ADVERTISEMENT

ಜನರ ಆಕ್ರೋಶ ಗ್ರಹಿಸಲಿಲ್ಲ

ಕಾಂಗ್ರೆಸ್‌ ಸೋಲಿಗೆ ಸೋನಿಯಾ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2014, 19:30 IST
Last Updated 24 ಮೇ 2014, 19:30 IST

ನವದೆಹಲಿ (ಐಎಎನ್‌ಎಸ್‌):  ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದೇ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಆತ್ಮವಿಮರ್ಶೆ ಮಾಡಿಕೊಂಡರು.

ಶನಿವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ಜನರಲ್ಲಿ ಆಕ್ರೋಶ ಮಡುಗಟ್ಟಿತ್ತು. ಅದನ್ನು  ಗ್ರಹಿಸಲು ಪಕ್ಷ ಸಂಪೂರ್ಣ ವಿಫಲವಾಯಿತು. ಜನರ ಆಕ್ರೋಶದ ಹಿಂದಿನ  ಕಾರಣಗಳನ್ನು ಪತ್ತೆಹಚ್ಚಿ  ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆಗೆ  ಭಾಷಣವನ್ನು  ಮೀಸಲಿಟ್ಟ ಅವರು,  ಪಕ್ಷದ ಸೋಲಿನ ಕುರಿತು ಬಹಿ­ರಂಗವಾಗಿ ಟೀಕಿಸುತ್ತಿರುವ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದರು. 

 ಚುನಾವಣೆಯಲ್ಲಿ ಪಕ್ಷಕ್ಕೆ ಆದ ಅನೀರಿಕ್ಷಿತ ಹಿನ್ನಡೆಯಿಂದ ತಕ್ಕ ಪಾಠ ಕಲಿಯಬೇಕಿದೆ. ಆತ್ಮವಿಮರ್ಶೆ ಮೂಲಕ ತಪ್ಪು­ಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ  ಎಂದು ಸೋನಿಯಾ ಪಕ್ಷದ ನಾಯಕರು ಮತ್ತು ಕಾರ್ಯ­ಕರ್ತರಿಗೆ ಕಿವಿಮಾತು ಹೇಳಿದರು. 

‘ಪಕ್ಷದ ಸೋಲು ನಿಜವಾಗಿಯೂ ನೋವು ತಂದಿದೆ. ಈ ಸೋಲು ನಮಗೊಂದು ಪಾಠವಾಗಬೇಕಿದೆ. ಈ ಬಗ್ಗೆ ವೈಯಕ್ತಿಕ ಮತ್ತು ಸಾಮೂಹಿಕ ನೆಲೆಗಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ’ ಎಂದು ಕಾಂಗ್ರೆಸ್‌ ಸಂಸದರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.  

‘ಜನರು ನಮ್ಮನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂರಿಸಿ­ದ್ದಾರೆ. ಅಂದರೆ ಅವರು ನಮಗೆ ಪ್ರಶ್ನೆ ಕೇಳುವ ಅಧಿಕಾರ ನೀಡಿದ್ದಾರೆ. ನಾವು ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕಿದೆ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು  ದೇಶದ ಅನೇಕ ಸಮಸ್ಯೆಗಳನ್ನು ಚರ್ಚೆಗೆ ಎತ್ತುವ ಅವಕಾಶ ನಮಗೆ ದೊರೆತಿದೆ’ ಎಂದರು. 

ಕಾಂಗ್ರೆಸ್‌ ಪಕ್ಷಕ್ಕೆ ಇಂಥ ಸೋಲು ಹೊಸದೇನೂ ಅಲ್ಲ. ಈ ಹಿಂದೆಯೂ ಪಕ್ಷ ಇಂತಹ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಬೂದಿ­ಯಿಂದ ಮರುಹುಟ್ಟು ಪಡೆಯುವ ಫಿನಿಕ್ಸ್‌ ಹಕ್ಕಿಯಂತೆ ಎದ್ದು ಬಂದಿದೆ ಎಂದು ಸಮಾಧಾನದ ಮಾತುಗಳನ್ನು ಆಡಿ­ದರು.

ಪಕ್ಷದ ಪುನಶ್ಚೇತನಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಯಾವುದೇ ಮುಲಾಜಿಲ್ಲದೇ ಕೈಗೊಳ್ಳುವಂತೆ  ಕಾಂಗ್ರೆಸ್‌ ಕಾರ್ಯಕಾರಿಣಿ ತಮಗೆ ಅಧಿಕಾರ ನೀಡಿದೆ ಎಂದು ಸೋನಿಯಾ ಇದೇ ವೇಳೆ ತಿಳಿಸಿದರು.

ಸಿಪಿಪಿ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ: ಇದೇ ಸಂದರ್ಭ­ದಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.  ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಹೆಸರನ್ನು ಸೂಚಿಸಿದರು. ಮೊಹಸಿನಾ ಕಿದ್ವಾಯಿ ಹಾಗೂ ಇತರರು ಅನುಮೋದಿಸಿದರು.

‘ಪ್ರಗತಿಪರ ಮತ್ತು ಜಾತ್ಯತೀತ ಶಕ್ತಿಗಳು ಒಗ್ಗೂಡಿ ಸಮರ್ಥ ವಿರೋಧ ಪಕ್ಷಗಳಾಗಿ ಕೆಲಸ ಮಾಡಲಿವೆ’ ಎಂದು ಸಿಪಿಪಿ ವಿಶ್ವಾಸ ವ್ಯಕ್ತಪಡಿಸಿತು. ಸೋನಿಯಾ ಮತ್ತು ರಾಹುಲ್‌ ಗಾಂದಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪುನಶ್ಚೇತನಗೊಳ್ಳಲಿದೆ ಎಂದು  ಅದು ಹೇಳಿತು.

ಮನಮೋಹನ್‌ ಸಿಂಗ್‌ ಎರಡು ದಶಕಗಳ ಕಾಲಕ್ಕೆ ದೇಶಕ್ಕೆ ಘನತೆ ಮತ್ತು ಗೌರವಯುತವಾದ ನಾಯಕತ್ವ ಮತ್ತು ಆಡಳಿತ ನೀಡಿದ್ದಾರೆ ಎಂದು  ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.