ADVERTISEMENT

ಜಿಎಸ್‌ಟಿ ದರ ನಿಗದಿ: ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ತೆರಿಗೆ ಪಾವತಿಸುವವರ ದೇಶವಾಗಲಿದೆ ಭಾರತ

ಏಜೆನ್ಸೀಸ್
Published 21 ಮೇ 2017, 10:25 IST
Last Updated 21 ಮೇ 2017, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಮಹತ್ವದ ಸಭೆಯಲ್ಲಿ ದರ ನಿಗದಿ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. 1,211 ಸರಕುಗಳಿಗೆ ನಾಲ್ಕು ಸ್ತರದಲ್ಲಿ ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ (0%, 5%, 12%, 18%).

ಜಿಎಸ್‌ಟಿ ವ್ಯಾಪ್ತಿಗೆ ಒಳಪಡದ ‘ಸಿನ್‌’ ಟ್ಯಾಕ್ಸ್‌ (ಮದ್ಯ, ತಂಬಾಕಿನಂಥ ಉತ್ಪನ್ನಗಳಿಗೆ ವಿಧಿಸಲಾಗುವ ತೆರಿಗೆ) ಅನ್ನೂ ಸೇರಿಸಿ ನೋಡಿದರೆ ದೇಶದಲ್ಲಿ ಒಟ್ಟು ಐದು ಸ್ತರಗಳಲ್ಲಿ ತೆರಿಗೆ ನಿಗದಿಯಾದಂತಾಗಿದೆ (0%, 5%, 12%, 18% ಮತ್ತು 28%). ಅಂದರೆ, ತೆರಿಗೆ ಪಾವತಿಯ ಮೇಲಿನ ಸ್ತರದ ಪ್ರಮಾಣ 28%. ಇದರಿಂದ ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ತೆರಿಗೆ ಪಾವತಿಸುವವರ ದೇಶವಾಗಲಿದೆ ಎಂದು ಫಸ್ಟ್‌ಪೋಸ್ಟ್‌ ವೆಬ್‌ಸೈಟ್ ವರದಿ ಮಾಡಿದೆ.

ಹೌದು, ಭಾರತದ ತೆರಿಗೆಯ ದರದ ಮೇಲಿನ ಸ್ತರದ ಪ್ರಮಾಣ (28%) ಬೇರೆ ದೇಶಗಳ ಮೇಲಿನ ಸ್ತರದ ತೆರಿಗೆ ದರ ನಿಗದಿಗೆ ಹೋಲಿಸಿದರೆ ಅತಿ ಹೆಚ್ಚು. ಇನ್ನು, ನಾಲ್ಕು ಸ್ತರದ ‌ಜಿಎಸ್‌ಟಿ ದರವನ್ನು ಮಾತ್ರ (18%) ಗಮನಿಸಿದರೂ ಭಾರತದಲ್ಲೇ ಹೆಚ್ಚಿನ ಪ್ರಮಾಣದ ತೆರಿಗೆ ಪಾವತಿಸಬೇಕಾಗುತ್ತದೆ. ಪರೋಕ್ಷ ತೆರಿಗೆ ಪಾವತಿ ಪ್ರಮಾಣ ಭಾರತದಲ್ಲೇ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಇತರ ರಾಷ್ಟ್ರಗಳ ತೆರಿಗೆ ಪ್ರಮಾಣದ ಜತೆ ಹೋಲಿಕೆ ಮಾಡಲಾಗಿದೆ.

ADVERTISEMENT

ಸೌದಿ ಅರೇಬಿಯಾದಲ್ಲಿ ಅನುಭೋಗಿ ತೆರಿಗೆ ವಿಧಿಸಲಾಗುತ್ತಿಲ್ಲ. ಸಿಂಗಾಪುರದಲ್ಲಿ ಶೇಕಡ 7ರ ಗುಣಮಟ್ಟದ ತೆರಿಗೆ ದರ ನಿಗದಿಪಡಿಸಲಾಗಿದೆ. ಸ್ವಿಜರ್ಲೆಂಡ್‌ನಲ್ಲೂ ಶೇಕಡ 8ರ ತೆರಿಗೆ ದರ ನಿಗದಿಪಡಿಸಲಾಗಿದ್ದು, ಹೋಟೆಲ್‌ ಉದ್ಯಮಕ್ಕೆ ಶೇಕಡ 4ರಷ್ಟು ಮಾತ್ರವೇ ತೆರಿಗೆ ವಿಧಿಸಲಾಗುತ್ತಿದೆ.

ತೆರಿಗೆ ವ್ಯಾಪ್ತಿಗೆ ಬರುವ ಎಲ್ಲ ಸರಕು ಮತ್ತು ಸೇವೆಗಳಿಗೆ ಆಸ್ಟ್ರೇಲಿಯಾದಲ್ಲಿ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ ಶೇಕಡ 10. ಇಂಡೊನೇಷ್ಯಾದಲ್ಲೂ ಶೇಕಡ 10ರ ತೆರಿಗೆ ದರ ನಿಗದಿಪಡಿಸಲಾಗಿದೆ. ಕೆಲವು ಸರಕುಗಳಿಗೆ ಮಾತ್ರ ಶೇಕಡ 15 ಮತ್ತು 5ರ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಇನ್ನು, ದಕ್ಷಿಣ ಕೊರಿಯಾದಲ್ಲಿ ನಿಗದಿಪಡಿಸಲಾಗಿರುವ ತೆರಿಗೆಯ ಪ್ರಮಾಣ ಶೇಕಡ 10.

