ADVERTISEMENT

ಗುಜರಾತಲ್ಲೂ ‘ಪದ್ಮಾವತಿ’ಗೆ ನಿಷೇಧ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ವಿಜಯಭಾಯಿ
ವಿಜಯಭಾಯಿ   

ಅಹಮದಾಬಾದ್‌: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಬಿಡುಗಡೆಗೆ ಗುಜರಾತ್‌ ಸರ್ಕಾರವೂ ನಿಷೇಧ ಹೇರಿದೆ.

‘ಚಿತ್ರದಲ್ಲಿ ಇತಿಹಾಸವನ್ನು ಬಿಂಬಿಸಿರುವ ರೀತಿಯ ಬಗ್ಗೆ ಕ್ಷತ್ರಿಯ ಮತ್ತು ರಜಪೂತ ಸಮುದಾಯದವರಲ್ಲಿ ಅಸಮಾಧಾನ ಇದೆ. ಅವರ ಭಾವನೆಗಳಿಗೆ ನಾವು ಗೌರವ ಕೊಡುತ್ತೇವೆ. ಚುನಾವಣೆಯೂ ಹತ್ತಿರದಲ್ಲಿರುವುದರಿಂದ ರಾಜ್ಯದಲ್ಲಿ ಯಾವುದೇ ವಿವಾದವನ್ನು ಸರ್ಕಾರ ಇಚ್ಛಿಸುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೂ ನಮ್ಮ ಜವಾಬ್ದಾರಿಯಾಗಿರುವುದರಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ವಿಜಯಭಾಯಿ ರೂಪಾಣಿ ಬುಧವಾರ ಹೇಳಿದ್ದಾರೆ.

‘ಚಿತ್ರದ ಕುರಿತಾಗಿ ಸೃಷ್ಟಿಯಾಗಿರುವ  ವಿವಾದ ಕೊನೆಯಾಗುವವರೆಗೆ ಚಿತ್ರದ ಮೇಲೆ ವಿಧಿಸಲಾಗಿರುವ ನಿರ್ಬಂಧ ಜಾರಿಯಲ್ಲಿರಲಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ತಾವು ಚಿತ್ರವನ್ನು ವೀಕ್ಷಿಸಿದ್ದೀರಾ ಎಂದು ಕೇಳಿದ್ದಕ್ಕೆ ‘ಅದರ ಅಗತ್ಯವಿಲ್ಲ’ ಎಂದು ರೂಪಾಣಿ ಉತ್ತರಿಸಿದ್ದಾರೆ.

‘ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಲವು ಜನರನ್ನು ಭೇಟಿ ಮಾಡಿದ್ದೇನೆ. ಚಿತ್ರವು ಅವರ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ. ಅವರ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದರು. ‘ಒಂದು ವೇಳೆ ಸೆನ್ಸಾರ್‌ ಮಂಡಳಿ ಅನುಮತಿ ನೀಡಿದರೂ, ನಾವು ಅನುಮತಿ ಕೊಡುವುದಿಲ್ಲ’ ಎಂದು ಶಿವರಾಜ್‌ ಸಿಂಗ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.