ADVERTISEMENT

‘ತಲಾಖ್‌’ ಶೋಷಣೆ ನಿಲ್ಲಲಿ

ಪಿಟಿಐ
Published 16 ಏಪ್ರಿಲ್ 2017, 20:04 IST
Last Updated 16 ಏಪ್ರಿಲ್ 2017, 20:04 IST
‘ತಲಾಖ್‌’ ಶೋಷಣೆ ನಿಲ್ಲಲಿ
‘ತಲಾಖ್‌’ ಶೋಷಣೆ ನಿಲ್ಲಲಿ   

ಭುವನೇಶ್ವರ : ‘ತ್ರಿವಳಿ ತಲಾಖ್‌ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಅವರಿಗೆ ನ್ಯಾಯ ದೊರೆಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು.

ಆದರೆ, ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದಲ್ಲಿ ‘ಸಂಘರ್ಷ’ ಉಂಟು ಮಾಡುವ ಪ್ರಯತ್ನ ಮಾಡಬಾರದು ಎಂದು ಹೇಳಿದ ಅವರು ‘ಸಾಮಾಜಿಕ ಜಾಗೃತಿ ಮೂಲಕ ಇದನ್ನು ನಿಭಾಯಿಸಬೇಕು’ ಎಂದು ಕರೆ ನೀಡಿದರು.

ಭುವನೇಶ್ವರದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ ಪದ್ಧತಿಯಿಂದಾಗಿ ಸಂತ್ರಸ್ತರಾದವರನ್ನು ಭೇಟಿ ಮಾಡಿ ಅವರಲ್ಲಿ ಜಾಗೃತಿ ಮೂಡಿಸುವಂತೆ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಿದರು.
‘ಈ ಮಹಿಳೆಯರನ್ನು ಭೇಟಿ ಮಾಡುವ ಅಗತ್ಯವಿದೆ. ಆದರೆ, ಅವರನ್ನು ಪ್ರಚೋದಿಸಬಾರದು ಅಥವಾ ಅವರು ತಮ್ಮ ಧರ್ಮದ ವಿರುದ್ಧವಾಗಿ ಹೋಗುವಂತೆ ಮಾಡಬಾರದು’ ಎಂದು ಕಿವಿ ಮಾತು ಹೇಳಿದರು.

ADVERTISEMENT

ಕಾರ್ಯಕಾರಿಣಿ ನಂತರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು, ತ್ರಿವಳಿ ತಲಾಖ್‌ನಿಂದಾಗಿ ಮುಸ್ಲಿಂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಮೋದಿ ಹೇಳಿದ್ದನ್ನು  ದೃಢಪಡಿಸಿದರು.

‘ಅವರು (ಮೋದಿ) ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರು.  ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯಸಿಗಬೇಕು. ಯಾರೊಬ್ಬರನ್ನೂ ಶೋಷಿಸಬಾರದು ಎಂಬುದಾಗಿ ಪ್ರಧಾನಿ ಹೇಳಿದರು’ ಎಂದು ಗಡ್ಕರಿ ವಿವರಿಸಿದರು.

ಅಭಿವೃದ್ಧಿಗೆ ಬದ್ಧ: 2022ರ ಹೊತ್ತಿಗೆ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಮೂಲಕ ಹೊಸ ಭಾರತದ ನಿರ್ಮಾಣಕ್ಕಾಗಿ ‘ಉದ್ದ ಜಿಗಿತ’ ಮಾಡಲು ಇದು ಸೂಕ್ತ ಕಾಲ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ದೇಶದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಭಾಷಣದ ಉದ್ದಕ್ಕೂ  ಪಕ್ಷದ ‘ಪಿ2–ಜಿ2’ (pro-people, pro - active, good governance) ಕಾರ್ಯಸೂಚಿಗೆ ಹೆಚ್ಚು ಒತ್ತು ನೀಡಿದರು.

ವಾಗ್ದಾಳಿ: ಎಲೆಕ್ಟ್ರಾನಿಕ್‌ ಮತಯಂತ್ರಗಳ ವಿಶ್ವಾಸಾರ್ಹತೆ ವಿವಾದದ ಬಗ್ಗೆ ಪ್ರಸ್ತಾಪಿಸಿದ ಅವರು ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದರು.
ಮುಸ್ಲಿಮರ ಪರ: ಶೀಘ್ರದಲ್ಲಿ ಸಾಂವಿಧಾನಿಕ ಸ್ಥಾನಮಾನ ಪಡೆಯಲಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದಿಂದ ಹಿಂದುಳಿದ ಮುಸ್ಲಿಮರು ಹೆಚ್ಚು ಅನುಕೂಲ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಪಕ್ಷದ ಮುಖಂಡರಿಗೆ ಮೋದಿ ಅವರು ಸಲಹೆಯನ್ನೂ ನೀಡಿದರು.

