ADVERTISEMENT

ಗಂಡ ಸಿ.ಎಂ ಆದರೂ ಕೆಲಸ ಬಿಡಲ್ಲ

ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‌ ಪತ್ನಿ ಅಮೃತಾ ಮಾತು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಮುಂಬೈ: ಗಂಡ ರಾಜ್ಯದ ಮುಖ್ಯಮಂತ್ರಿ­ಯಾದರೂ ತನ್ನ ಕೆಲಸವನ್ನು ಬಿಡಲು ಇಷ್ಟಪಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ರಾನಡೆ ಫಡ್ನವೀಸ್‌ ಹೇಳಿದ್ದಾರೆ.

‘ಮಹಿಳೆಯರು ಸ್ವತಂತ್ರರಾಗಿರ­ಬೇಕು. ಈ ಹಂತಕ್ಕೆ ತಲುಪಲು ನಾನು ಬಹಳ ಕಷ್ಟಪಟ್ಟಿದ್ದೇನೆ’ ಎಂದು ನಾಗ­ಪುರ­­ದಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ನ ಸಹ ಉಪಾ­ಧ್ಯಕ್ಷೆ­ಯಾಗಿ­ರುವ ಅಮೃತಾ ಹೇಳಿ­ದ್ದಾರೆ. ಮುಂಬೈಗೆ ವರ್ಗಾ­ವಣೆ ಕೋರಿ ಅವರು ಈಗಾಗಲೇ ಮನವಿ­ಯನ್ನೂ ಸಲ್ಲಿಸಿ­ದ್ದಾರೆ. ‘ಫಡ್ನವೀಸ್‌ ಅವರಿಗೆ ಉತ್ತಮ ಜ್ಞಾನ ಇದೆ.

ಅವರು ವಿವಿಧ ವಿಷಯ­ಗಳನ್ನು ಅದರಲ್ಲೂ ವಿಶೇಷ­ವಾಗಿ ಬಜೆಟ್‌ ಸಂಬಂಧಿ ವಿಷಯಗಳನ್ನು ಅಧ್ಯ­ಯನ ಮಾಡುತ್ತಾರೆ. ಓದಿನ ಮೂಲಕ ಅವರು ತಮ್ಮ ಜ್ಞಾನವನ್ನು ಪರಿಷ್ಕರಿಸು­ತ್ತಲೇ ಇರು­ತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಲವು ವರ್ಷಗಳಿಂದ ಭ್ರಷ್ಟಾಚಾರ­ದಿಂದ ನಲುಗಿ ಹೋಗಿ­ರುವ ಮಹಾ­ರಾಷ್ಟ್ರದ ಅಭಿ­ವೃದ್ಧಿಗೆ ಬೇಕಾದ ವ್ಯಕ್ತಿತ್ವ­ವನ್ನು ಅವರು ಹೊಂದಿ­ದ್ದಾರೆ’ ಎಂದು ಗಂಡನ ಬಗ್ಗೆ ಅಮೃತಾ ಹೇಳಿದ್ದಾರೆ.

ಮೊದಲ ದಿನದಿಂದಲೇ ಕೆಲಸಕ್ಕೆ ತೊಡಗಬೇಕು ಎಂಬುದು ಗಂಡನಿಗೆ ಅಮೃತಾ ನೀಡುವ ಸಲಹೆಯಾಗಿದೆ. ‘ಅವರು ತಪ್ಪು ಮಾಡುತ್ತಿದ್ದಾರೆ ಎಂದು ಅನಿಸಿದರೆ ಅವರನ್ನು ತಿದ್ದಲು ಹಿಂದೇಟು ಹಾಕುವುದಿಲ್ಲ’ ಎಂದೂ ಅಮೃತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.