ADVERTISEMENT

ಗುಜರಾತ್‌ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಅಸಮಾಧಾನ ಹುಟ್ಟು ಹಾಕಿದ ಅಭ್ಯರ್ಥಿಗಳ ಪಟ್ಟಿ: ಭೀತಿ ಮೂಡಿಸಿದ ಆಡಳಿತ ವಿರೋಧಿ ಅಲೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಗುಜರಾತ್‌ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಗುಜರಾತ್‌ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ   

ಅಹಮದಾಬಾದ್‌/ ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯು 70 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಐ.ಕೆ. ಜಡೇಜಾ ಅವರ ಬೆಂಬಲಿಗರು ಪಕ್ಷದ ಪ್ರಧಾನ ಕಚೇರಿ ಮುಂಭಾಗ ಶನಿವಾರ ಘೋಷಣೆ ಕೂಗಿದ್ದಾರೆ. ಜಡೇಜಾ ಅವರು ಸೌರಾಷ್ಟ್ರದ ವಧ್ವಾನ್‌ ಮತ್ತು ಧ್ರಾಂಗಾಧ್ರಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಕ್ಷತ್ರಿಯ ಮುಖಂಡರಾಗಿರುವ ಜಡೇಜಾ ಅವರಿಗೆ ವಧ್ವಾನ್‌ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡದಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕ್ಷೇತ್ರದಿಂದ ಉದ್ಯಮಿ ಧಾನ್‌ಜಿ ಪಟೇಲ್‌ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.

ADVERTISEMENT

ಟಿಕೆಟ್‌ ಸಿಗದಿದ್ದಕ್ಕೆ ಬೇಸರಗೊಂಡು ಸೌರಾಷ್ಟ್ರದ ಮತ್ತೊಬ್ಬ ನಾಯಕ ಜೇತಭಾಯಿ ಸೋಲಂಕಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದಲಿತ ಸಮುದಾಯದ ಸೋಲಂಕಿ ಕಳೆದ ಚುನಾ‌‌ವಣೆಯಲ್ಲಿ 63,300 ಮತಗಳಿಂದ ಗೆದ್ದಿದ್ದರು.

ವಡೋದರಾ, ಸೌರಾಷ್ಟ್ರದ ಭರೂಚ್‌, ಮಹುವಾ, ಜಸ್ದಾನ್‌, ಅಮ್ರೇಲಿ ಸೇರಿದಂತೆ ಹಲವು ಕಡೆಗಳಲ್ಲಿ ಮುಖಂಡರು ರಾಜೀನಾಮೆ ನೀಡಿದ್ದಾರೆ ಮತ್ತು ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬೆದರಿಕೆಯನ್ನೂ ಈ ನಾಯಕರು ಒಡ್ಡಿದ್ದಾರೆ. ಅಸಮಾಧಾನಗೊಂಡಿರುವ ನಾಯಕರ ಮನವೊಲಿಕೆಗೆ ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮುಂದಾಗಿದ್ದಾರೆ.

ಆಡಳಿತ ವಿರೋಧಿ ಅಲೆ: ಮುಖ್ಯಮಂತ್ರಿ ವಿಜಯಭಾಯಿ ರೂಪಾಣಿ ಸೇರಿ ಕೆಲವು ಸಚಿವರು ಮತ್ತು ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದನ್ನು ಬಿಜೆಪಿಯ ನಾಯಕರು ಒಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ ಪಕ್ಷದ ವರ್ಚಸ್ಸನ್ನು ವೃದ್ಧಿಸಲು ಕಳೆದ ವರ್ಷ ಆನಂದಿ ಬೆನ್‌ ಪಟೇಲ್‌ ಅವರನ್ನು ಕೆಳಗಿಳಿಸಿ ಅಮಿತ್‌ ಷಾ ಅವರ ಆಪ್ತ ರೂಪಾಣಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆದರೆ, ಬಿಜೆಪಿಯ ನಿರೀಕ್ಷೆಯಂತೆ ಯಾವುದೂ ನಡೆದಿಲ್ಲ ಎಂಬುದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹಾಗಾಗಿ, ಪಕ್ಷದ ಮುಖಂಡರ ವಿರುದ್ಧ ಜನರು ತಾಳಿರುವ ಭಾವನೆ ಹೋಗಲಾಡಿಸಲು ಪ್ರಧಾನಿ ಮೋದಿ ಭಾರಿ ಪ್ರಚಾರ ನಡೆಸಬೇಕು ಎಂದು ಪಕ್ಷ ಬಯಸುತ್ತಿದೆ.

ಸಿ–ವೋಟರ್‌ ಸಮೀಕ್ಷೆಯ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸುವವರಲ್ಲಿ ಶೇ 21ರಷ್ಟು ಮಂದಿ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಭಾರಿ ಅಸಮಾಧಾನ ಹೊಂದಿದ್ದಾರೆ.

ಶೇ 25ರಷ್ಟು ಮಂದಿ ರೂಪಾಣಿ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 40ರಷ್ಟು ಮಂದಿ ಹಾಲಿ ಶಾಸಕರ ವಿರುದ್ಧವಾಗಿ ಮಾತನಾಡಿದ್ದಾರೆ. 12 ಲಕ್ಷ ಮಂದಿ ಹೊಸ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

‘ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರಕ್ಕೆ ಬಂದಾಗ, ಮೊದಲ ಬಾರಿ ಮತದಾನ ಮಾಡಲಿರುವ ಶೇ 60ರಷ್ಟು ಮಂದಿ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ’ ಎಂದು ಸಿ–ವೋಟರ್‌ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ನಿರ್ದೇಶಕ ಯಶವಂತ ದೇಶಮುಖ್‌ ಹೇಳಿದ್ದಾರೆ.

**

ಮೂವರು ಮುಖಂಡರು ಬಿಜೆಪಿಗೆ

ಅಹಮದಾಬಾದ್‌: ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಅವರ ಆಪ್ತರಾಗಿದ್ದ ಮತ್ತು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಚಿರಾಗ್‌ ಪಟೇಲ್‌ ಅವರು ಬಿಜೆಪಿಗೆ ಸೇರಿದ ಮರುದಿನವೇ ಸಮಿತಿಯ ಇನ್ನೂ ಮೂವರು ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೇತನ್‌ ಪಟೇಲ್‌, ಅಮರೀಷ್‌ ಪಟೇಲ್‌ ಮತ್ತು ಶ್ವೇತಾ ಪಟೇಲ್‌ ಶನಿವಾರ ಕಮಲ ಪಾಳಯಕ್ಕೆ ಸೇರಿದ್ದು, ಹಾರ್ದಿಕ್‌ ಪಟೇಲ್‌ ಅವರು ಮೀಸಲಾತಿ ಹೋರಾಟದ ನೆಪದಲ್ಲಿ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

**

7 ಕ್ಷೇತ್ರಗಳಲ್ಲಿ ಶರದ್‌ ಯಾದವ್‌ ಬಣ ಸ್ಪರ್ಧೆ

ನವದೆಹಲಿ: ಶರದ್‌ ಯಾದವ್‌ ನೇತೃತ್ವದ ಜೆಡಿಯು ಬಣ ಗುಜರಾತ್‌ನ ಏಳು ಕ್ಷೇತ್ರಗಳಲ್ಲಿ ‘ಆಟೊ ರಿಕ್ಷಾ’ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲಿದೆ.

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಶರದ್‌ ಬಣ, ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡ ಬಳಿಕ ಈ ನಿರ್ಧಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.