ADVERTISEMENT

ಚಿದಂಬರಂಗೆ ಬಿಜೆಪಿಯಿಂದ 18 ಪ್ರಶ್ನೆ

ಆರ್ಥಿಕ ಬೆಳವಣಿಗೆ, ಬೆಲೆ ಏರಿಕೆ ಬಗ್ಗೆ ಉತ್ತರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ದೇಶದ ಆರ್ಥಿಕ ಬೆಳವಣಿಗೆ, ಬೆಲೆ ಏರಿಕೆ, ಉದ್ಯೋಗ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿ­ಸಿದ 18 ಪ್ರಶ್ನೆಗಳಿಗೆ ಉತ್ತರ ನೀಡು­ವಂತೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬಿಜೆಪಿ ಕೇಳಿದೆ.
‘ಚಿದಂಬರಂ ದೇಶದ ಅರ್ಥ ವ್ಯವಸ್ಥೆಯನ್ನು ಅಧೋಗತಿಗೆ ಕೊಂಡೊ­ಯ್ದಿ­ದ್ದಾರೆ. ಅವರು ವಿನಾಶಕ ಎಂದೇ ನೆನಪಿನಲ್ಲಿ ಉಳಿಯುತ್ತಾರೆ’  ಎಂದು ಬಿಜೆಪಿ ಭಾನು­ವಾರ ಆರೋಪಿಸಿದೆ.

ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವ­ರಾಗಿದ್ದ ಬಿಜೆಪಿ ನಾಯಕ ಯಶ­ವಂತ್‌ ಸಿನ್ಹಾ, 18 ಪ್ರಶ್ನೆಗಳನ್ನು ಎತ್ತಿದ್ದು ಉತ್ತರಿಸುವಂತೆ ಚಿದಂಬರಂ ಅವರಿಗೆ  ಸವಾಲು ಹಾಕಿ­ದ್ದಾರೆ.

2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ, ಮೊದಲ 4 ವರ್ಷದ  ಅವಧಿ­­­­­­­ಯಲ್ಲಿ ಸಾಧಿ­­­ಸಿದ ಗರಿಷ್ಠ ಆರ್ಥಿಕ ಬೆಳವಣಿಗೆ ಪ್ರಮಾಣ  ಮೊದಲು ಅಧಿಕಾರದಲ್ಲಿದ್ದ ಎನ್‌ಡಿಎ ಆರ್ಥಿಕ ಸುಧಾರಣಾ ಕ್ರಮಗಳ ಪ್ರತಿಫಲವೇ ಹೊರತೂ ಯುಪಿಎ ಸಾಧನೆಯಂತೂ ಖಂಡಿತ ಅಲ್ಲ ಎಂದು ಸಿನ್ಹಾ ಹೇಳಿದ್ದಾರೆ.

‘ನಾವು ಬಿತ್ತಿದ ಬೆಳೆಯ ಫಸಲನ್ನು ನೀವು ಉಂಡಿದ್ದೀರಿ’ ಎಂದು ಲೇವಡಿ ಮಾಡಿರುವ ಅವರು, ‘ಕಳೆದ 10 ವರ್ಷಗಳ ಯುಪಿಎ ಅಧಿಕಾರಾಧಿ­ಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತ­ಗೊಂಡಿದೆ’ ಎಂದು ಆರೋಪಿಸಿದ್ದಾರೆ.

‘ಸತತ ಏಳು ತ್ರೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಶೇ 5ಕ್ಕಿಂತ ಕಡಿಮೆಗೆ ಕುಸಿದಿದೆ. ಗಣಿಗಾರಿಕೆ ಹಾಗೂ  ಉತ್ಪಾದನಾ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಂಡಿದ್ದು, ಸಮುದಾಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳ ಮೇಲೆ ಅನಗತ್ಯ ದುಂದು ವೆಚ್ಚ ಮಾಡಲಾಗಿದೆ’ ಎಂದು ಮಾಜಿ ಹಣಕಾಸು ಸಚಿವ ಆರೋಪಿಸಿದ್ದಾರೆ.

‘ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಚಿದಂಬರಂ ಘೋಷಿಸಿದ್ದೇ ತಡ  ಮಾರುಕಟ್ಟೆ ಮತ್ತು ಉದ್ಯಮ ಕ್ಷೇತ್ರದ ಜನರು ಸಂಭ್ರಮಪಟ್ಟರು. ಅಂದಿನಿಂದ ಡಾಲರ್‌ ಎದುರು ರೂಪಾಯಿ ಮೌಲ್ಯ ಗಣನೀಯವಾಗಿ ಹೆಚ್ಚಿದೆ’ ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ.

1999–2000ರ ಎನ್‌ಡಿಎ ಅಧಿ­ಕಾರ ಅವಧಿಯಲ್ಲಿ ಆರು ಕೋಟಿ ಉದ್ಯೋಗಾವ­ಕಾಶಗಳನ್ನು ಸೃಷ್ಟಿಸಲಾಗಿತ್ತು. ಆದರೆ, ಯುಪಿಎ ಅಧಿಕಾರ ಅವಧಿಯಲ್ಲಿ ಕೇವಲ 1.5 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.