ADVERTISEMENT

ಕೇಜ್ರಿವಾಲ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಅಮೃತಸರ (ಪಿಟಿಐ): ಮಾನಹಾನಿ ಪ್ರಕರಣವೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮತ್ತು ಆಮ್‌ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರಿಗೆ ಪಂಜಾಬ್‌ನ ಸ್ಥಳೀಯ ನ್ಯಾಯಾಲಯ  ಶುಕ್ರವಾರ ಜಾಮೀನು ನೀಡಿದೆ.

ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್‌ 15ಕ್ಕೆ ನಿಗದಿಪಡಿಸಿದೆ. ಕೇಜ್ರಿವಾಲ್, ಸಂಜಯ್‌ ಸಿಂಗ್‌ ಮತ್ತು ಆಶಿಶ್‌ ಖೇತಾನ್‌ ಅವರ ವಿರುದ್ಧ ಪಂಜಾಬ್‌ನ ಕಂದಾಯ ಸಚಿವ, ಶಿರೋಮಣಿ ಅಕಾಲಿದಳದ ಬಿಕ್ರಂ ಸಿಂಗ್‌ ಮಜೀಥಿಯಾ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ಈ ಮೂವರಿಗೆ ಜುಲೈ 18ರಂದು ಸಮನ್ಸ್‌ ಜಾರಿ ಮಾಡಿತ್ತು.

‘ಕೇಜ್ರಿವಾಲ್ ಮತ್ತು ಸಿಂಗ್‌ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಕ್ಟೋಬರ್‌ 15ರಂದು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಆಶಿಶ್‌ ಖೇತಾನ್‌ ಅವರಿಗೆ ಸೂಚಿಸಲಾಗಿದೆ’ ಎಂದು ಎಎಪಿ ಪರ ವಕೀಲ ಎಚ್‌.ಎಸ್‌. ಫೂಲ್ಕಾ ತಿಳಿಸಿದರು.

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖಂಡರು ತಮ್ಮ ಹಾಗೂ ತಮ್ಮ ಕುಟುಂಬದವ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ಮಜೀಥಿಯಾ ಅವರು ಮೇ 20ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಭಾರಿ ಬೆಂಬಲ:  ಅಮೃತಸರ ಸರ್ಕೀಟ್‌ ಹೌಸ್‌ ಸಮೀಪ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಎಎಪಿ ಬೆಂಬಲಿಗರು ಕೇಜ್ರಿವಾಲ್ ಮತ್ತು ಪಕ್ಷದ ಇತರೆ ಮುಖಂಡರ ಪರ ಫಲಕಗಳನ್ನು ಪ್ರದರ್ಶಿಸಿದರು.

ಕೇಜ್ರಿವಾಲ್ ವಾಗ್ದಾಳಿ: ಜಾಮೀನು ದೊರಕುತ್ತಿದ್ದಂತೆಯೇ ಮಜೀಥಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅರವಿಂದ್‌ ಕೇಜ್ರಿವಾಲ್, ಆರು ತಿಂಗಳ ಬಳಿಕ ಹೊಸ ಪಂಜಾಬ್‌ ಅನ್ನು ನಿರ್ಮಿಸುವುದಾಗಿ ಶಪಥ ಮಾಡಿದ್ದಾರೆ.

ತಮ್ಮ ವಿರುದ್ಧದ ಸುಳ್ಳು ಆರೋಪಗಳಿಗೆ ಬೆದರುವುದಿಲ್ಲ ಎಂದಿರುವ ಕೇಜ್ರಿವಾಲ್, ಮುಂದಿನ ಚುನಾವಣೆಯಲ್ಲಿ ಜನರು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

‘6 ತಿಂಗಳಲ್ಲಿ ನನ್ನನ್ನು ಬಂಧಿಸುವಂತೆ ಮಜೀಥಿಯಾ ಅವರಿಗೆ ಸವಾಲು ಹಾಕುತ್ತಿದ್ದೇನೆ. ಇಲ್ಲದಿದ್ದರೆ, ಆರು ತಿಂಗಳ ಬಳಿಕ ನಾನೇ ಅವರನ್ನು ಬಂಧಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮಜೀಥಿಯಾ ಅವರು ಮಾದಕ ವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪುನಃ ಆರೋಪ ಮಾಡಿದ ಕೇಜ್ರಿವಾಲ್‌, ಸಚಿವರು ದಾಖಲಿಸಿರುವ ಪ್ರಕರಣಗಳಿಗೆ ಬೆದರುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.