ಶ್ರೀಮಂತ ರಾಷ್ಟ್ರ ಎಂದು ಕರೆಯಲಾಗುವ ಜಪಾನ್‌ನಲ್ಲಿ ವಿಧಿಸಲಾಗುತ್ತಿರುವ ತೆರಿಗೆಯ ಪ್ರಮಾಣ ಶೇಕಡ 8. ಇದೀಗ 2019ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಪಾನ್ ಸಹ ಜಿಎಸ್‌ಟಿ ಘೋಷಿಸಿದೆ. ಆದರೂ ಅಲ್ಲಿ ಜಾರಿಗೆ ಬರಲಿರುವ ತೆರಿಗೆಯ ಪ್ರಮಾಣ ಶೇಕಡ 10ರಷ್ಟಾಗಲಿದೆ.

ಎರಡುಸ್ತರದ ಜಿಎಸ್‌ಟಿ ದರ ನಿಗದಿಪಡಿಸಿರುವ ಕೆನಡಾದಲ್ಲಿ ಇದುವರೆಗೆ ಶೇಕಡ 5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ರಾಜ್ಯಗಳಿಗೆ ತೆರಿಗೆ ದರ ನಿಗದಿಪಡಿಸುವ ಅಧಿಕಾರ ನೀಡಲಾಗಿದ್ದು, ಎರಡು ರಾಜ್ಯಗಳು ಗರಿಷ್ಠ ಶೇಕಡ 10ರಷ್ಟು ತೆರಿಗೆ ವಿಧಿಸುತ್ತಿವೆ. ಇತರ ರಾಜ್ಯಗಳಲ್ಲಿ ಶೇಕಡ 5ರಿಂದ 15ರಷ್ಟು ಮಾತ್ರವೇ ತೆರಿಗೆ ವಿಧಿಸಲಾಗುತ್ತಿದೆ.

ಯುರೋಪ್‌ ರಾಷ್ಟ್ರಗಳಲ್ಲಿ ಜಿಎಸ್‌ಟಿ ಮೇಲ್‌ಸ್ತರದ ತೆರಿಗೆ ಪ್ರಮಾಣ ಶೇಕಡ 25ರಷ್ಟಿದೆ. ಅಲ್ಲಿಯೂ ಸ್ವೀಡನ್‌ನಂಥ ರಾಷ್ಟ್ರಗಳಲ್ಲಿ ಹೋಟೆಲ್‌ ಸೇರಿ ಆಹಾರೋದ್ಯಮಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ ಶೇಕಡ 12 ಮಾತ್ರ. ಸ್ವೀಡನ್‌ನಲ್ಲಿ ಸಿನಿಮೋದ್ಯಮಕ್ಕೆ ಶೇಕಡ 6ರಷ್ಟು ತೆರಿಗೆ ವಿಧಿಸಲಾಗುತ್ತಿದೆ. (ನಮ್ಮಲ್ಲಿ ಇದಕ್ಕೆ ಶೇಕಡ 28ರ ತೆರಿಗೆ ನಿಗದಿಪಡಿಸಲಾಗಿದೆ.)

ನೆದರ್ಲೆಂಡ್ಸ್‌ನಲ್ಲಿ ಶೇಕಡ 21ರ ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ. ದೇಶೀಯ ಪ್ರಯಾಣ, ಹೋಟೆಲ್ ಉದ್ಯಮ, ಮನರಂಜನೆ ಮತ್ತಿತರ ಉದ್ಯಮಗಳಿಗೆ ಕೇವಲ ಶೇಕಡ 6ರ ತೆರಿಗೆ ವಿಧಿಸಲಾಗುತ್ತಿದೆ.

ಗ್ರೀಕ್‌ನಲ್ಲಿ ಮೇಲ್‌ಸ್ತರದ ಜಿಎಸ್‌ಟಿ ದರ ಶೇಕಡ 24ರಷ್ಟು ನಿಗದಿಪಡಿಸಲಾಗಿದ್ದರೂ ಅನೇಕ ಜೀವನಾವಶ್ಯಕ ಸರಕು ಮತ್ತು ಸೇವೆಗಳಿಗೆ ಶೇಕಡ 13ರಿಂದ 6ರಷ್ಟು ಮಾತ್ರವೇ ತೆರಿಗೆ ವಿಧಿಸಲಾಗುತ್ತಿದೆ. ಚೀನಾದಲ್ಲಿ ಶೇಕಡ 17ರ ಜಿಎಸ್‌ಟಿ ದರ ನಿಗದಿ ಮಾಡಲಾಗಿದೆ.

ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲೂ ಶೇಕಡ 15ರ ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಮಾರಾಟ ತೆರಿಗೆ ಗರಿಷ್ಠ ಶೇಕಡ 17 ಇದ್ದರೆ, ನೇಪಾಳದಲ್ಲಿ ಶೇಕಡ 13ರ ತೆರಿಗೆ ನಿಗದಿಯಾಗಿದೆ.

ಹೆಚ್ಚಲಿದೆ ಪರೋಕ್ಷ ತೆರಿಗೆ: ಜಿಎಸ್‌ಟಿ ದರ ನಿಗದಿಯಿಂದ ತೆರಿಗೆ ಪಾವತಿಸುವವರ ಮೇಲಿನ ಹೊರೆ ಹೆಚ್ಚಾಗದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದರೂ ಸಾಮಾನ್ಯ ತೆರಿಗೆ ಪಾವತಿದಾರನ ಮೇಲಿನ ಹೊರೆ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಪರೋಕ್ಷ ತೆರಿಗೆಗಳು ಹೆಚ್ಚಾಗಲಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪರೋಕ್ಷೆ ತೆರಿಗೆಯ ಹೆಚ್ಚಳದಿಂದಾಗಿ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿ ಬರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.