ADVERTISEMENT

ದಾದ್ರಿ, ಗುಲಾಮ್ ಅಲಿ ಘಟನೆಗಳು ದುರದೃಷ್ಟಕರ

ಮೌನ ಮುರಿದ ಪ್ರಧಾನಿ ಮೋದಿ; ಘಟನೆಗಳಿಗೂ ಕೇಂದ್ರ ಸಂಬಂಧವೇನು?

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2015, 7:15 IST
Last Updated 14 ಅಕ್ಟೋಬರ್ 2015, 7:15 IST

ಕೋಲ್ಕತ್ತ (ಪಿಟಿಐ): ದಾದ್ರಿ ಪ್ರಕರಣ ಹಾಗೂ ಗುಲಾಮ್ ಅಲಿ ಸಂಗೀತ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಘಟನೆಗಳ ಬಗ್ಗೆ  ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ಮೌನ ಮುರಿದಿದ್ದಾರೆ.

ಎರಡೂ ಘಟನೆಗಳು ‘ದುರದೃಷ್ಟಕರ’ ಎಂದು ಪ್ರಧಾನಿ ನುಡಿದ್ದಾರೆ. ಆದರೆ, ಈ ಘಟನೆಗಳಲ್ಲಿ  ತಮ್ಮ ಸರ್ಕಾರದ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರದ ತಪ್ಪೇನು?: ‘ದಾದ್ರಿ ಪ್ರಕರಣ ಅಥವಾ ಪಾಕಿಸ್ತಾನಿ ಗಾಯಕರಿಗೆ ವಿರೋಧ ವ್ಯಕ್ತಪಡಿಸಿದ ಘಟನೆಗಳು ಅನಪೇಕ್ಷಣೀಯ ಹಾಗೂ ದುರದೃಷ್ಟಕರ. ಆದರೆ ಈ ಪ್ರಕರಣಗಳಿಗೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ’ ಎಂದು ಆನಂದ್ ಬಜಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರಶ್ನಿಸಿದ್ದಾರೆ.

ಇಂಥ ಘಟನೆಗಳ ಬಗ್ಗೆ ತಮ್ಮ ಪಕ್ಷದ ನಿಲುವಿನ ಕುರಿತು ಮಾತನಾಡಿರುವ ಮೋದಿ, ‘ಇಂಥ ಘಟನೆಗಳಿಗೆ ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ. ಇಂಥ ಘಟನೆಗಳ ಮೂಲಕ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಕೋಮುವಾದ ಬೆದರಿಕೆ ಒಡ್ಡುತ್ತಿದ್ದಾರೆ.  ಆದರೆ, ಅವರೇ ಸ್ವತಃ ಧ್ರುವೀಕರಣ ರಾಜಕೀಯ ಮಾಡುತ್ತಿಲ್ಲವೇ?’ ಎಂದು ಕೇಳಿದ್ದಾರೆ.

‘ಹಿಂದೆಯೂ ಇಂಥ ಚರ್ಚೆಗಳು ನಡೆದಿವೆ. ಬಿಜೆಪಿ ಯಾವಾಗಲೂ ಮಿಥ್ಯಾ ಜಾತ್ಯತೀತೆಯನ್ನು ವಿರೋಧಿಸಿದೆ. ಇದೀಗ ಮತ್ತೆ ದುರದೃಷ್ಟಕರ ಸಾಮಾಜಿಕ ಅಸ್ವಸ್ಥತೆಯ ಮುಖವಾಡದಲ್ಲಿ ಈ ಚರ್ಚೆ ನಡೆಯುತ್ತಿದೆ, ಈ ವಾಗ್ವಾದವನ್ನು ಮಾತುಕತೆ ಹಾಗೂ ಚರ್ಚೆಯ ಮೂಲಕ ಪರಿಹರಿಸಬಹುದು’ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.

ಹಿನ್ನೆಲೆ: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಶೇಖರಿಸಿಟ್ಟಿದ್ದಾರೆಂದು ಶಂಕಿಸಿ ವ್ಯಕ್ತಿಯೊಬ್ಬರನ್ನು ಕೊಂದ ಪ್ರಕರಣ ದೇಶದಾದ್ಯಂತ ಆಕ್ರೋಶ, ತಲ್ಲಣ ಸೃಷ್ಟಿಸಿತ್ತು. ಅದೇ ರೀತಿ ಪಾಕಿಸ್ತಾನಿ ಗಾಯಕ ‌ಗುಲಾಮ್ ಅಲಿ ಅವರ  ಸಂಗೀತ ಕಾರ್ಯಕ್ರಮಗಳಿಗೆ ಮುಂಬೈ ಹಾಗೂ ಪುಣೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಕಾರ್ಯಕ್ರಮವೂ ರದ್ದಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಮೌನ ಮುರಿದಿರಲಿಲ್ಲ. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಕೇಳಿ ಬಂದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.