ಕೈಬಿಡಲು ಸಾಧ್ಯವಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಲಖನೌ: ಮೂರು ಬಾರಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿಯನ್ನು ಕೈಬಿಡಬೇಕು ಎಂದು ವಿವಿಧ ವರ್ಗಗಳಿಂದ ಬಂದ ಬೇಡಿಕೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಿರಸ್ಕರಿಸಿದೆ.

ಆದರೆ, ‘ಒಂದೇ ಬಾರಿಗೆ ಮೂರು ಸಲ ತಲಾಖ್‌ ಹೇಳಿ’ ಪತ್ನಿಗೆ ವಿಚ್ಛೇದನ ನೀಡುವವರನ್ನು ಸಮಾಜ ಬಹಿಷ್ಕರಿಸಬೇಕು ಎಂದು ಮಂಡಳಿ ಕರೆ ನೀಡಿದೆ.
‘ತಲಾಖ್‌’ ಪದ್ಧತಿಯು ಷರಿಯಾಕ್ಕೆ (ಇಸ್ಲಾಮಿಕ್ ಕಾನೂನು) ಅನುಗುಣವಾಗಿದೆ ಎಂದು ಹೇಳಿರುವ ಮಂಡಳಿ, ತಲಾಖ್‌ ಹೇಳುವಾಗ ಅನುಸರಿಸಬೇಕಾದ ನೀತಿಸಂಹಿತೆ ಯೊಂದನ್ನು ರೂಪಿಸಿದೆ.

ಭಾನುವಾರ ಮುಕ್ತಾಯಗೊಂಡ ಮಂಡಳಿಯ ಕಾರ್ಯಕಾರಿ ಸಮಿತಿಯ ಎರಡು ದಿನಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 
ಮುಸ್ಲಿಂ ಮಹಿಳೆಯರಲ್ಲಿ ಕೆಲವರು ತಲಾಖ್‌ ಪದ್ಧತಿಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಂಡಳಿ ಅತೃಪ್ತಿ ವ್ಯಕ್ತಪಡಿಸಿದ್ದು, ‘ಇದು ಸಾಂಸ್ಕೃತಿಕ ದಾಳಿ’ ಎಂದು ಹೇಳಿದೆ.

ವಿಚ್ಛೇದನವು ಷರಿಯಾಕ್ಕೆ ಅನುಗುಣವಾಗಿ ನಡೆದಿರದಿದ್ದರೆ, ಆ ಪ್ರಕರಣಗಳಲ್ಲಿ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡುವುದಾಗಿ ಅದು ಹೇಳಿದೆ.
ಆಸ್ತಿ ಹಕ್ಕು ಕೊಡಿ: ಹೆಣ್ಣು ಮಕ್ಕಳ ಪಾಲಕರು ಮದುವೆ ಮಾಡಿಕೊಡುವ ಸಂದರ್ಭದಲ್ಲಿ ವರದಕ್ಷಿಣೆ ನೀಡುವ ಬದಲು ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಕೊಡಬೇಕು ಎಂದು ಹೇಳಿದೆ.

‘ಗೋಹತ್ಯೆಯಿಂದ ದೂರವಿರಿ’
ಗೋಹತ್ಯೆ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ. ಮುಸ್ಲಿಮರು ಗೋಹತ್ಯೆಯಿಂದ ದೂರವಿರಬೇಕು ಎಂದು ತೀರ್ಮಾನಿಸಲಾಗಿದೆ.
‘ಕೋರ್ಟ್‌ನಲ್ಲಿ ಇತ್ಯರ್ಥವಾಗಲಿ’
ರಾಮ ಜನ್ಮಭೂಮಿ – ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಸಮ್ಮತಿ ಇಲ್ಲ. ಈ ವಿವಾದದ ಬಗ್ಗೆ ‘ಸುಪ್ರೀಂ’  ನೀಡುವ ತೀರ್ಪಿಗೆ ಬದ್ಧವಾಗಿರುವುದಾಗಿ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.