್ತೊಂದು ದೂರು: ವಿಮಾನದಿಂದ ಹೊರನಡೆಯದೆ ಸಂಸದ ಗಲಾಟೆ ಮಾಡಿದ್ದರಿಂದ ಮತ್ತೊಂದು ಪ್ರಯಾಣಕ್ಕೆ ವಿಮಾನ ತೆರಳುವುದು 40 ನಿಮಿಷ ತಡವಾಗಿದೆ. ಇದಕ್ಕಾಗಿ ಏರ್‌ ಇಂಡಿಯಾ ಮತ್ತೊಂದು ದೂರು ದಾಖಲಿಸಿದೆ. ದುರ್ವರ್ತನೆ ತೋರುವ ಪ್ರಯಾಣಿಕರ ನಿಷೇಧದ ಪಟ್ಟಿಯಲ್ಲಿ ರವೀಂದ್ರ ಅವರ ಹೆಸರು ಸೇರಿಸಲು ಚಿಂತನೆ ನಡೆಸಿದೆ. 
 
ವಿವಾದಗಳು ಇದೇ ಹೊಸದಲ್ಲ
2014ರಲ್ಲಿ ನವದೆಹಲಿಯಲ್ಲಿನ ಮಹಾರಾಷ್ಟ್ರ ಸದನದಲ್ಲಿ ಕಳಪೆ ಗುಣಮಟ್ಟದ ಚಪಾತಿ   ನೀಡಲಾಗಿದೆ ಎಂದು ಆರೋಪಿಸಿ ಆಹಾರ ಪೂರೈಸಿದ್ದ ಮುಸ್ಲಿಂ ಯುವಕನಿಗೆ ಆತ ರಂಜಾನ್‌ ಉಪವಾಸ ಆಚರಿಸುತ್ತಿದ್ದ ಎಂಬುದನ್ನೂ ನೋಡದೆ ರವೀಂದ್ರ ಗಾಯಕ್‌ವಾಡ್‌್ ಚಪಾತಿ ತಿನ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.