ADVERTISEMENT

ಕೇಜ್ರಿವಾಲ್‌ ಬಿಡುಗಡೆಗೆ ಆದೇಶ

ಕೊನೆಗೂ ಬಾಂಡ್ ಸಲ್ಲಿಸಿದ ಎಎಪಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST

ನವದೆಹಲಿ (ಐಎಎನ್ಎಸ್‌): ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೊನೆಗೂ ವೈಯಕ್ತಿಕ ಬಾಂಡ್‌ ಸಲ್ಲಿಸಿದ್ದು,  ಜೈಲಿನಿಂದ ಬಿಡು­ಗಡೆಗೆ ನ್ಯಾಯಾಲಯ ಆದೇಶಿಸಿದೆ.ಮಾನನಷ್ಟ ಮೊಕದ್ದಮೆಗೆ ಸಂಬಂಧಿ­ಸಿ­ದಂತೆ ಇಲ್ಲಿನ ತಿಹಾರ್ ಜೈಲಿನಲ್ಲಿದ್ದ ಕೇಜ್ರಿವಾಲ್, ಹೈಕೋರ್ಟ್ ಸಲಹೆ ಮೇರೆಗೆ ಮಂಗಳವಾರ ವೈಯಕ್ತಿಕ ಬಾಂಡ್ ಸಲ್ಲಿಸಿದರು.

ಬಾಂಡ್ ಸಲ್ಲಿಸಿದ ನಂತರ ದೆಹಲಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಗೋಮತಿ ಮನೋಚಾ ಅವರು ಕೇಜ್ರಿವಾಲ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸೂಚಿಸಿದರು.

‘ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ’:
ಮಂಗಳವಾರ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಕೈಲಾಶ್‌ ಗಂಭೀರ್‌ ಮತ್ತು ಸುನೀತಾ ಗುಪ್ತಾ ಅವರನ್ನು ಒಳಗೊಂಡ ಪೀಠವು, ಬಾಂಡ್‌ ನೀಡುವುದನ್ನು ಒಂದು ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೇ ಕಾನೂನು ಪ್ರಕಾರ ಬಾಂಡ್‌ ನೀಡಿ ಜಾಮೀನು ಪಡೆಯಬೇಕೆಂದು ಸಲಹೆ ನೀಡಿತ್ತು.ಈ ಸಲಹೆಗೆ ಕೇಜ್ರಿವಾಲ್ ಒಪ್ಪಿ ಸಹಿ ಹಾಕಿದರು.

ಹಿನ್ನೆಲೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಲ್ಲಿಸಿದ್ದ ಮಾನನಷ್ಟ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 21ರಂದು ಕೇಜ್ರಿವಾಲ್ ಅವರಿಗೆ ₨ 10 ಸಾವಿರ ವೈಯಕ್ತಿಕ ಬಾಂಡ್‌ ನೀಡುವಂತೆ ಸೂಚಿಸಿತ್ತು. ಆದರೆ ಬಾಂಡ್‌ ನೀಡಲು ನಿರಾಕರಿಸಿದ ಕೇಜ್ರಿವಾಲ್‌ ಅವರನ್ನು ಮೇ 23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಮೇ 23ರಂದು ನಡೆದ ವಿಚಾರಣೆ ವೇಳೆ ಪುನಃ ಬಾಂಡ್‌ ನೀಡಲು ನಿರಾಕರಿಸಿದ್ದರು. ಹಾಗಾಗಿ ನ್ಯಾಯಾಲಯ ಅವರನ್ನು ಜೂನ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.

ಸಿಸೋಡಿಯಾ, ಗೋಪಾಲ್‌ಗೆ ಕೋರ್ಟ್ ನೋಟಿಸ್‌
ನವದೆಹಲಿ (ಪಿಟಿಐ
): ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಾಗ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧವಾಗಿ ಹಗುರವಾಗಿ ಹೇಳಿಕೆ ನೀಡಿದ್ದ ಎಎಪಿ ಮುಖಂಡರಾದ ಮನೀಶ್ ಸಿಸೊಡಿಯಾ ಮತ್ತು ಗೋಪಾಲ್‌ ರೈ ಅವರಿಗೆ ದೆಹಲಿ ಕೋರ್ಟ್ ಮಂಗಳವಾರ ನೋಟಿಸ್ ನೀಡಿದೆ.

ಸಿಸೊಡಿಯಾ ಮತ್ತು ರೈ ಅವರು ನೀಡಿದ್ದ ಹೇಳಿಕೆಗಳು ಹಗುರವಾಗಿವೆ ಎಂದು ಆರೋಪಿಸಿ ವಕೀಲ ಪಂಕಜ್‌ ಮೆದಿರಟ್ಟಾ ಎಂಬುವವರು ದೂರು ಸಲ್ಲಿಸಿ­ದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೊ­ಪಾಲಿಟನ್ ಮ್ಯಾಜಿಸ್ಟ್ರೇಟ್‌ ಗೋಮತಿ ಮನೋಚಾ ನೋಟಿಸ್‌ ಜಾರಿ ಮಾಡಿದ್ದಾರೆ.

‘ನ್ಯಾಯಾಂಗ ಆಡಳಿತ ದುರ್ಬಲ­ವಾಗಿದ್ದು, ಆಡಳಿತಾರೂಢ ಸರ್ಕಾರದ ಕೈಕೆಳಗೆ ನ್ಯಾಯಾಂಗ ಕಾರ್ಯ ನಿರ್ವಹಿಸುತ್ತಿದೆ’ ಎಂಬರ್ಥದ ಹೇಳಿಕೆಯನ್ನು ಸಿಸೊಡಿಯಾ ಮತ್ತು ರೈ ನೀಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜುಲೈ 11ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT