ADVERTISEMENT

ಖಾಸಗಿಯವರು ರೈಲು ಓಡಿಸಲಿ: ಬಿಬೇಕ್‌ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 5:52 IST
Last Updated 1 ಏಪ್ರಿಲ್ 2015, 5:52 IST

ನವದೆಹಲಿ: ರೈಲ್ವೆ ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡಬೇಕು. ಖಾಸಗಿ ಸಂಸ್ಥೆಗಳಿಗೂ ಪ್ರಯಾಣಿಕ ಹಾಗೂ ಸರಕು ಸಾಗಾಣಿಕೆ ರೈಲು ಸಂಚಾರ ಆರಂಭಿಸಲು ಅವಕಾಶ ನೀಡಬೇಕು ಎಂದು ಬಿಬೇಕ್‌ ದೆಬ್ರೋಯ್‌ ನೇತೃತ್ವದ ಉನ್ನತಾಧಿಕಾರ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಭಾರತೀಯ ರೈಲ್ವೆಯ ಸಮಗ್ರ ಸುಧಾರಣೆಗಾಗಿ ಈ ಸಮಿತಿಯು ಹಲವು ಶಿಫಾರಸುಗಳನ್ನು ಮುಂದಿಟ್ಟಿದೆ. ರೈಲು ಬೋಗಿ, ವ್ಯಾಗನ್‌ ಮತ್ತು ಎಂಜಿನ್‌  ತಯಾರಿಕೆಯನ್ನೂ ಖಾಸಗಿ ಸಂಸ್ಥೆಗಳಿಗೆ ನೀಡಬೇಕು. ರೈಲ್ವೆ ಇಲಾಖೆಯ ವಾಣಿಜ್ಯ ವ್ಯವಹಾರಗಳಲ್ಲೂ ಖಾಸಗಿ ಕ್ಷೇತ್ರದ ಪಾಲುದಾರಿಕೆಗೆ ಅವಕಾಶ  ನೀಡಬೇಕು ಎಂದು ಈ ಸಮಿತಿ ಅಭಿಪ್ರಾಯಪಟ್ಟಿದೆ.

ಸದ್ಯ ರೈಲ್ವೆ ಇಲಾಖೆ ನಿರ್ವಹಿಸುತ್ತಿರುವ ಶಾಲೆ, ಆಸ್ಪತ್ರೆ ಮತ್ತು ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್‌)ಯನ್ನು ಇಲಾಖೆಯಿಂದ ಪ್ರತ್ಯೇಕಿಸಬೇಕು. ರೈಲ್ವೆ ಇಲಾಖೆಯ ವಿವಿಧ ತಯಾರಿಕಾ ಘಟಕಗಳನ್ನು ಸ್ಥಗಿತಗೊಳಿಸಿ, ಏಕೈಕ ‘ಭಾರತೀಯ ರೈಲ್ವೆ ತಯಾರಿಕಾ ಕಂಪೆನಿ’ ಸ್ಥಾಪಿಸಬೇಕು ಇದರ ಜತೆಗೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ವಿಶೇಷ ಉದ್ದೇಶದ ಹೂಡಿಕೆ’ ನಿಧಿ ಸ್ಥಾಪಿಸಬೇಕು ಎಂಬ ಸಲಹೆಯನ್ನೂ ಈ  ಸಮಿತಿ ಸರ್ಕಾರದ ಮುಂದಿಟ್ಟಿದೆ.

ರೈಲು ದರ ನಿಗದಿಪಡಿಸುವ, (ಹೆಚ್ಚಿಸುವ ಮತ್ತು ತಗ್ಗಿಸುವ) ಅಧಿಕಾರವನ್ನು ಸ್ವತಂತ್ರ ಸಂಸ್ಥೆಗೆ ನೀಡಬೇಕು. ಇದು ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿಯಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಬೇಕು. ಈ ಉದ್ದೇಶಕ್ಕೆ ಪ್ರತ್ಯೇಕ ದರ ನಿಯಂತ್ರಣ ಸಂಸ್ಥೆ  ಸ್ಥಾಪಿಸಬೇಕು ಎಂಬ ಸಲಹೆಯನ್ನೂ ಬಿಬೇಕ್‌ ದೆಬ್ರೋಯ್‌ ಸಮಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT